×
Ad

ಜಿಎಸ್‌ಟಿ ದರ ಸ್ವರೂಪದ ಪರಿಶೀಲನೆ ಅತ್ಯಗತ್ಯ : ಹಸ್‌ಮುಖ್ ಅಧಿಯ

Update: 2017-10-22 20:53 IST

 ಹೊಸದಿಲ್ಲಿ, ಅ.22: ಸಣ್ಣ ಮತ್ತು ಮಧ್ಯಮ ವ್ಯಾಪಾರಸ್ತರ ಮೇಲಿನ ಹೊರೆಯನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಜಿಎಸ್‌ಟಿ ದರ ಸ್ವರೂಪದ ಕೂಲಂಕಷ ಮರುಪರಿಶೀಲನೆಯ ಅಗತ್ಯವಿದೆ ಎಂದು ಆದಾಯತೆರಿಗೆ ಇಲಾಖೆಯ ಕಾರ್ಯದರ್ಶಿ ಹಸ್‌ಮುಖ್ ಅಧಿಯ ಹೇಳಿದ್ದಾರೆ. ಕೂಲಂಕುಷ ಪರಿಶೀಲನೆ ಇದೀಗ ಅಗತ್ಯವಿದೆ. ಒಂದೇ ಭಾಗದಲ್ಲಿ ಕಾಣಿಸಿಕೊಂಡಿರುವ ಕೆಲವು ವಿಷಯಗಳನ್ನು ವಿಭಜಿಸಬಹುದು ಎಂದು ಜಿಎಸ್‌ಟಿ ಕುರಿತು ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಅವರು ಹೇಳಿದರು.

 ವಸ್ತುಗಳನ್ನು ವಿಭಾಗವಾರು ಹೊಂದಾಣಿಸುವ ಅಗತ್ಯವಿದೆ. ಸಣ್ಣ, ಮಧ್ಯಮ ವ್ಯಾಪಾರಸ್ತರು ಹಾಗೂ ಜನಸಾಮಾನ್ಯರ ಮೇಲೆ ಭಾರೀ ಹೊರೆ ಬೀಳುವುದನ್ನು ತಪ್ಪಿಸಬೇಕಿದೆ ಎಂದ ಅವರು, ಆದರೆ ಈ ಪರಿಶೀಲನೆಯನ್ನು ಜಿಎಸ್‌ಟಿ ಸಮಿತಿ ಕೆಲವು ಲೆಕ್ಕಾಚಾರದ ಬಳಿಕ ನಡೆಸಬೇಕು ಎಂದು ಅಭಿಪ್ರಾಯಪಟ್ಟರು.

    ಯಾವ ವಸ್ತುಗಳ ಜಿಎಸ್‌ಟಿ ದರದ ಪರಿಷ್ಕರಣೆ ಅಗತ್ಯವಿದೆ ಎಂಬುದರ ಬಗ್ಗೆ ಸಲಹೆಯನ್ನು ಜಿಎಸ್‌ಟಿ ಸಮಿತಿಗೆ ನಿರ್ಧರಣ ಸಮಿತಿ ಶೀಘ್ರ ಸಲ್ಲಿಸಲಿದೆ. ಈ ಬಗ್ಗೆ ಸಮಿತಿ ಪರಿಶೀಲನೆ ನಡೆಸಲಿದೆ . ಆದರೆ ಸಲಹೆಯನ್ನು ಒಪ್ಪುವುದು ಅಥವಾ ತಿರಸ್ಕರಿಸಲು ಅವಕಾಶವಿದೆ ಎಂದು ಅಧಿಯಾ ಹೇಳಿದರು. ಜಿಎಸ್‌ಟಿ ಸಮಿತಿಯ 23ನೇ ಸಭೆಯು ಕೇಂದ್ರದ ವಿತ್ತಸಚಿವ ಅರುಣ್ ಜೇಟ್ಲಿ ಅಧ್ಯಕ್ಷತೆಯಲ್ಲಿ ನವೆಂಬರ್ 10ರಂದು ಗುವಾಹಟಿಯಲ್ಲಿ ನಡೆಯಲಿದ್ದು ರಾಜ್ಯಗಳ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದವರು ತಿಳಿಸಿದರು.

 ಜಿಎಸ್‌ಟಿ ನಿರ್ಧರಣ ಸಮಿತಿ ದರ ಪರಿಷ್ಕರಣೆಯ ಅಗತ್ಯವಿರುವ ವಸ್ತುಗಳ ಪಟ್ಟಿಯನ್ನು ಶೀಘ್ರ ಸಲ್ಲಿಸುತ್ತದೆ ಎಂದು ನಿರೀಕ್ಷಿಸುತ್ತಿದ್ದೇವೆ. ಇದನ್ನು ನಿರ್ಧರಿಸಲು ಅವರಿಗೆ ದತ್ತಾಂಶ, ನಷ್ಟವಾಗುವ ತೆರಿಗೆಯ ಪ್ರಮಾಣದ ಲೆಕ್ಕಾಚಾರ ಅಗತ್ಯವಿದೆ. ಹಲವಾರು ಹೋಲಿಕೆಗಳನ್ನು ಅರ್ಹತಾ ಮಂಡಳಿ ಗಮನಿಸಬೇಕಾಗಿದೆ. ಆದರೆ ಜಿಎಸ್‌ಟಿ ದರದ ಸಂಪೂರ್ಣ ಮರುಪರಿಶೀಲನೆ ನಡೆಯಬೇಕಿದೆ ಎಂದು ಅವರು ಹೇಳಿದರು.

ಕೇಂದ್ರ ಹಾಗೂ ರಾಜ್ಯ ಸರಕಾರಗಳ ಹನ್ನೆರಡಕ್ಕೂ ಹೆಚ್ಚು ತೆರಿಗೆಗಳನ್ನು ಏಕೀಕರಿಸಿ ಜಾರಿಗೊಳಿಸಲಾಗಿರುವ ಜಿಎಸ್‌ಟಿ ಸರಿಯಾದ ಕ್ರಮದಲ್ಲಿ ನೆಲೆಗೊಳ್ಳಲು ಕನಿಷ್ಟ ಒಂದು ವರ್ಷದ ಅವಧಿಯ ಅಗತ್ಯವಿದೆ ಎಂದು ಅಧಿಯಾ ತಿಳಿಸಿದರು.

ಜಿಎಸ್‌ಟಿ ಕಾಯ್ದೆ ಅನುಷ್ಠಾನಗೊಂಡ ನಾಲ್ಕು ತಿಂಗಳಲ್ಲೇ ಜನಸಾಮಾನ್ಯರು ಹಾಗೂ ವ್ಯಾಪಾರಸ್ತರಿಗೆ ಭಾರೀ ಸಮಸ್ಯೆ ತಂದೊಡ್ಡಿದೆ ಎಂಬ ದೂರು ಕೇಳಿಬರುತ್ತಿದ್ದು ಈ ಹಿನ್ನೆಲೆಯಲ್ಲಿ ಜನರು ಎದುರಿಸುತ್ತಿರುವ ಸಮಸ್ಯೆಗಳ ಪರಿಶೀಲನೆಗೆ ಜಿಎಸ್‌ಟಿ ಸಮಿತಿ ಹಲವಾರು ಬಾರಿ ಸಭೆ ಸೇರಿ ಚರ್ಚೆ ನಡೆಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News