×
Ad

ಮದುವೆ ಕಾರ್ಯಕ್ರಮದಲ್ಲಿ ಕವನ ಸಂಕಲನ ಬಿಡುಗಡೆ

Update: 2017-10-23 20:31 IST

ಮಂಗಳೂರು, ಆ.23: ಕರಾವಳಿ ತೀರದ ಬ್ಯಾರಿ ಮುಸ್ಲಿಮರ ಮದುವೆ ಅಂದ್ಮೇಲೆ ಆಡಂಬರ ಇದ್ದೇ ಇದೆ. ಅಲ್ಲಿ ಸಾಮಾಜಿಕ, ಧಾರ್ಮಿಕ, ರಾಜಕೀಯ ವಿಷಯದ ಬಗ್ಗೆ ಮಾತಿನ ಲಹರಿ ತೇಲಿತೇ ವಿನ: ಸಾಹಿತ್ಯದ ಬಗ್ಗೆ ಚರ್ಚೆಯಾಗುವುದು ವಿರಳ. ಆದರೆ, ಕವಿ ಹೃದಯಿ ವರನೊಬ್ಬ ತನ್ನ ಮದುವೆಯ ದಿನ ತಾನು ಬರೆದ ಕವನಗಳ ಸಂಕಲನವೊಂದನ್ನು ಸ್ವತ: ತನ್ನ ತಂದೆಯಿಂದಲೇ ಬಿಡುಗಡೆಗೊಳಿಸಿ ಸಾಹಿತ್ಯದ ಬಗ್ಗೆ ಚರ್ಚೆ ಹುಟ್ಟು ಹಾಕುವ ಮೂಲಕ ಗಮನ ಸೆಳೆದಿದ್ದಾರೆ.

ಉಪ್ಪಿನಂಗಡಿ ಸಮೀಪದ ಪುತ್ತಿಲ ಗ್ರಾಮದ ತುಂಬೆದಡ್ಕ ಉಳಿ ನಿವಾಸಿ ಹುಸೈನ್-ಬೀಫಾತಿಮಾ ದಂಪತಿಯ ಪುತ್ರ ಯಂಶ ಬೇಂಗಿಲ (ಮುಹಮ್ಮದ್ ಶಮೀರ್) ಅವರೇ ತನ್ನ ಮದುವೆ ಕಾರ್ಯಕ್ರಮದಲ್ಲಿ ಕೃತಿ ಬಿಡುಗಡೆ, ಕವಿಗೋಷ್ಠಿ ಹಮ್ಮಿಕೊಂಡ ಈ ಕವಿ ಹೃದಯಿ ವರ.

ತುಂಬೆದಡ್ಕ ಎಂಬ ಕುಗ್ರಾಮದ ಹುಸೈನ್ ಯಾನೆ ಹುಸೈನಾಕ ಕೂಲಿ ಕೆಲಸ ಮಾಡಿಕೊಂಡರೆ, ಬೀಫಾತಿಮಾ ಬೀಡಿ ಕಟ್ಟಿ ಮಕ್ಕಳನ್ನು ಸಾಕಿ ಸಲಹಿದ್ದರು. ಅವರಿಗೆ ಕಥೆ, ಕವನ, ಕಾದಂಬರಿ, ಸಾಹಿತ್ಯ, ಕೃತಿ ಅಂದರೆ ಏನೂಂತ ಗೊತ್ತಿಲ್ಲ. ಆದರೆ ಅವರ ಪುತ್ರ ಯಂಶ ಬೇಂಗಿಲ ಕವನ ರಚಿಸುವ ಮೂಲಕ ಮನೆ ಮಾತಾದರು. ಸಾಮಾಜಿಕ ಜಾಲತಾಣ ಬಂದ ಬಳಿಕವಂತೂ ಯಂಶ ಬೇಂಗಿಲ ಹಿಂದಿರುಗಿ ನೋಡಿದ್ದೇ ಇಲ್ಲ. ಮಗನಿಗೆ ಮದುವೆ ಮಾಡಲು ಹೆತ್ತವರು ನಿರ್ಧರಿಸಿದಾಗ ಯಂಶನ ಸ್ನೇಹಿತರು ‘ನಿನ್ನ ಮದುವೆ ಕಾರ್ಯಕ್ರಮದಲ್ಲಿ ಪುಸ್ತಕವೊಂದನ್ನು ಬಿಡುಗಡೆಗೊಳಿಸಲೇಬೇಕು’ ಎಂದು ಒತ್ತಾಯಿಸಿದರು. ಆ ಬಗ್ಗೆ ಈ ಹಿಂದೆಯೇ ಕನಸು ಕಂಡಿದ್ದ ಯಂಶ ಕೂಡ ‘ಇಲ್ಲ’ ಎನ್ನಲಿಲ್ಲ. ತನ್ನ ಹಾಗು ಗೆಳೆಯರ ಆಸೆಯನ್ನು ಹೆತ್ತವರ ಬಳಿ ವ್ಯಕ್ತಪಡಿಸಿದಾಗ ಅವರೂ ಒಪ್ಪಿಗೆ ಸೂಚಿಸಿದರು.

ಅಂತೂ ಅ.15ರಂದು ಸ್ವಗೃಹದಲ್ಲಿ ನಡೆದ ವಿವಾಹ ಕಾರ್ಯಕ್ರಮದಲ್ಲಿ ಸೇರಿದ್ದ ಕವಿ ಮನಸ್ಸಿನ ಮಾತುಗಳನ್ನು ಕೇಳಿ ಸ್ವತ: ತಂದೆ ತಾಯಿಯ ಕಣ್ಣಂಚಿನಲ್ಲಿ ಸಂತಸದ ಕಣ್ಣೀರು ಇಳಿಯಿತು.

ಮದುವೆ ವಿಧಿವಿಧಾನ ಮುಗಿದ ತಕ್ಷಣ ಯಂಶ ಬೇಂಗಿಲ ರಚಿಸಿದ ಕವನ ಸಂಕಲನ ‘ಕವಿತೆಯೆಂದರೆ ಉಮ್ಮ’ ಕೃತಿ ಬಿಡುಗಡೆಗೊಳಿಸಲಾಯಿತು. ಈ ಸಂದರ್ಭ ಯಂಶ ಅವರ ಸ್ನೇಹಿತ ಕವಿ ‘ಸ್ನೇಹಜೀವಿ ಅಡ್ಕ’ ಅವರ ಕೃತಿಯೂ ಬಿಡುಗಡೆಗೊಂಡಿತು.

ರಾಜ್ಯ ಹಜ್ ಕಮಿಟಿಯ ಸದಸ್ಯ ಕೆ.ಎಂ.ಸಿದ್ದೀಕ್ ಮೋಂಟುಗೋಳಿಯ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಬೇಲೂರು ರಘುನಂದನ, ಉದಯ ಕುಮಾರ್ ಹಬ್ಬು, ಜಿಎಂ ಕಾಮಿಲ್ ಸಖಾಫಿ, ಶಾಫಿ ಸಅದಿ ನಂದಾವರ, ಎಸ್.ಪಿ. ಹಂಝ ಸಖಾಫಿ, ಹಮೀದ್ ಬಜ್ಪೆ, ಸುಳ್ಯ ಭೀಮರಾವ್ ಲಾಷ್ಟರ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಶುಭ ಹಾರೈಸಿದರು.

ಇದೇ ವೇಳೆ ವಿಲ್ಸನ್ ಕಟೀಲ್, ನವೀನ್ ಪಿರೇರಾ, ಮಂಜುನಾಥ ಸರ್ಜಾಪುರ, ನಝೀರ್ ಬಾಪು ಅಮ್ಮೆಂಬಳ, ಅಬ್ದುಲ್ ಸತ್ತಾರ್ ಪರಪ್ಪು, ಸಫ್ವಾನ್ ಸವಣೂರು, ಗಣೇಶ್ ಆದ್ಯಪಾಡಿ, ದಿನೇಶ್ ಶಿರಸಿ, ಸೋಮಪ್ಪ ಪೂಜಾರಿ ಕಿಲ್ಲೂರು, ಸದಾನಂದ ಮುಂಡಾಜೆ ಕವನ ವಾಚಿಸಿದರು. ಅಷ್ಟೇ ಅಲ್ಲ, ಎಲ್ಲರ ಒತ್ತಾಯದ ಮೇರೆಗೆ ವರಮಹಾಶಯ ಯಂಶ ಬೇಂಗಿಲ ಕೂಡ ಕವನ ವಾಚಿಸಿದರು.

ಮಂಗಳೂರಿನ ‘ಪೆನ್ ಫ್ರೆಂಡ್ಸ್’ ಗೆಳೆಯರ ಸಹಕಾರ ಮತ್ತು ಒತ್ತಾಸೆಯೊಂದಿಗೆ ನಡೆದ ಈ ಕಾರ್ಯಕ್ರಮವನ್ನು ಡಾ. ಸಿ.ಎಂ. ಹನೀಫ್ ಬೆಳ್ಳಾರೆ ನಿರೂಪಿಸಿ ದರು. ಬಿ.ಎಸ್.ಇಸ್ಮಾಯೀಲ್ ಕುತ್ತಾರ್ ಸ್ವಾಗತಿಸಿದರು.

‘ನಾನು 8ನೆ ತರಗತಿಯಲ್ಲಿದ್ದಾಗಲೇ ಸಾಹಿತ್ಯದ ಸೆಳೆತವಿತ್ತು. ಓದುವುದರ ಜೊತೆಗೆ ಹನಿಗವನ ಗೀಚುತ್ತಿದ್ದೆ. ನನ್ನ ಅಣ್ಣ ಅಬೂಬಕರ್ ಲತೀಫಿ ಬೇಂಗಿಲ ಕೂಡ ಲೇಖಕ. ನನ್ನ ಬರೆಹಕ್ಕೆ ಅವರು ಪ್ರೋತ್ಸಾಹ ನೀಡುತ್ತಾ ಬಂದರು. ಅದು ನನ್ನ ಸಾಹಿತ್ಯ ಚಟುವಟಿಕೆಗೆ ಹೊರ ತಿರುವು ನೀಡಿತು. ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಕವನಗಳು ಪ್ರಕಟವಾದಾಗ ತುಂಬಾ ಕುಶಿಯಾಗುತ್ತಿತ್ತು. ಮೊನ್ನೆ ನನ್ನ ಮದುವೆ ಕಾರ್ಯಕ್ರಮದಲ್ಲಿ ಕೃತಿ ಬಿಡುಗಡೆ ಹಾಗೂ ಕವಿಗೋಷ್ಠಿಯು ಅತ್ಯಂತ ಯಶಸ್ವಿಯಾಗಿ ನಡೆಯಿತು. ಇದೆಲ್ಲಾ ಅನಿರೀಕ್ಷಿತ. ಬ್ಯಾರಿ ಮುಸ್ಲಿಮರ ಮದುವೆಯಲ್ಲೂ ಇಂತಹ ಸಾಹಿತ್ಯ ಕಾರ್ಯಕ್ರಮ ಅಳವಡಿಸಿಕೊಳ್ಳಬಹುದು ಎಂಬ ಸಂದೇಶ ಸಾರಿದ ತೃಪ್ತಿ ನನಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ನನ್ನ ತಂದೆಯೇ ನನ್ನ ಕೃತಿಯನ್ನು ಬಿಡುಗಡೆಗೊಳಿಸಿರುವ ಆ ಕ್ಷಣವನ್ನು ಮರೆಯಲು ಸಾಧ್ಯವಿಲ್ಲ’ ಎಂದು ಯಂಶ ಬೇಂಗಿಲ ಹೇಳುತ್ತಾರೆ.

‘ಬ್ಯಾರಿ ಮುಸ್ಲಿಮರ ಮದುವೆಗಳಲ್ಲೂ ಸಾಹಿತ್ಯ ಚಟುವಟಿಕೆಗಳನ್ನು ಆಯೋಜಿಸುವ ಮನಸ್ಥಿತಿ ಹೊಸ ಬದಲಾವಣೆಯ ಮುನ್ಸೂಚನೆ ನೀಡಿದೆ ಎಂಬ ಅಭಿಪ್ರಾಯ ಸಾರ್ವತ್ರಿಕವಾಗಿ ವ್ಯಕ್ತವಾಗುತ್ತಿವೆ’ ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೆ.ಎಂ. ಅಬೂಬಕರ್ ಸಿದ್ದೀಕ್ ಮೋಂಟುಗೋಳಿ ಪ್ರತಿಕ್ರಿಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News