ಗ್ರಾಮಾಭಿವೃದ್ಧಿಯಲ್ಲಿ ಧರ್ಮಸ್ಥಳದ ಕೊಡುಗೆ ಅಪಾರ: ಸಿಎಂ ಸಿದ್ದರಾಮಯ್ಯ

Update: 2017-10-22 17:35 GMT

ಬೆಳ್ತಂಗಡಿ, ಅ. 22: ಗ್ರಾಮೀಣ ಪ್ರದೇಶಗಳ ಪ್ರಗತಿ ಹಾಗೂ ಮಹಿಳೆಯರ ಸಬಲೀಕರಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೊಡುಗೆ ಅಪಾರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ರವಿವಾರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸ್ವಸಹಾಯ ಸಂಘಗಳ ಸದಸ್ಯರಿಗೆ ಲಾಭಾಂಶ ಹಂಚಿಕೆ ಕಾರ್ಯಕ್ರಮದಲ್ಲಿ ಲಾಭಾಂಶ ವಿತರಣೆ ಮಾಡಿ ಅವರು ಮಾತನಾಡುತ್ತಿದ್ದರು.

ಸರಕಾರದ ಯೋಜನೆಗಳನ್ನು ಬಳಸಿಕೊಂಡು ಗ್ರಾಮೀಣ ಜನತೆಯ ನೆಮ್ಮದಿಯ ಜೀವನಕ್ಕೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಹಳಷ್ಟು ಕೊಡುಗೆ ನೀಡಿದೆ. ಯೋಜನೆಯ ಕಾರ್ಯಕ್ರಮಗಳು ಬಡತನ ನಿವಾರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದವರು ಹೇಳಿದರು.

ಜನತೆ ಸ್ವಾಭಿಮಾನದಿಂದ ಜೀವಿಸಲು ಸ್ವಸಹಾಯ ಸಂಘಗಳು ಬಹಳಷ್ಟು ನೆರವಾಗಿದೆ. ರಾಜ್ಯ ಸರಕಾರವು ಈ ವರ್ಷದಿಂದ ಸ್ತ್ರೀ ಶಕ್ತಿ ಸಂಘಗಳಿಗೆ ಯಾವುದೇ ಬಡ್ಡಿ ಇಲ್ಲದ ಶೂನ್ಯ ಬಡ್ಡಿ ದರದಲ್ಲಿ 3 ಲಕ್ಷ ರೂ.ವರೆಗೆ ಸಾಲ ನೀಡಲಿದೆ. ಸ್ವಸಹಾಯ ಸಂಘಗಳಿಗೆ ನೀಡಿದ ಸಾಲದಲ್ಲಿ ಶೇಕಡಾ 90ರಷ್ಟು ವಾಪಸ್ ಬರುತ್ತಿದೆ ಎಂದರು. 

ರಾಜ್ಯದ ಎಲ್ಲ ಜನರೂ ಸ್ವಾಭಿಮಾನದಿಂದ ಬದುಕುವಂತಾಗಬೇಕು ಎಂಬ ಗುರಿಯೊಂದಿಗೆ ರಾಜ್ಯ ಸರಕಾರ ಹಲವಾರು ಜನಪರ ಯೋಜನೆಗಳನ್ನು ಜಾರಿಗೆ ತಂದಿದೆ. ಗ್ರಾಮೀಣ ಪ್ರದೇಶಗಳ ಜನರು ಸ್ವಸಹಾಯ ಸಂಘಗಳ ಮೂಲಕ ಸಂಘಟಿತರಾಗಿ ಇದರ ಸದುಪಯೋಗವನ್ನು ಪಡೆದು ಹೊಸ ಬದುಕನ್ನು ಕಟ್ಟಿಕೊಳ್ಳಬೇಕು. ಜನರ ಪಾಲ್ಗೊಳ್ಳುವಿಕೆಯಿಂದ ಮಾತ್ರ ಯಾವುದೇ ಯೋಜನೆಗಳು ಯಶಸ್ವಿಯಾಗಲು ಸಾಧ್ಯ ಎಂದ ಅವರು ಗ್ರಾಮಾಭಿವೃದ್ಧಿ ಯೋಜನೆ ಈ ನಿಟ್ಟಿನಲ್ಲಿ ಯಶಸ್ವಿಯಾಗಿದೆ.

'ಎಲ್ಲರಿಗೂ ಶಿಕ್ಷಣ, ಎಲ್ಲರಿಗೂ ಆರೋಗ್ಯ ಹಾಗೂ ಹಸಿವು ಮುಕ್ತ ಕರ್ನಾಟಕ' ಸರಕಾರದ ಗುರಿಯಾಗಿದೆ. ರಾಜ್ಯ ಹಿಂದೆಂದೂ ಕಂಡರಿಯದಂತಹ ಬರಗಾಲವನ್ನು ಎದುರಿಸಿದ್ದರೂ ಅನ್ನಭಾಗ್ಯ ಯೋಜನೆಯಿಂದಾಗಿ ಯಾರೂ ಹಸಿವಿನಿಂದ ಜೀವ ಕಳೆದುಕೊಳ್ಳುವಂತಾಗಿಲ್ಲ. ಗ್ರಾಮೀಣ ಪ್ರದೇಶಗಳಿಂದ ಜನ ವಲಸೆ ಬರುವುದೂ ಕಡಿಮೆಯಾಗಿದೆ. ಎಲ್ಲರಿಗೂ ಉಚಿತ ಚಿಕಿತ್ಸೆ ನೀಡಲು ಯುನಿವರ್ಸಲ್ ಹೆಲ್ತ್ ಸ್ಕೀಂ ಅನ್ನು ನವೆಂಬರ್ 15ರಿಂದ ಪ್ರಾರಂಭಿಸಲಾಗುತ್ತಿದೆ. ಇದಕ್ಕಾಗಿ 1,400 ಕೋಟಿ ರೂ. ಖರ್ಚುಮಾಡಲು ಉದ್ದೇಶಿಸಲಾಗಿದೆ.

ಗ್ರಾಮಗಳು ಅಭಿವೃದ್ಧಿಯಾದರೆ ಮಾತ್ರ ದೇಶ ಅಭಿವೃದ್ಧಿಯಾಗಲು ಸಾಧ್ಯ, ಕೃಷಿಯನ್ನು ಲಾಭದಾಯಕವಾಗಿಸುವುದೇ ಸರಕಾರ ಹಾಗೂ ಗ್ರಾಮಾಭಿವೃದ್ಧಿ ಯೋಜನೆಯಂತಹ ಸಂಘಟನೆಗಳ ಗುರಿಯಾಗಿದೆ. ಕೃಷಿ ಹೊಂಡಗಳೆಂಬ ವಿನೂತನ ಯೋಜನೆ ರಾಜ್ಯದಲ್ಲಿ ಯಶಸ್ವಿಯಾಗಿದ್ದು, ರಾಜ್ಯದಾದ್ಯಂತ ಒಂದು ಲಕ್ಷದ ಅರವತ್ತು ಸಾವಿರ ಕೃಷಿಹೊಂಡಗಳು ನಿರ್ಮಾಣಗೊಂಡಿದೆ. ಈ ಬಾರಿ ಆಗಿರುವ ಉತ್ತಮ ಮಳೆಯಿಂದ ಈ ಹೊಂಡಗಳು ತುಂಬಿದ್ದು, ರೈತರ ಮನಸ್ಸಿನಲ್ಲಿ ನೆಮ್ಮದಿ ಮೂಡಿದೆ ಎಂದು ಸಿಎಂ ಹೇಳಿದರು.

ಕೃಷಿ ಅನುದಾನ ವಿತರಣೆ ಮಾಡಿ ಮಾತನಾಡಿದ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆ, ಕಳೆದ ಮೂರುವರೆ ದಶಕಗಳಿಂದ ಗ್ರಾಮಾಭಿವೃದ್ಧಿ ಯೋಜನೆ ಸರಕಾರಗಳೊಂದಿಗೆ ಕೈಜೋಡಿಸಿ ಸರಕಾರದ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸುವ ಕಾರ್ಯವನ್ನು ಮಾಡುತ್ತಾ ಬಂದಿದೆ. ಯೋಜನೆಯ ಸದಸ್ಯರು ಯೋಜನೆಯ ಪಾಲುದಾರರಾಗಿದ್ದು, ಜನರ ಸಹಕಾರವನ್ನೂ ಪಡೆದು ಅವರು ಸಬಲೀಕರಣಗೊಂಡು ಹೊಸ ಬದುಕನ್ನು ಕಟ್ಟಿಕೊಳ್ಳುವಂತೆ ಮಾಡಲಾಗುತ್ತಿದೆ ಎಂದು ವಿವರಿಸಿದರು. 

ಕ್ಷೇತ್ರದಿಂದ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಕಾಲಾನುಚಿತವಾಗಿ ಸಮಾಜಸೇವಾ ಚಟುವಟಿಕೆಗಳನ್ನೂ ಆರಂಭಿಸಲಾಗಿದ್ದು, ಗ್ರಾಮಾಭಿವೃದ್ಧಿ ಯೋಜನೆ ಹಾಗೂ ರುಡ್‍ಸೆಟ್ ಸಂಸ್ಥೆಗಳ ಮೂಲಕ ದೇಶಾದ್ಯಂತ ಲಕ್ಷಾಂತರ ಜನರ ಬದುಕಿನಲ್ಲಿ ಬದಲಾವಣೆಯನ್ನು ತರಲು ಸಾಧ್ಯವಾಗಿದೆ. ಗ್ರಾಮಾಭಿವೃದ್ದಿ ಯೋಜನೆ ಈಗಾಗಲೆ ಕೆರೆ ಹೂಳೆತ್ತುವ ಕಾರ್ಯಕ್ಕೆ ಮುಂದಾಗಿದ್ದು, ಈಗಾಗಲೆ ನೂರು ಕೆರೆಗಳನ್ನು ಪುನಶ್ಚೇತನಗೊಳಿಸಲಾಗಿದೆ. ಸಾವಯವ ಕೃಷಿ ಹಾಗೂ ಪರಿಸರ ಸಂರಕ್ಷಣೆಗೆ ಹೆಚ್ಚು ಒತ್ತುನೀಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಗುರಿಯಿದೆ. ಗ್ರಾಮಾಭಿವೃದ್ಧಿ ಯೋಜನೆಯಲ್ಲಿ 38 ಲಕ್ಷ ಸದಸ್ಯರಿದ್ದು, ಅವರಿಗೆ ವಿವಿಧ ಬ್ಯಾಂಕ್‍ಗಳಿಂದ 6,250 ಕೋಟಿ ರೂ. ಸಾಲ ನೀಡಲಾಗಿದೆ. ಶೇ 92ರಷ್ಟು ಸಾಲ ವಸೂಲಾತಿಯಾಗುತ್ತಿದೆ ಎಂದರು. 

ಬೆಳ್ತಂಗಡಿ ಶಾಸಕ ಕೆ. ವಸಂತ ಬಂಗೇರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಹೇಮಾವತಿ ವಿ. ಹೆಗ್ಗಡೆ, ಸಚಿವರುಗಳಾದ ಡಿ.ಕೆ ಶಿವಕುಮಾರ್, ಬಿ. ರಮಾನಾಥ ರೈ, ಯು.ಟಿ. ಖಾದರ್, ಬಿ.ಟಿ. ಜಯಚಂದ್ರ, ಈಶ್ವರ ಖಂಡ್ರೆ, ಶಾಸಕರಾದ ಅಭಯಚಂದ್ರ ಜೈನ್, ಐವನ್ ಡಿಸೋಜ, ಶಕುಂತಲಾ ಶೆಟ್ಟಿ, ಗೋಪಾಲಪೂಜಾರಿ, ಮೊಯ್ದಿನ್ ಬಾವ, ವಿನಯಕುಮಾರ್ ಸೊರಕೆ, ವಿವಿಧ ಬ್ಯಾಂಕ್‍ಗಳ ಅಧಿಕಾರಿಗಳು, ಡಿ. ಹರ್ಷೇಂದ್ರಕುಮಾರ್, ಧರ್ಮಸ್ಥಳ ಗ್ರಾಪಂ ಅಧ್ಯಕ್ಷ ಚಂದನ್ ಪ್ರಸಾದ್ ಕಾಮತ್‍ ಇತರರು ಉಪಸ್ಥಿತರಿದ್ದರು. 

ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಲ್.ಎಚ್. ಮಂಜುನಾಧ್ ಸ್ವಾಗತಿಸಿದರು. ಬೂದಪ್ಪಗೌಡ ಕಾರ್ಯಕ್ರಮ ನಿರೂಪಿಸಿದರು. ನಿರ್ದೇಶಕ ಚಂದ್ರಶೇಖರ ವಂದಿಸಿದರು. 

ಈ ಸಂದರ್ಭ ರಾಜ್ಯದ ಎರಡು ಸಂಘಗಳಿಗೆ 201 ಕೋಟಿ ರೂ. ಲಾಭಾಂಶವನ್ನು ವಿತರಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News