ಬಾಲಕಿಯ ಚಿಕಿತ್ಸಗೆ ನೆರವಾಗಲು ಮನವಿ

Update: 2017-10-22 17:29 GMT

ಪುತ್ತೂರು, ಅ. 22: ಹೃದ್ರೋಗ ಮತ್ತು ಕ್ಯಾನ್ಸರ್‌ನಿಂದ ಬಳಲುತ್ತಿರುವ 11 ವರ್ಷದ ಬಾಲಕಿ ಶಹನಾಝ್  ಚಿಕಿತ್ಸೆಗೆ ಸಹಕಾರ ನೀಡುವಂತೆ ಕುಟುಂಬ ವಿನಂತಿಸಿದೆ.

ಪುತ್ತೂರು ತಾಲೂಕಿನ ಕೋಡಿಂಬಾಳ ಗ್ರಾಮದ ಕಡಬ ಸಮೀಪದ ಕಲ್ಲಂತಡ್ಕ ಕುತ್ಯಾಡಿ ಎಂಬಲ್ಲಿ ವಾಸವಿರುವ ಇಸಾಕ್ ಹಾಗೂ ತಾಜುನ್ನಬಿ ದಂಪತಿಯ ಪುತ್ರಿ ಶಹನಾಝ್ ಹೃದ್ರೋಗ ಮತ್ತು ರಕ್ತದ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದು, ಈ ಬಾಲಕಿಯನ್ನು ಮಂಗಳೂರಿನ ಅತ್ತಾವರದಲ್ಲಿರುವ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಶಹನಾಝ್ ಪೆರ್ಲದ ಶಾಲೆಯಲ್ಲಿ 5ನೆ ತರಗತಿಯಲ್ಲಿ ಕಲಿಯುತ್ತಿದ್ದಾಳೆ. ಕೂಲಿ ಕಾರ್ಮಿಕ ಇಸಾಕ್ ಮತ್ತು ಬೀಡಿ ಕಟ್ಟಿ ಜೀವನ ನಡೆಸುತ್ತಿರುವ ತಾಜುನ್ನಬಿ ಇವರದ್ದು ಬಡ ಕುಟುಂಬ. ಈ ಕುಟುಂಬವು ಮಗುವಿನ ಚಿಕಿತ್ಸಾ ವೆಚ್ಚವನ್ನು ಭರಿಸಲು ದಾನಿಗಳ ಸಹಾಯ ಯಾಚಿಸುತ್ತಿದ್ದಾರೆ. ದಂಪತಿಗಳಿಗೆ ನಾಲ್ವರು ಹೆಣ್ಣು ಮಕ್ಕಳಿದ್ದಾರೆ. ಗಂಡು ಮಕ್ಕಳಿಲ್ಲ. ಅವರ ಮೂರನೆಯ ಪುತ್ರಿ ಶಹನಾಝ್. ಕಾಸರಗೋಡಿನ ಪೆರ್ಲದಲ್ಲಿ ಇತ್ತೀಚಿನ ತನಕ ಬಾಡಿಗೆ ಮನೆಯಲ್ಲಿ ಈ ಕುಟುಂಬ ವಾಸವಾಗಿತ್ತು. ತಾಜುನ್ನಬಿ ಅವರು ಬೀಡಿ ಕಟ್ಟುವ ಜೊತೆಗೆ ಅವರಿವರ ಮನೆಯಲ್ಲಿ ಬಾಣಂತನ ನೋಡಿಕೊಳ್ಳುವ ಕಾಯಕವನ್ನೂ ಮಾಡಿ ಬರುವ ಆದಾಯದಿಂದ ಮನೆಯನ್ನು ನೋಡಿಕೊಳ್ಳುತ್ತಿದ್ದರು. 2 ವರ್ಷಗಳ ಹಿಂದೆ ಕಾಲಿನ ತೊಂದರೆಯಿಂದಾಗಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿರುವ ತಾಜುನ್ನಬಿ ಅವರು ಸರಿಯಾಗಿ ನಡೆದಾಡಲೂ ಕಷ್ಟ ಪಡುತ್ತಿದ್ದಾರೆ. ಆದರೂ ಮಕ್ಕಳ ಹಸಿವು ನೀಗಿಸಲು ತನ್ನ ನೊವನ್ನೂ ಮರೆತು ಕೆಲಸ ಮಾಡುತ್ತಿದ್ದರು. ಆದರೆ ಇದೀಗ ಮಗಳ ಅನಾರೋಗ್ಯ ಈ ತಾಯಿಯನ್ನು ತಲ್ಲಣಿಸುವಂತೆ ಮಾಡಿದೆ.

 ವೈದ್ಯರು ಮಗುವಿನ ಚಿಕಿತ್ಸೆಗಾಗಿ 8 ಲಕ್ಷ ರೂ. ಬೇಕಾಗಿದೆ. ನಿರಂತರ ಮೂರು ವರ್ಷಗಳ ಕಾಲ ಚಿಕಿತ್ಸೆ ಮುಂದುವರಿಸಬೇಕಾಗಿದೆ ಎಂದು ತಿಳಿಸಿದ್ದು, ಇದರಿಂದಾಗಿ ಈ ಬಡ ಕುಟುಂಬ ಕಂಗಾಲಾಗಿದೆ. ತಾಯಿ ತಾಜುನ್ನಬಿ ಮಗುವಿನ ಆರೈಕೆಗಾಗಿ ಆಸ್ಪತ್ರೆಯಲ್ಲಿಯೇ ಉಳಿದುಕೊಳ್ಳಬೇಕಾಗಿರುವುದರಿಂದ ಕೆಲಸ ಮಾಡಲೂ ಸಾಧ್ಯವಿಲ್ಲದೆ. ಕುಟುಂಬ ತುತ್ತು ಕೂಳಿಗೂ ಪರದಾಡಬೇಕಾಗಿದೆ.

ದಾನಿಗಳಲ್ಲಿ ಕಾಡಿ ಬೇಡಿ ಈಗಾಗಲೇ ಮಗುವಿನ ಚಿಕಿತ್ಸೆಗಾಗಿ 2 ಲಕ್ಷಕ್ಕೂ ಅಧಿಕ ವೆಚ್ಚ ಮಾಡಿದ್ದಾರೆ. ತನ್ನ ಮಗುವನ್ನು ಉಳಿಸಿಕೊಳ್ಳಲು ದಾನಿಗಳ ಸಹಾಯ ಯಾಚಿಸಿದ್ದಾರೆ. ಆಸಕ್ತ ದಾನಿಗಳು ತಾಜುನ್ನಬಿ ಅವರ ಖಾತೆಗೆ ಸಹಾಯ ನೀಡಬಹುದು. ವಿಜಯ ಬ್ಯಾಂಕ್ ಕಡಬ ಶಾಖೆ, ಖಾತೆ ಸಂಖ್ಯೆ- 123601011004149, ಐಎಫ್‌ಎಸ್ ಕೋಡ್-ವಿಐಜೆಬಿ0001236, ಅಥವಾ ಮೊಬೈಲ್-9400199831 ಇದನ್ನು ಸಂಪರ್ಕಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News