ನಮ್ಮದು ಸುಳ್ಳು ಹೇಳುವ 'ಮನ್ ಕೀ ಬಾತ್' ಅಲ್ಲ, ನುಡಿದಂತೆ ನಡೆಯುವ ಸರಕಾರ: ಸಿದ್ದರಾಮಯ್ಯ
ಮಂಗಳೂರು, (ಬಂಟ್ವಾಳ ಕೆಎಸ್ಸಾರ್ಟಿಸಿ ಆವರಣ) ಅ. 22: ಸಮಾಜದಲ್ಲಿ ಸಹಬಾಳ್ವೆ, ಸಾಮರಸ್ಯ ಕಾಪಾಡಲು ಅಡ್ಡಿ ಪಡಿಸುತ್ತಿರುವ ಕೋಮುವಾದಿ ಗಳನ್ನು ಹತ್ತಿಕ್ಕುವುದು, ಹಸಿವು ಮುಕ್ತ ಮಾದರಿ ರಾಜ್ಯವನ್ನಾಗಿ ಮಾಡುವುದು ನಮ್ಮ ಗುರಿಯಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ 252 ಕೋಟಿ ರೂ. ವೆಚ್ಚದ ವಿವಿಧ ಇಲಾಖೆಗಳ ವತಿಯಿಂದ ಅಭಿವೃದ್ಧಿ ಪಡಿಸಲಾದ ಕಾಮಗಾರಿಗಳನ್ನು ಇಂದು ಉದ್ಘಾಟಿಸಿ, ವಿವಿಧ ನೂತನ ಯೋಜನೆಗಳ ಶಿಲಾನ್ಯಾಸ ಕಾರ್ಯಕ್ರಮಗಳ ನೆರವೇರಿಸಿ ಅವರು ಮಾತನಾಡುತ್ತಿದ್ದರು.
ಕರ್ನಾಟಕವನ್ನು ಹಸಿವು ಮುಕ್ತ ರಾಜ್ಯವನ್ನಾಗಿ ಮಾಡುವ ನಿಟ್ಟಿನಲ್ಲಿ ಅನ್ನ ಭಾಗ್ಯ ಯೋಜನೆ ಜಾರಿಗೆ ತರಲಾಗಿದೆ. ಪರಿಣಾಮವಾಗಿ ರಾಜ್ಯದಲ್ಲಿ ಜನರು ಹಸಿವಿನಿಂದ ಸಾವನ್ನಪ್ಪುವುದನ್ನು ತಡೆಯುವಲ್ಲಿ ಸರಕಾರ ಯಶಸ್ವಿಯಾಗಿದೆ. ಈಗಾಗಲೆ ರಾಜ್ಯದ ಬೆಂಗಳೂರಿನಲ್ಲಿ 200 ಇಂದಿರಾ ಕ್ಯಾಂಟೀನ್ ಆರಂಭಿಸಲಾಗಿದೆ. ಶೀಘ್ರದಲ್ಲಿ ರಾಜ್ಯದ ಎಲ್ಲಾ ಜಿಲ್ಲೆ ತಾಲೂಕುಗಳಲ್ಲಿಯೂ ಸುಮಾರು 300 ಇಂದಿರಾ ಕ್ಯಾಂಟೀನ್ ಆರಂಭಿಸುವ ಗುರಿ ಹೊಂದಲಾಗಿದೆ. ರಾಜ್ಯದ ಬಡ ಜನರು, ಕಾರ್ಮಿಕರು ಹಸಿವಿನಿಂದ ಮುಕ್ತರಾಗ ಬೇಕು ಎನ್ನುವ ನೆಲೆಯಲ್ಲಿ ಈ ಯೋಜನೆಯನ್ನು ಜಾರಿಗೆ ತರಲಾಗಿದೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.
ಜಾತಿ, ಕೋಮುವಾದದ ಹೆಸರಿನಲ್ಲಿ ಸಂಘ ಪರಿವಾರ ದೇಶವನ್ನು ಒಡೆಯುವ ಕೆಲಸದಲ್ಲಿ ತೊಡಗಿದೆ, ಕೇಂದ್ರದಲ್ಲಿರುವ ಮೋದಿ ನೇತೃತ್ವದ ಸರಕಾರ ಅದಕ್ಕೆ ಕುಮ್ಮಕ್ಕು ನೀಡುತ್ತಿದೆ. ಕರಾವಳಿ ಜಿಲ್ಲೆಗಳನ್ನು ಕೋಮುವಾದಿಗಳು ತಮ್ಮ ಪ್ರಯೋಗ ಶಾಲೆಯನ್ನಾಗಿ ಮಾಡಲು ಹೊರಟಿದ್ದಾರೆ. ಆದರೆ ಇಲ್ಲಿನ ಪ್ರಜ್ಞಾವಂತ ಜನರು ಕೋಮುವಾದಿಗಳ ಕೈಗೆ ಅಧಿಕಾರ ನೀಡಬೇಡಿ ಎಂದು ಮನವಿ ಮಾಡಿಕೊಳ್ಳುವುದಾಗಿ ಸಿದ್ದರಾಮಯ್ಯ ತಿಳಿಸಿದರು.
ನಮ್ಮದು ಮನ್ ಕೀ ಬಾತ್ ಅಲ್ಲ .. ಕಾಮ್‌ಕೀ ಬಾತ್:- ದೇಶದಲ್ಲಿ ಪ್ರಧಾನಿ ಮೋದಿ ಮನ್‌ಕೀ ಬಾತ್ ಹೇಳುತ್ತಾ ಬರಿ ಮಾತಿನಲ್ಲಿ ಸಮಯ ಕಳೆಯುತ್ತಾರೆ. ಅದು ಈಗ ಅವರಿಗೆ ತಿರುಗುಬಾಣವಾಗಿದೆ. ಆದರೆ ರಾಜ್ಯ ಸರಕಾರ ಪಕ್ಷದ ನೇತೃತ್ವದ ಚುನಾವಣೆಯ ಸಂದರ್ಭದಲ್ಲಿ ನೀಡಿರುವ 165 ಭರವಸೆಗಳಲ್ಲಿ 155ನ್ನು ಈಗಾಗಲೇ ಈಡೇರಿಸಿದ್ದೇವೆ .ಅಲ್ಲದೆ ಪ್ರಣಾಳಿಕೆಯಲ್ಲಿ ಹೇಳದೆ ಇದ್ದ ಕೆಲಸವನ್ನು ಮಾಡಿ ತೋರಿಸಿದ್ದೇವೆ. ನಮ್ಮದು ಸುಳ್ಳು ಹೇಳುವ ಮನ್ ಕೀ ಬಾತ್ ಅಲ್ಲ ನುಡಿದಂತೆ ನಡೆಯುವ ಸರಕಾರ. ನಾವು ಜನರ ಕೆಲಸ ಮಾಡಿ ತೋರಿಸುತ್ತಿದ್ದೇವೆ. ಮಾಜಿ ಮುಖ್ಯ ಮಂತ್ರಿ ಯಡಿಯೂರಪ್ಪ ಅಧಿಕಾರ ದಲ್ಲಿದ್ದಾಗ ನೀಡಿದ್ದ ಭರವಸೆಯಲ್ಲಿ ಶೇ 25ರಷ್ಟು ಮಾತ್ರ ಈಡೇರಿಸಿದ್ದಾರೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.
ಅಮಿತ್ ಶಾ ಮಗನಿಗೆ ಮಾತ್ರ ಅಚ್ಛೇದಿನ್ ...: ದೇಶದಲ್ಲಿ ಅಚ್ಚೇದಿನ್ ಬರುತ್ತದೆ ಎಂದು ಮೋದಿ ಹೇಳಿದ್ದು ಮಾತ್ರ ಕಾರ್ಯದಲ್ಲಿ ಆಗಿಲ್ಲ. ವಿದೇಶಿ ಹಣ ಜನರ ಖಾತೆ ಬರುತ್ತದೆ ಎಂದಿರುವುದು ಇದುವರೆಗೆ ಈಡೇರಿಲ್ಲ . ಅಂಬಾನಿ, ಅದಾನಿ, ಬಾಬಾ ರಾಮ್‌ದೇವ್ , ಅಮಿತ್ ಶಾ ಮಗನಿಗೆ ಮಾತ್ರ ಅಚ್ಛೇದಿನ ಬಂದಿದೆ. 6 ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದವರು ಮೂರು ವರ್ಷದಲ್ಲಿ ನಾಲ್ಕು ಲಕ್ಷ ಮಾತ್ರ ಉದ್ಯೋಗ ಸೃಷ್ಟಿಸಿದ್ದಾರೆ. ನಷ್ಟದಲ್ಲಿದ್ದ ಅಮಿತ್‌ಶಾ ಮಗನ ಕಂಪೆನಿಯ ಆದಾಯ 16 ಸಾವಿರ ಪಟ್ಟು ಹೆಚ್ಚಾಗಿದೆ ಎಂದು ಸಿದ್ದರಾಮಯ್ಯ ಟೀಕಿಸಿದರು.
ಸಬ್ ಕೇ ಸಾತ್ ಸಬ್ ಕೆ ವಿಕಾಸ್ ಎನ್ನುತ್ತಿರುವ ಬಿಜೆಪಿ ಉತ್ತರ ಪ್ರದೇಶದಲ್ಲಿ ಅಧಿಕಾರಕ್ಕೆ ಬಂದಿದ್ದಾರೆ. ಅಲ್ಲಿ ಒಬ್ಬನೆ ಒಬ್ಬ ಅಲ್ಪ ಸಂಖ್ಯಾತ ಸಮುದಾಯದ ಶಾಸಕನಿಲ್ಲ. ಕಾಂಗ್ರೆಸ್ ಎಲ್ಲಾ ಜಾತಿ, ಧರ್ಮದ ಜನರನ್ನು ಜೊತೆಗೆ ತೆಗೆದುಕೊಂಡು ಹೋಗುವ ಜಾತ್ಯತೀತ ಪಕ್ಷ ನಿಜವಾದ ಅರ್ಥದಲ್ಲಿ ಸಬ್‌ಕಾ ಸಾತ್ ಸಬ್‌ಕಾ ವಿಕಾಸ್ ನ್ನು ಮಾಡಿ ತೋರಿಸಿದ ಸರಕಾರ. ರಾಜ್ಯ ಸರಕಾರದ ಪ್ರಯತ್ನದಿಂದ ಸಹಕಾರಿ ಸಂಘಗಳ ಮೂಲಕ ನೀಡಲಾದ 50 ಸಾವಿರದ ವರೆಗಿನ 8165 ಕೋಟಿ ರೂಪಾಯಿ ರೈತರ ಸಾಲಮನ್ನಾ ಮಾಡಲಾಗಿದೆ. ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿರುವ ಬಡವರ ಸಾಲಮನ್ನಾ ಮಾಡಲು ಕೇಂದ್ರಕ್ಕೆ ನಿಯೋಗ ತೆರಳಿ ಪ್ರಧಾನಿಗೆ ಮನವಿ ಸಲ್ಲಿಸಿದರೂ ರೈತರ ಸಾಲಮನ್ನಾ ಆಗಲಿಲ್ಲ ಎಂದು ಸಿದ್ದರಾಮಯ್ಯ ಟೀಕಿಸಿದರು.
ಟಿಪ್ಪು ಹೆಸರಿನಲ್ಲಿ ರಾಜಕೀಯ:- ದೇಶದಲ್ಲಿ ಟಿಪ್ಪು ಜಂಯತಿಗೆ ವಿರೋಧ ಮಾಡುವವರು ಹಿಂದೆ ಕೆಜಿಪಿಯಲ್ಲಿದ್ದಾಗ ಯಡಿಯೂರಪ್ಪ ಟಿಪ್ಪು ಖಡ್ಗ ಧರಿಸಿ, ವೇಷ ತೊಟ್ಟು ಆಚರಣೆ ಮಾಡಿದ್ದಾರೆ. ಜನಪ್ರತಿನಿಧಿಗಳಾಗಿ ಸಂವಿಧಾನದ ಆಧಾರದಲ್ಲಿ ಪ್ರತಿಜ್ಞೆ ಸ್ವೀಕರಿಸುವವರು ಅದರ ಪ್ರಕಾರ ನಡೆದುಕೊಳ್ಳುತ್ತಿಲ್ಲ. ಈ ದೇಶದಿಂದ ಬ್ರಿಟೀಷರನ್ನು ಓಡಿಸಲು ಟಿಪ್ಪು ಮಾಡಿದ ಯುದ್ಧ, ತ್ಯಾಗ ಯಾವೂದನ್ನು ಪರಿಗಣಿಸದೆ ರಾಜಕೀಯ ಮಾಡುತ್ತಿದ್ದಾರೆ. ಅದನ್ನು ಕೆಡವಬೇಕು ಎನ್ನುತ್ತಿರುವವರಿಗೆ ಈ ದೇಶದ ಸಂವಿಧಾನ ಬಗ್ಗೆ ಗೌರವವಿಲ್ಲ. ದೇಶದಲ್ಲಿ ತಾಜ್ ಮಹಲ್ ಬಗ್ಗೆ ವಿವಾದ ಸೃಷ್ಟಿಸುತ್ತಾರೆ. ಕೆಂಪು ಕೋಟೆ, ರಾಷ್ಟ್ರಪತಿಭವನ ಎಲ್ಲ ವಿದೇಶಿಯರಿಂದಲೇ ನಿರ್ಮಾಣವಾಗಿರುವುದು. ಆದರೆ ಅವೆಲ್ಲವೂ ಈ ದೇಶದ ಚರಿತ್ರೆಯ ಭಾಗವಾಗಿರುವ ಸ್ಮಾರಕಗಳು. ಈ ದೇಶದ ಇತಿಹಾಸವನ್ನು ತಿಳಿಯದವರು ಹೊಸ ಇತಿಹಾಸವನ್ನು ನಿರ್ಮಿಸಲು ಸಾಧ್ಯವಿಲ್ಲ ಎಂದು ಸಿದ್ದರಾಮಯ್ಯ ತಿಳಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಉಸ್ತುವಾರಿ ಮತ್ತು ಅರಣ್ಯ ಸಚಿವ ಬಿ.ರಮಾನಾಥ ರೈ ಮಾತನಾಡುತ್ತಾ, ಕ್ಷೇತ್ರದ ಜನರ ಋಣ ತೀರಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಕಳೆದ ನಾಲ್ಕೂವರೆ ವರ್ಷದಲ್ಲಿ ಕ್ಷೇತ್ರಕ್ಕೆ 811ಕೋಟಿ ರೂ. ಯೋಜನೆ ಮಂಜೂರಾಗಿ ಅನುಷ್ಠಾನಗೊಳ್ಳುತ್ತಿದೆ. ಶಿಘ್ರದಲ್ಲಿ ಬಂಟ್ವಾಳಕ್ಕೆ 60 ಕೋಟಿ ರೂ.ಗಳ ಒಳಚರಂಡಿ ಯೋಜನೆ,10 ಕೋಟಿ ರೂ. ಕ್ರೀಡಾಂಗಣ ಮಂಜೂರಾಗಲಿದೆ ಎಂದು ತಿಳಿಸಿದರು.
ಜನರ ಆಶೋತ್ತರಗಳಿಗೆ ಸೂಕ್ತವಾಗಿ ಸ್ಪಂದಿಸುವುದು ಜನಪ್ರತಿನಿಧಿಯ ಕರ್ತವ್ಯ ಎಂದು ರಮನಾಥ ರೈ ಕ್ಷೇತ್ರದಲ್ಲಿ 252 ಕೋಟಿ ರೂ. ಗಳ ಅನುದಾನ ನೀಡಲು ಸಹಕರಿಸಿದ ಮುಖ್ಯ ಮಂತ್ರಿಗೆ ಕೃತಜ್ಞತೆ ಸಲ್ಲಿಸಿದರು.
ಸಮಾರಂಭದಲ್ಲಿ ಲೋಕೋಪಯೋಗಿ ಸಚಿವ ಡಾ.ಎಚ್.ಸಿ.ಮಹಾದೇವಪ್ಪ, ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್, ಹಜ್ ಸಚಿವ ರೊಶನ್ ಬೇಗ್, ಪೌರಾಡಳಿತ ಸಚಿವ ಈಶ್ವರ ಖಂಡ್ರೆ, ಕಾನೂನು ಸಚಿವ ಟಿ.ಬಿ. ಜಯಚಂದ್ರ, ಯುವಜನ ಮತ್ತು ಮೀನುಗಾರಿಕಾ ಸಚಿವ ಪ್ರಮೊದ್ ಮಧ್ವರಾಜ್, ಕೆಎಸ್ಸಾರ್ಟಿಸಿ ನಿಗಮದ ಅಧ್ಯಕ್ಷ ಗೋಪಾಲ ಪುಜಾರಿ, ಶಾಸಕಿ ಶಕುಂತಳಾ ಶೆಟ್ಟಿ, ಜೆ.ಆರ್.ಲೋಬೊ, ಮಾಜಿ ಸಚಿವ ಅಭಯ ಚಂದ್ರ ಜೈನ್, ಮುಖ್ಯ ಸಚೇತಕ ಐವನ್ ಡಿ ಸೋಜ, ಶಾಸಕ ಬಿ.ಎ.ಮೊಯ್ದಿನ್ ಬಾವ ಮೊದಲಾದವರು ಉಪಸ್ಥಿತರಿದ್ದರು.