ಬಾಂಗ್ಲಾದೇಶಕ್ಕೆ ಯುದ್ಧ ಸ್ಮರಣಿಕೆಗಳ ಉಡುಗೊರೆ ನೀಡಿದ ಭಾರತ

Update: 2017-10-23 13:18 GMT

ಢಾಕಾ,ಅ.23: ಭಾರತವು ರವಿವಾರ 1971ರ ಬಾಂಗ್ಲಾದೇಶ ವಿಮೋಚನಾ ಯುದ್ಧದ ಸ್ಮರಣಿಕೆಗಳನ್ನು ಬಾಂಗ್ಲಾದೇಶಕ್ಕೆ ಉಡುಗೊರೆಯಾಗಿ ನೀಡಿದೆ. 1971ರಲ್ಲಿ ಪಾಕ್ ಸೇನೆಯನ್ನು ಓಡಿಸಲು ಉಭಯ ದೇಶಗಳು ಒಂದಾಗಿ ಹೋರಾಡಿದ್ದು, ಸುಮಾರು ಒಂದು ಕೋಟಿ ಬಾಂಗ್ಲಾದೇಶಿಗಳು ನಿರಾಶ್ರಿತರಾಗಿ ಭಾರತದಲ್ಲಿ ಆಶ್ರಯ ಪಡೆದು ಕೊಂಡಿದ್ದರು.

 ಇಲ್ಲಿಗೆ ಭೇಟಿ ನೀಡಿರುವ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರು ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರಿಗ ಹಸ್ತಾಂತರಿಸಿರುವ ಸ್ಮರಣಿಕೆಗಳಲ್ಲಿ ಭಾರತ ಮತ್ತು ಬಾಂಗ್ಲಾದೇಶಗಳ ಜಂಟಿ ಪಡೆಗಳು ಬಳಸಿದ್ದ ಮಿಲಿಟರಿ ಉಪಕರಣಗಳು, ಐತಿಹಾಸಿಕ ಛಾಯಾಚಿತ್ರಗಳು, ನಕಾಶೆಗಳು, ವೃತ್ತಪತ್ರಿಕೆಗಳ ತುಣುಕುಗಳು, ಸಾಕ್ಷಚಿತ್ರಗಳು ಸೇರಿದಂತೆ ಭಾರೀ ಸಂಖ್ಯೆಯ ಹಳೆಯ ಕಲಾಕೃತಿಗಳು ಮತ್ತು ದಾಖಲೆಗಳು ಸೇರಿವೆ.

ಈ ಸ್ಮರಣಿಕೆಗಳನ್ನು ಶಾಹಬಾಗ್‌ನ ಬಾಂಗ್ಲಾದೇಶ ರಾಷ್ಟ್ರೀಯ ವಸ್ತು ಸಂಗ್ರಹಾಲಯ ಮತ್ತು ಢಾಕಾದ ಸ್ವಾತಂತ್ರ ವಸ್ತು ಸಂಗ್ರಹಾಲಯಲ್ಲಿ ಪ್ರದರ್ಶನಕ್ಕಿಡಲು ಉದ್ದೇಶಿಸಲಾಗಿದೆ.

ಸ್ವರಾಜ್ ಅವರು ಹಸೀನಾರನ್ನು ಅವರ ಅಧಿಕೃತ ನಿವಾಸದಲ್ಲಿ ಭೇಟಿಯಾಗಿ ಚರ್ಚೆಗಳನ್ನು ನಡೆಸಿದರಲ್ಲದೆ ರವಿವಾರದ ಜಂಟಿ ಸಲಹಾ ಸಮಿತಿಯ ಸಭೆಯ ವಿವರಗಳನ್ನು ನೀಡಿದರು. ಭದ್ರತೆ, ವ್ಯಾಪಾರ ಮತ್ತು ಸಂಪರ್ಕ, ಅಭಿವೃದ್ಧಿ ಸಹಕಾರ, ವಿದ್ಯುತ್, ಶಕ್ತಿ ಮತ್ತು ಉಪ ಪ್ರಾದೇಶಿಕ ಸಹಕಾರ ಸೇರಿದಂತೆ ಹಲವಾರು ವಿಷಯಗಳನ್ನು ಉಭಯ ನಾಯಕರು ಚರ್ಚಿಸಿದರು.

ಸದ್ಯದ ರೊಹಿಂಗ್ಯಾ ಬಿಕ್ಕಟ್ಟು ಕುರಿತಂತೆ ಸ್ವರಾಜ್ ಅವರು ಭಾರತದ ನಿರಂತರ ಬೆಂಬಲವನ್ನು ಪುನರುಚ್ಚರಿಸಿದರು. ‘ಆಪರೇಷನ್ ಇನ್ಸಾನಿಯತ್’ನಡಿ ಭಾರತವು ಸುಮಾರು ಐದು ಲಕ್ಷ ನಿರಾಶ್ರಿತರಿಗೆ 1000 ಟನ್ ಪರಿಹಾರ ಸಾಮಗ್ರಿಗಳನ್ನು ಒದಗಿಸಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News