ಕೊಡಿಬೆಟ್ಟು: ರಾಷ್ಟ್ರೀಯ ಪೌಷ್ಠಿಕ ಸಪ್ತಾಹ ಉದ್ಘಾಟನೆ
ಉಡುಪಿ, ಅ.22: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ತಾಪಂ, ಕೊಡಿಬೆಟ್ಟು ಗ್ರಾಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಶಿಶು ಅಭಿವೃದ್ಧಿ ಯೋಜನೆಯ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಪೌಷ್ಠಿಕ ಸಪ್ತಾಹ, ಮಾತೃಪೂರ್ಣಯೋಜನೆ ಬಗ್ಗೆ ಮಾಹಿತಿ ಮತ್ತು ಕಾನೂನು ಅರಿವು ಕಾರ್ಯಕ್ರಮವನ್ನು ಇತ್ತೀಚೆಗೆ ಕೊಡಿಬೆಟ್ಟು ಗಾಪಂ ಸಭಾ ಭವನದಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಹಿರಿಯ ಸಿವಿಲ್ ನ್ಯಾಯಾಧೀಶೆ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಲತಾ ಉದ್ಘಾಟಿಸಿ ದೈನಂದಿನ ಜೀವನದಲ್ಲಿ ಪೌಷ್ಠಿಕ ಆಹಾರದ ಅಗತ್ಯ ಮತ್ತು ಸುರಕ್ಷಿತ ಜೀವನಕ್ಕಾಗಿ ಕಾನೂನಿನ ಅರಿವಿನ ಪ್ರಾಮುಖ್ಯತೆ ಬಗ್ಗೆ ತಿಳಿಸಿದರು.
ಮುಖ್ಯ ಅಥಿತಿಗಳಾಗಿ ತಾಪಂ ಸದಸ್ಯರಾದ ಲಕ್ಷ್ಮೀನಾರಾಯಣ ಪ್ರಭು, ಸಂಧ್ಯಾ ಕಾಮತ್ ಮಾತನಾಡಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಗ್ರೇಸಿ ಗೊನ್ಸಾಲ್ವಿಸ್ ಮಾತೃಪೂರ್ಣ ಯೋಜನೆ, ಗರ್ಭಿಣಿ ಹಾಗೂ ಬಾಣಂತಿಯರಿಗೆ ನೀಡುವ ಮಧ್ಯಾಹ್ನದ ಬಿಸಿಯೂಟದ ಬಗ್ಗೆ ಮಾಹಿತಿಯನ್ನು ನೀಡಿದರು.
ಸಂಪನ್ಮೂಲ ವ್ಯಕ್ತಿಯಾಗಿ ಉಡುಪಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ವೀಣಾ ಪೌಷ್ಟಿಕ ಆಹಾರದ ಮಹತ್ವ, ದಿನನಿತ್ಯ ಬಳಕೆ ಮಾಡುವಂತಹ ಪೋಷ ಕಾಂಶಗಳ ಬಗ್ಗೆ ಸ್ಥಳೀಯವಾಗಿ ಸಿಗುವಂತಹ ಸೊಪ್ಪುತರಕಾರಿಗಳ ಸೇವನೆ ಬಗ್ಗೆ ಮಾಹಿತಿ ನೀಡಿದರು. ವಕೀಲ ಹಮ್ಜದ್ ಕೋಡಿ ಮಹಿಳಾ ದೌರ್ಜನ್ಯ ತಡೆ ಕಾಯ್ದೆ ಬಗ್ಗೆ ಮಾಹಿತಿ ನೀಡಿದರು.
ಕೊಡಿಬೆಟ್ಟು ಗ್ರಾಪಂ ಅಧ್ಯಕ್ಷ ರಾಜು ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಕಾರ್ಯದರ್ಶಿ ಸುರೇಶ್ ನಾಯ್ಕ ಸ್ವಾಗತಿಸಿದರು. ಮೇಲ್ವಿಚಾರಕಿ ಶಾಂತಿ ಪ್ರಭು ಕಾರ್ಯಕ್ರಮ ನಿರೂಪಿಸಿದರು. ಸಂಗೀತಾ ಎಂ.ಕೆ. ವಂದಿಸಿದರು.