ರೊಹಿಂಗ್ಯಾರನ್ನು ಹಿಂದಕ್ಕೆ ಕರೆಸಿಕೊಳ್ಳಬಾರದೆಂದು ಒತ್ತಾಯಿಸಿ ಬೌದ್ಧರ ಧರಣಿ

Update: 2017-10-23 15:35 GMT

ಸಿಟ್ವೆ (ಮ್ಯಾನ್ಮಾರ್), ಅ. 23: ಸೇನೆಯ ದಮನ ಕಾರ್ಯಾಚರಣೆಗೆ ಬೆದರಿ ಮ್ಯಾನ್ಮಾರ್‌ನಿಂದ ಬಾಂಗ್ಲಾದೇಶಕ್ಕೆ ಪಲಾಯನಗೈದಿರುವ ಸುಮಾರು 6 ಲಕ್ಷ ರೊಹಿಂಗ್ಯಾ ಮುಸ್ಲಿಮರನ್ನು ವಾಪಸ್ ಕರೆಸಿಕೊಳ್ಳಬಾರದು ಎಂದು ಸರಕಾರವನ್ನು ಒತ್ತಾಯಿಸಿ ನೂರಾರು ತೀವ್ರವಾದಿ ಬೌದ್ಧರು ರವಿವಾರ ಮೆರವಣಿಗೆ ನಡೆಸಿದರು.

ರೊಹಿಂಗ್ಯಾ ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುವ ರಖೈನ್ ರಾಜ್ಯದ ರಾಜಧಾನಿ ಸಿಟ್ವೆಯಲ್ಲಿ ಪ್ರತಿಭಟನೆ ನಡೆಯಿತು. ರಖೈನ್ ರಾಜ್ಯದಲ್ಲಿ 2012ರಲ್ಲಿ ನಡೆದ ಕೋಮುಗಲಭೆಯವರೆಗೆ ಈ ರಾಜ್ಯದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ರೊಹಿಂಗ್ಯಾ ಮುಸ್ಲಿಮರು ವಾಸಿಸುತ್ತಿದ್ದರು. ಆ ಕೋಮುಗಲಭೆಯ ಬಳಿಕ ಭಾರೀ ಪ್ರಮಾಣದಲ್ಲಿ ರೊಹಿಂಗ್ಯಾ ಮುಸ್ಲಿಮರು ದೇಶ ತೊರೆದರು.

ಹೊಸದಾಗಿ ಈ ವರ್ಷದ ಆಗಸ್ಟ್ 25ರಂದು ಮತ್ತೊಮ್ಮೆ ಹಿಂಸೆ ಸ್ಫೋಟಗೊಂಡಂದಿನಿಂದ ಈವರೆಗೆ ಸುಮಾರು 6 ಲಕ್ಷ ನಿರಾಶ್ರಿತರು ಮ್ಯಾನ್ಮಾರ್‌ನಿಂದ ಬಾಂಗ್ಲಾದೇಶಕ್ಕೆ ಪಲಾಯನಗೈದಿದ್ದಾರೆ.

ಮ್ಯಾನ್ಮಾರ್ ಸರಕಾರವು ರೊಹಿಂಗ್ಯಾರನ್ನು ಜನಾಂಗೀಯ ಗುಂಪು ಎಂಬುದಾಗಿ ಪರಿಗಣಿಸುವುದಿಲ್ಲ. ಬದಲಿಗೆ, ಅವರು ದೇಶದಲ್ಲಿ ಅಕ್ರಮವಾಗಿ ವಾಸಿಸುತ್ತಿರುವ ಬಾಂಗ್ಲಾದೇಶದ ಬಂಗಾಳಿ ವಲಸಿಗರು ಎಂಬುದಾಗಿ ಹೇಳುತ್ತಿದೆ. ದೇಶದ ಅಧಿಕೃತ 135 ಜನಾಂಗೀಯ ಗುಂಪುಗಳ ಪಟ್ಟಿಯಲ್ಲಿ ರೊಹಿಂಗ್ಯಾರನ್ನು ಹೊರಗಿಡಲಾಗಿದೆ ಹಾಗೂ ಅವರಿಗೆ ಪೌರತ್ವ ನಿರಾಕರಿಸಲಾಗಿದೆ.

ನಿಭಾಯಿಸಲಾಗದ ಪರಿಸ್ಥಿತಿ: ವಿಶ್ವಸಂಸ್ಥೆಗೆ ಬಾಂಗ್ಲಾದೇಶ ಮೊರೆ

ಮ್ಯಾನ್ಮಾರ್‌ನಲ್ಲಿ ಹಿಂಸಾಚಾರಕ್ಕೆ ಬೆದರಿ ಪರಾರಿಯಾಗಿರುವ ಸುಮಾರು 10 ಲಕ್ಷ ರೊಹಿಂಗ್ಯಾ ಮುಸ್ಲಿಮರು ಬಾಂಗ್ಲಾದೇಶದಲ್ಲಿದ್ದು, ‘ನಿಭಾಯಿಸಲಾಗದ ಪರಿಸ್ಥಿತಿ’ ಏರ್ಪಟ್ಟಿದೆ ಎಂದು ವಿಶ್ವಸಂಸ್ಥೆಯ ಸಭೆಯೊಂದರಲ್ಲಿ ಬಾಂಗ್ಲಾದೇಶ ಹೇಳಿದೆ.

ಬಿಕ್ಕಟ್ಟಿಗೆ ಶಾಶ್ವತ ಪರಿಹಾರವೊಂದನ್ನು ಕಂಡುಹಿಡಿಯುವ ನಿಟ್ಟಿನಲ್ಲಿ ತನ್ನ ದೇಶ ಮ್ಯಾನ್ಮಾರ್‌ನೊಂದಿಗೆ ವ್ಯವಹರಿಸಲು ಪ್ರಯತ್ನಿಸುತ್ತಿದೆ ಎಂದು ಜಿನೇವದಲ್ಲಿ ವಿಶ್ವಸಂಸ್ಥೆಗೆ ಬಾಂಗ್ಲಾದೇಶದ ರಾಯಭಾರಿ ಶಮೀಮ್ ಅಹ್ಸಾನ್ ದಾನಿಗಳ ಸಭೆಯೊಂದರಲ್ಲಿ ತಿಳಿಸಿದರು.

ಆದರೆ, ರೊಹಿಂಗ್ಯಾ ಮುಸ್ಲಿಮರು ಬಾಂಗ್ಲಾದೇಶದ ಅಕ್ರಮ ವಲಸಿಗರು ಎಂದು ಬಿಂಬಿಸುವ ಪ್ರಚಾರದಲ್ಲಿ ನಿರಂತರವಾಗಿ ತೊಡಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News