ಬಹಾಯಿ ಧರ್ಮ ಸ್ಥಾಪಕರ ಜನ್ಮ ಜಯಂತಿಯ ದ್ವಿಶತಮಾನೋತ್ಸವ
ಮಂಗಳೂರು, ಅ.21: ಮಾನವರು ಭೌತಿಕ ಸಂಪತ್ತಿನ ಹಿಂದೆ ಓಡುತ್ತಿದ್ದಾರೆಯೇ ವಿನ: ಆಧ್ಯಾತ್ಮಿಕ ಸಂಪತ್ತಿನ ಕಡೆಗೆ ಗಮನಗರಿಸುತ್ತಿಲ್ಲ. ಐಹಿಕ ಸಂಪತ್ತಿನ ಜತೆಗೆ ಆಧ್ಯಾತ್ಮಿಕ ಸಂಪತ್ತಿನ ಮೂಲಕ ಜೀವನದಲ್ಲಿ ಸಮತೋಲನ ಕಾಪಾಡಿಕೊಳ್ಳುವುದು ಬಹಳ ಮುಖ್ಯ ಎಂದು ದುಬೈನ ಬಿಎಂಎಸ್ ಯೋಗ ಕೇಂದ್ರದ ಅಧ್ಯಕ್ಷ ಲೋಕೇಶ್ ಪುತ್ರನ್ ಹೇಳಿದರು.
ಬಹಾಯಿ ಧರ್ಮ ಸ್ಥಾಪಕ ಬಹಾಉಲ್ಲಾ ಅವರ ಜನ್ಮ ಜಯಂತಿಯ ದ್ವಿಶತಮಾನೋತ್ಸವ ಸಂಭ್ರಮಾಚರಣೆ ಪ್ರಯುಕ್ತ ನಗರದ ಎಸ್‌ಡಿಎಂ ಕಾನೂನು ಕಾಲೇಜಿನ ಸಭಾಂಗಣದಲ್ಲಿ ಶನಿವಾರ ನಡೆದ ವಿಶ್ವ ಶಾಂತಿ ಹಾಗೂ ಭಾತೃತ್ವದ ಶೃಂಗ ಸಭೆಯಲ್ಲಿ ‘ಬಹಾ ಸ್ಮರಣಾಮೃತ’ ಧ್ವನಿ ಸುರುಳಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಪ್ರಾಸ್ತಾವಿಕ ಮಾತುಗಳನ್ನಾಡಿದ ಬಸ್ತಿ ಗಣೇಶ್ ಶೆಣೈ, ಮಾನವ ಜನಾಂಗದ ಏಕತೆಯೇ ಎಲ್ಲ ಧರ್ಮಗಳ ತಳಹದಿ. ಮಾನವ ಜನಾಂಗ ಒಂದೇ ಎಂಬುವುದಕ್ಕೆ ಬಹಾಯಿ ಧರ್ಮ ಒತ್ತು ನೀಡುತ್ತದೆ. ಬಹಾಯಿ ಧರ್ಮದಲ್ಲಿ ಶ್ರೇಣಿಕೃತ ವರ್ಗ ವ್ಯವಸ್ಥೆಯಿಲ್ಲ. ಹೆಣ್ಣು-ಗಂಡು ಎಂಬ ಅಸಮಾನತೆ ಇಲ್ಲ. ವಿಶ್ವದಲ್ಲಿ 6 ಮಿಲಿಯ ಜನರು ಬಹಾಯಿ ಧರ್ಮದ ಅನುಯಾಯಿಗಳಾಗಿದ್ದಾರೆ. ಭಾರತದಲ್ಲಿ 2 ಮಿಲಿಯ ಜನರು ಬಹಾಯಿ ಧರ್ಮ ಅನುಸರಿಸುತ್ತಿದ್ದಾರೆ ಎಂದರು.
ಪತ್ರಕರ್ತ ವಾಲ್ಟರ್ ನಂದಳಿಕೆ ಕಾರ್ಯಕ್ರಮ ಉದ್ಘಾಟಿಸಿದರು. ಲೆಕ್ಕ ಪರಿಶೋಧಕ ಎಸ್.ಎಸ್. ನಾಯಕ್ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಎಸ್‌ಡಿಎಂ ಕಾಲೇಜು ಆಫ್ ಬ್ಯುಸಿನೆಸ್ ಮೆನೇಜ್‌ಮೆಂಟ್‌ನ ನಿರ್ದೇಶಕ ಡಾ. ದೇವರಾಜ್ ಕೆ., ಚಲನಚಿತ್ರ ನಟ, ನಿರ್ದೇಶಕ ಆಶು ಬೆದ್ರ, ಮೂಡುಬಿದಿರೆ ಜೈನ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಮುನಿರಾಜ ರೆಂಜಾಳ, ಮಂಗಳೂರು ಗುರುದ್ವಾರದ ಪೂಜಾರಿ ಜ್ಞಾನಿ ಪರ್ವಿನ್ ಸಿಂಗ್, ಬಿಎಂಎಸ್‌ಐಟಿಎಂ ಅಸೋಸಿಯೇಟ್ ಪ್ರೊಫೆಸರ್ ಡಾ. ಸಿ.ಎಸ್. ಮಾಲಾ, ಮಂಗಳೂರಿನ ಲೆಕ್ಕಪರಿಶೋಧಕಿ ರೋಶೆಲ್ ಡಿಸಾ, ಅಶೋಕ್ ಕುಮಾರ್ ಕಾಸರಗೋಡು, ಯಶಸ್ವಿನಿ ಅಮೀನ್ ಮುಂತಾದವರು ಉಪಸ್ಥಿತರಿದ್ದರು.