ಶರದ್ ಬಣದಿಂದ ಪಕ್ಷದ ಚುನಾವಣೆಯ ಪ್ರಕಟಣೆ ದೊಡ್ಡ ತಮಾಷೆ: ಜೆಡಿಯು ಟೀಕೆ

Update: 2017-10-22 12:47 GMT

ಪಾಟ್ನಾ,ಅ.22: ಮುಂದಿನ ವರ್ಷದ ಮಾರ್ಚ್‌ನಲ್ಲಿ ಪಕ್ಷದ ಹುದ್ದೆಗಳಿಗೆ ಚುನಾವಣೆ ನಡೆಸುವುದಾಗಿ ಶರದ್ ಯಾದವ್ ನೇತೃತ್ವದ ಬಂಡುಕೋರ ಬಣವು ಪ್ರಕಟಿಸಿರುವುದು ಹಾಸ್ಯಾಸ್ಪದ ಮತ್ತು ದೊಡ್ಡ ತಮಾಷೆಯಾಗಿದೆ ಎಂದು ಜೆಡಿಯು ರವಿವಾರ ಬಣ್ಣಿಸಿದೆ.

ಇಲ್ಲಿ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಬಿಹಾರ ಜೆಡಿಯು ಘಟಕದ ಅಧ್ಯಕ್ಷ ವಶಿಷ್ಠ ನಾರಾಯಣ ಸಿಂಗ್ ಅವರು, ಜನರಲ್ಲಿ ಗೊಂದಲವನ್ನು ಸೃಷ್ಟಿಸಲು ಯಾದವ್ ಪಾಳಯವು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು.

ಯಾದವ್ ಬಳಗದ ಚುನಾವಣಾ ಪ್ರಕಟಣೆಯು ಹಾಸ್ಯಾಸ್ಪದವಾಗಿದೆ. ಪಕ್ಷದ ಎಲ್ಲ ಕಾರ್ಯಕರ್ತರು ಮತ್ತು ಶಾಸಕರು ಜೆಡಿಯು ರಾಷ್ಟ್ರೀಯ ಅಧ್ಯಕ್ಷ ನಿತೀಶ ಕುಮಾರ್ ಅವರ ಜೊತೆಗಿದ್ದಾರೆ ಎನ್ನುವುದು ಮತ್ತೆ ಮತ್ತೆ ಸಾಬೀತಾಗಿದೆ. ಅವರು ಜನತೆಯಲ್ಲಿ ಗೊಂದಲ ಮೂಡಿಸಲು ಪ್ರಯತ್ನಿಸುತ್ತಿದ್ದಾರೆ ಎಂದರು.

ನಿತೀಶ್ ಕುಮಾರ್ ಅವರು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಎನ್‌ಡಿಎ ಸೇರಿದ್ದರ ವಿರುದ್ಧ ಸಿಡಿದೆದ್ದಿರುವ ಯಾದವ ಅವರು ಕಾಂಗ್ರೆಸ್ ಮತ್ತು ಪ್ರತಿಪಕ್ಷ ಗಳೊಂದಿಗೆ ಜೋಡಿಸಿದ್ದಾರೆ.

ಯಾದವ್ ಅವರು ಶನಿವಾರ ದಿಲ್ಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಪಕ್ಷದ ಹುದ್ದೆಗಳಿಗೆ ಚುನಾವಣೆಯು ಮಾ.11ರಂದು ನಡೆಯಲಿದೆ ಎಂದು ಪ್ರಕಟಿಸಿದ್ದರು. ರಾಜ್ಯ ಜೆಡಿಯು ಘಟಕಗಳ ಅಧ್ಯಕ್ಷರ ಪಟ್ಟಿಯೊಂದನ್ನೂ ಅವರು ಬಿಡುಗಡೆಗೊಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News