×
Ad

ದರೋಡೆಗೆ ಸಂಚು: ಐವರ ಬಂಧನ

Update: 2017-10-22 22:48 IST

ಮಂಗಳೂರು, ಅ. 22: ಹೆದ್ದಾರಿಯಲ್ಲಿ ಪ್ರಯಾಣಿಸುವ ಸಾರ್ವಜನಿಕರನ್ನು ತಡೆದು ಚಿನ್ನಾಭರಣ ಸಹಿತ ಅವರ ಸೊತ್ತನ್ನು ಲೂಟಿ ಮಾಡಿ ದರೋಡೆಗೆ ಸಂಚು ರೂಪಿಸಿದ್ದ ಐವರು ಆರೋಪಿಗಳನ್ನು ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಕಲ್ಲಾಪು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಬಂಧಿಸಿದ್ದಾರೆ.

ಪುತ್ತೂರು ಆರ್ಯಾಪು ಗ್ರಾಮದ ರವಿ ಕುಮಾರ್ (24), ಮಂಜೇಶ್ವರ ಗ್ರಾಮದ ಕುಂಜತ್ತೂರಿನ ಖಲೀಲ್ ಕೆ. ಯಾನೆ ಕಲ್ಲು (27), ಮಂಜೇಶ್ವರ ಕುಂಜತ್ತೂರಿನ ರಾಜೇಶ್ ಕೆ. (30), ಮಂಜೇಶ್ವರ ಗ್ರಾಮದ ಬಂಗ್ರಮಂಜೇಶ್ವರದ ಅಝೀಮ್ ಯಾನೆ ಮುಹಮ್ಮದ್ ಅಝೀಮ್ (23) ಮತ್ತು ಮಂಜೇಶ್ವರ ಗ್ರಾಮ ಕುಂಜತ್ತೂರಿನ ಜಾಬೀರ್ ಅಬ್ಬಾಸ್ ಯಾನೆ ಜಾಬೀರ್ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳಿಂದ ಕಬ್ಬಿಣದ ತಲವಾರು, ಕಬ್ಬಿಣದ ರಾಡ್, ಮೆಣಸಿನ ಹುಡಿ,ಚೂರಿಗಳು ಮತ್ತು ಮಾರುತಿ ಸ್ವಿಫ್ಟ್ ಕಾರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿಗಳು ಕೇರಳದಿಂದ ಮಂಗಳೂರಿಗೆ ಬರುವ ಹಾಗೂ ಮಂಗಳೂರು ವಿಮಾನ ನಿಲ್ದಾಣದಿಂದ ಪ್ರಯಾಣಿಸುವ ಪ್ರಯಾಣಿಕರನ್ನು, ಕಾರುಗಳನ್ನು, ವಾಹನಗಳಲ್ಲಿ ಪ್ರಯಾಣಿಸುವ ಸಾರ್ವಜನಿಕರನ್ನು ಹಾಗೂ ಮಹಿಳೆಯರನ್ನು ನಿರ್ಜನ ಸ್ಥಲಕ್ಕೆ ಕರೆದೊಯ್ದು ಅವರಿಂದ ಚಿನ್ನಾಭರಣ ಸಹಿತ ಸೊತ್ತುಗಳನ್ನು ಲೂಟಿ ಮಾಡಿ ದರೋಡೆಗೆ ಪೂರ್ವ ತಯಾರಿ ನಡೆಸುತ್ತಿದ್ದರೆಂಬ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ಉಳ್ಳಾಲ ಪೊಲೀಸ್ ಠಾಣಾ ನೀರೀಕ್ಷಕ ಗೋಪಿಕೃಷ್ಣ ಕೆ.ಆರ್., ಉಪ ನಿರೀಕ್ಷಕ ರಾಜೇಂದ್ರ ಬಿ. ಅವರು ಮಂಗಳೂರು ದಕ್ಷಿಣ ಉಪ ವಿಭಾಗದ ರೌಡಿ ನಿಗ್ರಹ ದಳದ ಸಿಬ್ಬಂದಿಗಳೊಂದಿಗೆ ಮಂಗಳೂರು ದಕ್ಷಿಣ ಉಪ ವಿಭಾಗದ ಎಸಿಪಿ ಕೆ.ರಾಮರಾವ್ ಅವರ ನೇತೃತ್ವದಲ್ಲಿ ಆರೋಪಿಗಳನ್ನು ಪತ್ತೆ ಮಾಡಿ ಬಂಧಿಸಿದ್ದಾರೆ.

ಆರೋಪಿಗಳ ಪೈಕಿ ರಾಜೇಶ್, ಜಾವಿದ್, ಖಲೀಲ್ ಅ.19ರಂದು ಮಂಜೇಶ್ವರ ಠಾಣಾ ವ್ಯಾಪ್ತಿಯ ನಿವಾಸಿ ಪ್ರಜ್ವಲ್ ಎಂಬಾತನಿಗೆ ಗಂಭೀರ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ್ದರೆಂದು ಆರೋಪಿಸಲಾಗಿದೆ. ರವಿಕುಮಾರ್ ಎಂಬಾತನ ಮೇಲೆ ಪುತ್ತೂರು ನಗರ ಠಾಣೆ, ಮಂಜೇಶ್ವರ ಠಾಣೆ, ಬರ್ಕೆ ಪೊಲೀಸ್ ಠಾಣೆ ಸಹಿತ ಒಟ್ಟು ನಾಲ್ಕು ಪ್ರಕರಣಗಳು ದಾಖಲಾಗಿವೆ. ಆರೋಪಿಗಳ ಖಲೀಲ್‌ನ ಮೇಲೆ 3 ಪ್ರಕಣಗಳಿರುವುದು ತನಿಖೆಯ ವೇಳೆ ಬೆಳಕಿಗೆ ಬಂದಿದೆ. ಅಲ್ಲದೆ, ಆರೋಪಿಗಳು ಕೇರಳದಿಂದ ಅಕ್ರಮ ಗಾಂಜಾ ದಂಧೆಯನ್ನು ನಡೆಸಲು ಪ್ರಯತ್ನಿಸಿರುವುದು ತಿಳಿದುಬಂದಿದೆ.

ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳಿಗೆ 15 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News