ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರನ್ನು ತಳ್ಳಿದ ಸಿಎಂ!
ಮಂಗಳೂರು, ಅ.22: ಬಂಟ್ವಾಳ ಮತ್ತು ಧರ್ಮಸ್ಥಳದಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ರವಿವಾರ ಪೂರ್ವಾಹ್ನ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದ.ಕ.ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಅವರನ್ನು ತಳ್ಳಿರುವ ವೀಡಿಯೊವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಭಾರೀ ಚರ್ಚೆಯಾಗುತ್ತಿದೆ.
ಈ ಬಗ್ಗೆ ಕಾಂಗ್ರೆಸ್ ಪಕ್ಷದೊಳಗಿರುವ ಮಿಥುನ್ ರೈ ಪರ ಮತ್ತು ವಿರೋಧಿಗಳಲ್ಲದೆ ಇತರ ಪಕ್ಷೀಯರು ಕೂಡ ಅಣಕವಾಡುತ್ತಿರುವುದು ಕಂಡು ಬರುತ್ತಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸ್ವಾಗತಿಸಲು ಮೂಡುಬಿದಿರೆ ಕ್ಷೇತ್ರದ ಶಾಸಕ ಹಾಗು ಮಾಜಿ ಸಚಿವ ಅಭಯಚಂದ್ರ ಜೈನ್ ಮತ್ತು ಈ ಕ್ಷೇತ್ರದ ಮೇಲೆ ಕಣ್ಣಿಟ್ಟಿರುವ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಿಥುನ್ ರೈ ಒಂದೆಡೆ ತಮ್ಮ ಬೆಂಬಲಿಗರೊಂದಿಗೆ ನಿಂತಿದ್ದರೆ, ಇನ್ನೊಂದೆಡೆ ವಿಧಾನ ಪರಿಷತ್‌ನ ಸರಕಾರಿ ಮುಖ್ಯ ಸಚೇತಕ ಐವನ್ ಡಿಸೋಜ ಮತ್ತವರ ಬೆಂಬಲಿಗರು ಹುಲಿ ವೇಷಧಾರಿ ತಂಡದೊಂದಿಗೆ ಅಣಿಯಾಗಿದ್ದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ವಿಮಾನ ನಿಲ್ದಾಣಕ್ಕೆ ಆಗಮಿಸಿದಾಗ ಅಭಯಚಂದ್ರ ಜೈನ್ ಮತ್ತು ಐವನ್ ಡಿಸೋಜ ಸ್ವಾಗತಿಸಲು ಮುಂದಾದರು. ಇಬ್ಬರು ನಾಯಕರೊಂದಿಗೆ ಬೆಂಬಲಿಗರೂ ಮುಖ್ಯಮಂತ್ರಿಯನ್ನು ಸುತ್ತುವರಿಯಲು ಮುನ್ನುಗ್ಗಿದರು. ಈ ನೂಕಾಟದಲ್ಲಿ ಮುಂಚೂಣಿಯಲ್ಲಿದ್ದ ಮಿಥುನ್ ರೈ ಅವರನ್ನು ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಎದೆಗೆ ಕೈ ಇಕ್ಕಿ ತಳ್ಳುತ್ತಿರುವ ವೀಡಿಯೊ ವೈರಲ್ ಆಗಿದೆ. ಅಷ್ಟೇ ಅಲ್ಲ, ಮುಖ್ಯಮಂತ್ರಿಯ ಬೆಂಗಾವಲುಗಾರರು ಕೂಡ ಮಿಥುನ್ ರೈ ಅವರನ್ನು ತಳ್ಳಿ ಹಿಂದಕ್ಕೆ ಸರಿಸಿರುವುದು ಇದೀಗ ವ್ಯಾಪಕ ಚರ್ಚೆಗೆ ಕಾರಣವಾಗಿದೆ.