ಭಾರತದ ಮಡಿಲಿಗೆ ಮೂರನೆ ಬಾರಿ ಹಾಕಿ ಏಷ್ಯಾಕಪ್

Update: 2017-10-22 13:30 GMT

ಢಾಕಾ, ಅ.22: ಮಲೇಷ್ಯಾ ತಂಡವನ್ನು 2-1 ಗೋಲುಗಳ ಅಂತರದಿಂದ ಮಣಿಸಿದ ಭಾರತದ ಪುರುಷರ ಹಾಕಿ ತಂಡ ಮೂರನೆ ಬಾರಿ ಪ್ರತಿಷ್ಠಿತ ಏಷ್ಯಾಕಪ್‌ನ್ನು ಮುಡಿಗೇರಿಸಿಕೊಂಡಿದೆ.

ರವಿವಾರ ನಡೆದ ಫೈನಲ್ ಹಣಾಹಣಿಯಲ್ಲಿ 3ನೆ ನಿಮಿಷದಲ್ಲಿ ರಮಣ್‌ದೀಪ್ ಸಿಂಗ್ ಭಾರತಕ್ಕೆ 1-0 ಮುನ್ನಡೆ ಒದಗಿಸಿಕೊಟ್ಟರು. 29ನೆ ನಿಮಿಷದಲ್ಲಿ ಗೋಲು ಬಾರಿಸಿದ ಲಲಿತ್ ಉಪಾಧ್ಯಾಯ ಭಾರತದ ಮುನ್ನಡೆಯನ್ನು 2-0ಗೆ ವಿಸ್ತರಿಸಿದರು. ಆಕಾಶ್‌ದೀಪ್ ಸಿಂಗ್‌ರಿಂದ ಚೆಂಡನ್ನು ಪಡೆದ ಗುರ್ಜಂತ್ ಸಿಂಗ್ ಅವರು ಲಲಿತ್ ಉಪಾಧ್ಯಾಯಗೆ ಪಾಸ್ ಮಾಡಿದರು. ಯಾವುದೇ ತಪ್ಪು ಮಾಡದ ಲಲಿತ್ ಚೆಂಡನ್ನು ಸುರಕ್ಷಿತವಾಗಿ ಗುರಿ ತಲುಪಿಸಿದರು. 50ನೆ ನಿಮಿಷದಲ್ಲಿ ಶಾಹ್ರಿಲ್ ಸಾಬ್ ನೆರವಿನಿಂದ ಮಲೇಷ್ಯಾ ತಂಡ ಏಕೈಕ ಗೋಲು ಬಾರಿಸಿತು.

 ಶನಿವಾರ ನಡೆದಿದ್ದ ಸೆಮಿ ಫೈನಲ್‌ನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಮಣಿಸಿ ಫೈನಲ್‌ಗೆ ತಲುಪಿದ್ದ ಭಾರತ ಟೂರ್ನಿಯಲ್ಲಿ ಅಜೇಯ ದಾಖಲೆಯನ್ನು ಕಾಯ್ದುಕೊಂಡಿದ್ದು 10 ವರ್ಷಗಳ ಬಳಿಕ ಏಷ್ಯಾಕಪ್‌ನ್ನು ಗೆದ್ದುಕೊಂಡಿದೆ. 2007ರಲ್ಲಿ ಕೊನೆಯ ಬಾರಿ ಏಷ್ಯಾಕಪ್‌ನ್ನು ಜಯಿಸಿತ್ತು.

ಮಲೇಷ್ಯಾ ತಂಡ ಶನಿವಾರ ನಡೆದಿದ್ದ ಮತ್ತೊಂದು ಸೆಮಿಫೈನಲ್‌ನಲ್ಲಿ ದಕ್ಷಿಣ ಕೊರಿಯಾ ವಿರುದ್ಧ 1-1 ರಿಂದ ಡ್ರಾ ಸಾಧಿಸಿತ್ತು.

 ಭಾರತ ತಂಡ ಟೂರ್ನಿಯ ಆರಂಭದಲ್ಲಿ ಮಲೇಷ್ಯಾದ ವಿರುದ್ಧ 6-2 ಅಂತರದಿಂದ ಜಯ ಸಾಧಿಸಿತ್ತು. ಫೈನಲ್‌ನಲ್ಲಿ ಮತ್ತೊಮ್ಮೆ ಉತ್ತಮ ಪ್ರದರ್ಶನ ನೀಡುವ ಮೂಲಕ ಪ್ರಶಸ್ತಿ ಎತ್ತಿ ಹಿಡಿದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News