ರೈ ಗೆಲುವಿಗೆ ಶ್ರಮಿಸಿದ ಪೂಜಾರಿಯವರನ್ನು ಮೂಲೆಗುಂಪು ಮಾಡಲಾಗಿದೆ: ಹರಿಕೃಷ್ಣ ಬಂಟ್ವಾಳ ಆರೋಪ

Update: 2017-10-22 16:22 GMT

ಬಂಟ್ವಾಳ, ಅ. 22: ಕಾಂಗ್ರೆಸ್ ತೊರೆದಿರುವ, ಬಿಲ್ಲವ ಮುಖಂಡ ಹರಿಕೃಷ್ಣ ಬಂಟ್ವಾಳ ಅವರು ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಗೊಳ್ಳುವ ಹಿನ್ನೆಲೆಯಲ್ಲಿ ರವಿವಾರ ಸಮಾನ ಮನಸ್ಕ ಬಿಲ್ಲವ ಮುಖಂಡರ ಸಭೆಯೊಂದನ್ನು ಮಂಗಳೂರಿನ ಖಾಸಗಿ ಹೋಟೆಲೊಂದರಲ್ಲಿ ನಡೆಸಿದ್ದಾರೆ.

ಹರಿಕೃಷ್ಣ ಬಂಟ್ವಾಳ ಬಿಜೆಪಿಗೆ ಸೇರುವ ಕುರಿತಾಗಿ ಕಳೆದ ಕೆಲವು ದಿನಗಳಿಂದ ಹರಿದಾಡುತ್ತಿದ್ದ ಸುದ್ದಿಗೆ ಈ ಸಭೆ ಪುಷ್ಠಿ ನೀಡಿದೆ. ಅವರು ಬಿಜೆಪಿಯನ್ನು ಸೇರ್ಪಡೆಗೊಳ್ಳುವುದು ಇದೀಗ ಖಚಿತವಾಗಿದೆ.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ತಾನು ಕಾಂಗ್ರೆಸ್‌ನಲ್ಲಿ 35 ವರ್ಷಗಳಿಂದ ಸೇವೆ ಸಲ್ಲಿಸಿದೇನೆ. ಆದರೆ ಯಾವುದೇ ಹುದ್ದೆಯನ್ನು ನನಗೆ ನೀಡಿಲ್ಲ. ರಮಾನಾಥ ರೈವರ ಗೆಲುವಿಗೆ ಶ್ರಮಿಸಿದ ನಮ್ಮ ನಾಯಕರಾದ ಜನಾರ್ದನ ಪೂಜಾರಿ ಅವರನ್ನು ಕೂಡಾ ಮೂಲೆಗುಂಪು ಮಾಡಿದ್ದಾರೆ ಎಂದು ಆರೋಪಿಸಿದರು.

ಬ್ರಹ್ಮಶ್ರೀ ನಾರಾಯಣ ಗುರುವರ್ಯರ ತತ್ವಾದರ್ಶಗಳ ಜೊತೆಯಲ್ಲಿ ಮತ್ತು ತನ್ನ ರಾಜಕೀಯ ಗುರುಗಳಾದ ಜನಾರ್ದನ ಪೂಜಾರಿಯವರ ಆರ್ಶೀವಾದ ಪಡೆದು ಮೋದಿಯವರ ಪಕ್ಷವನ್ನು ಸೇರುವುದಾಗಿ ಈ ಸಂದರ್ಭದಲ್ಲಿ ಅವರು ಹೇಳಿದ್ದಾರೆ.

ಸ್ಥಳೀಯಾಡಳಿತ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ನಡೆದ ಚುನಾವಣೆಯ ಸಂದರ್ಭ ಹರಿಕೃಷ್ಣ ಬಂಟ್ವಾಳ ಕಾಂಗ್ರೆಸ್ ಅಭ್ಯರ್ಥಿಯ ಆಕಾಂಕ್ಷಿಯಾಗಿದ್ದರು. ಆದರೆ ಕೊನೆಯ ಗಳಿಗೆಯಲ್ಲಿ ಪಕ್ಷದ ಮುಖಂಡರು ಹಾಲಿ ಸದಸ್ಯ ಪ್ರತಾಪ್‌ಚಂದ್ರ ಶೆಟ್ಟಿ ಅವರನ್ನು ಕಣಕ್ಕಿಳಿಸಲಾಗಿತ್ತು. ಹರಿಕೃಷ್ಣ ಬಂಟ್ವಾಳ ಪಕ್ಷೇತರರಾಗಿ ಚುನಾವಣೆಗೆ ಸ್ಪರ್ಧಿಸಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಪಕ್ಷದಿಂದ ಉಚ್ಛಾಟಿಸಲಾಗಿತ್ತು.

ಇದೀಗ ಹರಿಕೃಷ್ಣ ಬಂಟ್ವಾಳ ಅವರು ಬಿಜೆಪಿಗೆ ಸೇರುವುದು ಖಚಿತವಾಗಿದ್ದು ನ.10ರಂದು ಜಿಲ್ಲೆಗೆ ಆಗಮಿಸುವ ಪರಿವರ್ತನ ರ್ಯಾಲಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರ ಸಮ್ಮುಖದಲ್ಲಿ ಸೇರ್ಪಡೆಯಾಗಲಿದ್ದಾರೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News