ಅಂಟಾರ್ಕಟಿಕಾ ಯಾತ್ರೆಗೆ ಎಂಐಟಿಯ ಡಾ.ಬಾಲಕೃಷ್ಣ ಆಯ್ಕೆ

Update: 2017-10-23 17:03 GMT

ಮಣಿಪಾಲ, ಅ.23: ಕೇಂದ್ರ ಸರಕಾರದ ಭೂವಿಜ್ಞಾನ ಸಚಿವಾಲಯವು ಆಯೋಜಿಸುತ್ತಿರುವ 37ನೆ ಭಾರತೀಯ ಅಂಟಾರ್ಕಟಿಕಾ (ದಕ್ಷಿಣ ಧ್ರುವ) ದಂಡಯಾತ್ರೆಗೆ ಮಣಿಪಾಲ ವಿವಿಯ ವಿಜ್ಞಾನಿ ಡಾ.ಕೆ. ಬಾಲಕೃಷ್ಣ ಆಯ್ಕೆಯಾಗಿದ್ದಾರೆ. ಡಾ.ಬಾಲಕೃಷ್ಣ ಮುಂದಿನ ತಿಂಗಳು ಅಲ್ಲಿಗೆ ತೆರಳಲಿದ್ದಾರೆ.

ದೇಶಾದ್ಯಂತದಿಂದ ಸುಮಾರು 60 ಮಂದಿ ವಿಜ್ಞಾನಿಗಳು ಈ ದಂಡಯಾತ್ರೆಯಲ್ಲಿ ಪಾಲ್ಗೊಳ್ಳಲು ಆಯ್ಕೆಯಾಗಿದ್ದು, ಅವರಲ್ಲಿ ಡಾ.ಬಾಲಕೃಷ್ಣ ಸಹ ಒಬ್ಬರಾಗಿದ್ದಾರೆ. ಖಗೋಳ ವಿಜ್ಞಾನ, ಭೂವಿಜ್ಞಾನ, ನೀರು-ಗಾಳಿಯ ಮಾಲಿನ್ಯ, ಭೂಮಿಯ ವಾತಾವರಣದಲ್ಲಾಗುತ್ತಿರುವ ಬದಲಾವಣೆ, ವೈದ್ಯಕೀಯ ವಿಜ್ಞಾನ ಮುಂತಾದ ಕ್ಷೇತ್ರಗಳಲ್ಲಿ ಭಾರತೀಯ ತಂಡ ಸಂಶೋಧನೆ ಗಳನ್ನು ನಡೆಸಲಿದೆ.

ಡಾ.ಬಾಲಕೃಷ್ಮ ಅವರು ಧಕ್ಷಿಣ ಧ್ರುವದಲ್ಲಿರುವ ಭಾರತೀಯ ಸಂಶೋಧನಾ ಕೇಂದ್ರಗಳಾದ ‘ಮೈತ್ರಿ’ ಹಾಗೂ ‘ಭಾರತಿ’ಯಲ್ಲಿ ಸುಮಾರು ಮೂರು ತಿಂಗಳು ಕಳೆಯಲಿದ್ದಾರೆ. ಈ ಸಂದರ್ಭ ಅವರು ಅಲ್ಲಿನ ಹಿಮಗಡ್ಡೆಗಳು, ಸರೋವರಗಳು ಹಾಗೂ ಅಂಟಾರ್ಕಟಿಕ್ ಸಾಗರದ ರಾಸಾಯನಿಕ ಗುಣ-ಲಕ್ಷಣಗಳ ಕುರಿತು ಅಧ್ಯಯನ ನಡೆಸಲಿದ್ದಾರೆ. ಈ ಮಾಹಿತಿಯನ್ನು ಭಾರತದ ಜಲಸಮೂಹದ ಗುಣಲಕ್ಷಣಗಳೊಡನೆ ತುಲನೆ ಮಾಡಲಾಗುವುದು.

ಡಾ.ಕೆ.ಬಾಲಕೃಷ್ಣ ಅವರು ಮಣಿಪಾಲದ ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ)ಯ ಸಿವಿಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಭೂವಿಜ್ಞಾನ ಪ್ರಾಧ್ಯಾಪಕಾಗಿದ್ದಾರೆ. ಮಣಿಪಾಲ ವಿವಿಯ ಸಂಶೋಧಕ-ವಿಜ್ಞಾನಿ ಯೊಬ್ಬರು ಭಾರತೀಯ ಅಂಟಾರ್ಕಟಿಕಾ ದಂಡಯಾತ್ರೆಯಲ್ಲಿ ಪಾಲ್ಗೊಳ್ಳುತ್ತಿರುವುದು ಇದೇ ಮೊದಲು. ಕೇಂದ್ರ ಸರಕಾರ ಹಾಗೂ ಮಣಿಪಾಲ ವಿವಿ ಇವರ ದಂಡಯಾತ್ರೆಯನ್ನು ಪ್ರಾಯೋಜಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News