ಚೀನಿ ರಾಯಭಾರಿಗೆ ರಕ್ಷಣೆ ಬಿಗಿಗೊಳಿಸಲು ಪಾಕ್‌ಗೆ ಬೀಜಿಂಗ್ ಆಗ್ರಹ

Update: 2017-10-22 17:49 GMT

ಇಸ್ಲಾಮಾಬಾದ್,ಅ.22: ಪಾಕಿಸ್ತಾನದಲ್ಲಿ ನೂತನವಾಗಿ ನೇಮಕಗೊಂಡಿರುವ ತನ್ನ ರಾಯಭಾರಿಗೆ ಭದ್ರತಾ ವ್ಯವಸ್ಥೆಯನ್ನು ಬಿಗಿಗೊಳಿಸಬೇಕೆಂದು ಚೀನಾವು ಪಾಕ್ ಸರಕಾರಕ್ಕೆ ಮನವಿ ಮಾಡಿದೆಯೆಂದು ಮಾಧ್ಯಮ ವರದಿಗಳು ತಿಳಿಸಿವೆ.

  ಅಕ್ಟೋಬರ್ 19ರಂದು ಪಾಕ್ ಗೃಹ ಸಚಿವಾಲಯಕ್ಕೆ ಬರೆದ ಪತ್ರದಲ್ಲಿ ಚೀನಿ ರಾಯಭಾರಿ ಕಚೇರಿ ಈ ಮನವಿ ಮಾಡಿದೆ.ತನ್ನ ರಾಯಭಾರಿಯನ್ನು ಹತ್ಯೆಗೈಯಲು ಚೀನಾದಲ್ಲಿನ ನಿಷೇಧಿತ ಉಗ್ರಗಾಮಿ ಗುಂಪು ‘ಇಟಿಐಎಂ’ನ ಸದಸ್ಯನೊಬ್ಬ ಪಾಕಿಸ್ತಾನದೊಳಗೆ ನುಸುಳಿದೆಯೆಂದು ಅದು ಹೇಳಿದೆ.

  ಬಹುಶತಕೋಟಿ ಡಾಲರ್ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಚೀನಾ-ಪಾಕ್ ಆರ್ಥಿಕ ಕಾರಿಡಾರ್ (ಸಿಪಿಇಸಿ)ಗಾಗಿನ ವಕ್ತಾರ ಪಿಂಗ್ ಯಿಂಗ್ ಫಿ ಅವರು ಪಾಕ್ ಗೃಹಸಚಿವಾಲಯಕ್ಕೆ ಚೀನಾ ರಾಯಭಾರಿ ಹಾಗೂ ದೇಶದಲ್ಲಿ ಕೆಲಸ ಮಾಡುತ್ತಿರುವ ಇನ್ನೋರ್ವ ಚೀನಿ ರಾಜತಾಂತ್ರಿಕನ ರಕ್ಷಣೆಯನ್ನು ಬಿಗಿಗೊಳಿಸಬೇಕೆಂದು ಪಾಕ್ ಸರಕಾರವನ್ನು ಕೋರಿದ್ದಾರೆ.

ಇವರಿಬ್ಬರಿಗೆ ರಕ್ಷಣೆಯನ್ನು ಒದಗಿಸುವುದರಿಂದ ಭಯೋತ್ಪಾದಕನ ಷಡ್ಯಂತ್ರವನ್ನು ವಿಫಲಗೊಳಿಸಬಹುದು ಹಾಗೂ ಈ ಸಂಚಿನಲ್ಲಿ ಶಾಮೀಲಾಗಿರುವ ಇತರ ಉಗ್ರರನ್ನು ಕೂಡಾ ಪತ್ತೆಹಚ್ಚಬಹುದಾಗಿದೆಯೆಂದು ಅವರು ಹೇಳಿದ್ದಾರೆ. ಶಂಕಿತ ಉಗ್ರನ ಪಾಸ್‌ಪೋರ್ಟ್ ವಿವರಗಳನ್ನು ಪಿಂಗ್ ಹಂಚಿಕೊಂಡಿದ್ದು, ಆತನನ್ನು ತಕ್ಷಣವೇ ಚೀನಿ ರಾಯಭಾರಿಗೆ ಹಸ್ತಾಂತರಿಸಬೇಕೆಂದು ಆಗ್ರಹಿಸಿದ್ದಾರೆ. ಆದರೆ ಪಿಂಗ್ ಯಿಂಗ್ ಫಿ ಪತ್ರಕ್ಕೆ ಸಂಬಂಧಿಸಿ ಯಾವುದೇ ಪ್ರತಿಕ್ರಿಯೆ ನೀಡಲು ಚೀನಿ ರಾಯಭಾರಿ ಕಚೇರಿ ನಿರಾಕರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News