ಒತ್ತಡ, ಕೊರತೆಗಳ ನಡುವೆ ಪೊಲೀಸರಿಂದ ಕರ್ತವ್ಯ: ಡಿಸಿ ಪ್ರಿಯಾಂಕ

Update: 2017-10-21 12:36 GMT

ಉಡುಪಿ, ಅ.21: ಪೊಲೀಸ್ ಕರ್ತವ್ಯ ಹಾಗೂ ಜವಾಬ್ದಾರಿ ಬಗ್ಗೆ ಟೀಕೆ ಮಾಡುವ ಮೊದಲು ಅವರಿಗೆ ಅವುಗಳನ್ನು ನಿಬಾಯಿಸಲು ಎಷ್ಟು ಶಕ್ತಿ ನೀಡಿ ದ್ದೇವೆ ಎಂಬುದರ ಬಗ್ಗೆ ಚಿಂತನೆ ಮಾಡಬೇಕು. ಒತ್ತಡ ಹಾಗೂ ಕೊರತೆಗಳ ನಡುವೆ ಪೊಲೀಸರು ಕೆಲಸ ಮಾಡುವ ಸ್ಥಿತಿ ಇದೆ ಎಂದು ಉಡುಪಿ ಜಿಲ್ಲಾಧಿ ಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಹೇಳಿದ್ದಾರೆ.

ಉಡುಪಿ ಚಂದು ಮೈದಾನ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಕೇಂದ್ರ ಸ್ಥಾನದಲ್ಲಿ ಶನಿವಾರ ನಡೆದ ಪೊಲೀಸ್ ಹುತಾತ್ಮರ ದಿನಾಚರಣೆಯಲ್ಲಿ ಹುತಾತ್ಮ ಪೊಲೀಸ್ ಪ್ರತಿಮೆಗೆ ಪುಷ್ಪ ಗುಚ್ಛ ಸಮುರ್ಪಣೆ ಮಾಡಿ ಅವರು ಮಾತನಾಡುತಿದ್ದರು.

ಪೊಲೀಸರು ತಮ್ಮ ಜೀವವನ್ನು ತ್ಯಾಗ ಮಾಡಿ ಜನರಿಗೆ ಉತ್ತಮ ಬದುಕನ್ನು ಕಟ್ಟಿಕೊಟ್ಟಿದ್ದಾರೆ. ಪೊಲೀಸರಿಗೆ ಅಗತ್ಯ ಇರುವ ವ್ಯವಸ್ಥೆಗಳಲ್ಲಿ ಶೇ.50ರಷ್ಟು ಪೂರೈಕೆ ಮಾಡಿದರೂ ಕೂಡ ನೆಮ್ಮದಿಯಿಂದ ಕರ್ತವ್ಯ ನಿರ್ವಹಿಸಬಹುದಾಗಿದೆ. ಸರಕಾರ ಪೊಲೀಸರಿಗೆ ಸಾಕಷ್ಟು ಸವಲತ್ತುಗಳನ್ನು ನೀಡುತ್ತಿದ್ದರೆ ದೇಶದಲ್ಲಿ ಅವರ ಮರಣದ ಸಂಖ್ಯೆಯನ್ನು ಕಡಿಮೆ ಮಾಡಬಹುದಿತ್ತು ಎಂದರು.

ಅಮೆರಿಕಾದಲ್ಲಿ ಜನಸಾಮಾನ್ಯರ ಸಮಸ್ಯೆ ಆಲಿಸಲು ಪ್ರತ್ಯೇಕ ಹೆಲ್ಫ್‌ಲೈನ್ ಇರುವಾಗೆ ಭಾರತದಲ್ಲಿ ಇಲ್ಲ. ರಸ್ತೆ, ಕೌಟುಂಬಿಕ ಸಮಸ್ಯೆ ಸೇರಿದಂತೆ ಯಾವುದೇ ದೂರುಗಳಿದ್ದರೂ ಜನ ಪೊಲೀಸ್ ಠಾಣೆೆಗೆ ಹೋಗುತ್ತಾರೆ. ಹಾಗಾಗಿ ಪೊಲೀಸರ ಬಗ್ಗೆ ಜನರಿಗೆ ತಪ್ಪು ಅಭಿಪ್ರಾಯ ಮೂಡುತ್ತಿದೆ ಎಂದು ಅವರು ತಿಳಿಸಿದರು.

ಪೊಲೀಸ್ ಠಾಣೆಗಳಲ್ಲಿ ಮಹಿಳೆಯರ ದೂರುಗಳನ್ನು ದಾಖಲಿಸಲು ವಿಳಂಬ ಮಾಡುವ ಕುರಿತು ಆರೋಪಗಳು ಕೇಳಿಬರುತ್ತಿವೆ. ಹಾಗಾಗಿ ಮಹಿಳೆಯರ ದೂರಿಗೆ ತಕ್ಷಣ ಸ್ಪಂದಿ ಸುವ ಕೆಲಸ ಆಗಬೇಕು. ಆ ಮೂಲಕ ಪೊಲೀಸರು ಜನಸ್ನೇಹಿ ಆಗಬೇಕು. ಜಿಲ್ಲೆಯ ಸರಕಾರಿ ಇಲಾಖೆಗಳ ನಡುವೆ ಸಮನ್ವಯತೆ ಕಾಪಾಡುವುದರಿಂದ ನೆಮ್ಮದಿಯ ವಾತಾವರಣ ನಿರ್ಮಿಸಲು ಸಾಧ್ಯ ಎಂದು ಅವರು ಅಭಿಪ್ರಾಯ ಪಟ್ಟರು.

ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಸಂಜೀವ ಎಂ.ಪಾಟೀಲ್ 2016ರ ಆ.1ರಿಂದ 2017ರ ಸೆ.31ರವರೆಗೆ ದೇಶದಲ್ಲಿ ಹುತಾತ್ಮರಾದ 370 (ಕರ್ನಾಟಕ 12 ಮಂದಿ) ಮಂದಿ ಪೊಲೀಸರ ನಾಮ ಸ್ಮರಣೆ ಮಾಡಿದರು. ಪರೇಡ್ ಕಮಾಂಡರ್ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಪೊಲೀಸ್ ನಿರೀಕ್ಷಕ ರಾಘವೇಂದ್ರ ಆರ್. ಪರೇಡ್ ನೇತೃತ್ವ ವಹಿಸಿದ್ದರು. ಪೊಲೀಸ್ ಕಂಟ್ರೋಲ್ ರೂಂನ ಬಿ.ಮನಮೋಹನ ರಾವ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News