ಕೆಎಸ್‌ಸಿಎ ಅಂಡರ್ 16 ಅಂತರ್ ವಲಯ ಕ್ರಿಕೆಟ್: ಮಿಂಚಿನ ಮಂಗಳೂರು ವಲಯದ ಮ್ಯಾಕ್ನಿಲ್, ಕರುಂಬಯ್ಯ

Update: 2017-10-23 16:53 GMT

ಬೆಂಗಳೂರು, ಅ.23: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಆಶ್ರಯದಲ್ಲಿ ಇಲ್ಲಿ ನಡೆದಿರುವ 16 ವರ್ಷದೊಳಗಿನ ಬಾಲಕರ ಅಂತರ್ ವಲಯ ಕ್ರಿಕೆಟ್ ಪಂದ್ಯಾಟದಲ್ಲಿ ಮಂಗಳೂರು ವಲಯ ತಂಡ, ಬೆಂಗಳೂರಿನ ಸಂಯುಕ್ತ ನಗರ ತಂಡದ ವಿರುದ್ಧ ಪ್ರಥಮ ಇನ್ನಿಂಗ್ಸ್ ಮುನ್ನಡೆಯ ಮೂಲಕ ಮೇಲುಗೈ ಸಾಧಿಸಿ 3 ಅಂಕಗಳನ್ನು ಪಡೆಯಿತು.

ಮೊದಲು ಬ್ಯಾಟಿಂಗ್ ನಡೆಸಿದ ಸಂಯುಕ್ತ ನಗರ ತಂಡ ಪೃಥ್ವಿ (68), ರೋಹನ್ (53) ಇವರ ಬ್ಯಾಟಿಂಗ್ ನೆರವಿನಿಂದ 79.4 ಓವರುಗಳಲ್ಲಿ 180 ರನ್‌ಗಳನ್ನು ಗಳಿಸಿ ಆಲೌಟಾಯಿತು. ಮಂಗಳೂರು ತಂಡದ ಕರುಂಬಯ್ಯ ತಮ್ಮ 22 ಓವರುಗಳ ಲೆಗ್ ಸ್ಪಿನ್ ಬೌಲಿಂಗ್‌ನಲ್ಲಿ 41 ರನ್‌ಗಳನ್ನು ನೀಡಿ 5 ವಿಕೆಟ್‌ಗಳನ್ನು ಗಳಿಸಿ ಮಿಂಚಿದರು.

ಇದಕ್ಕೆ ಉತ್ತರವಾಗಿ ಮಂಗಳೂರು ವಲಯ ತಂಡ, ಆರಂಭಕಾರ ಮ್ಯಾಕ್ನಿಲ್ ನೊರೊನ್ಹಾ ಅವರ ಅತ್ಯಾಕರ್ಷಕ ಅಜೇಯ 140 ರನ್‌ಗಳ (279ಬಾಲು, 18 ಬೌಂಡರಿ, ಒಂದು ಸಿಕ್ಸ್) ನೆರವಿನಿಂದ 90 ಓವರುಗಳ ಆಟ ಮುಗಿದಾಗ ಐದು ವಿಕೆಟ್‌ಗೆ 253 ರನ್‌ಗಳಿಸಿ ಮುನ್ನಡೆ ಸಾಧಿಸಿತು. ಮ್ಯಾಕ್ನಿಲ್ ಅವರು ಅಝಾನ್ (38) ರೊಂದಿಗೆ ಮೊದಲ ವಿಕೆಟ್‌ಗೆ 62 ರನ್ ಸೇರಿಸಿದ ು. ಅರವಿಂದ್ 31 ರನ್ ಗಳಿಸಿದರು.

ಮಂಗಳೂರು ವಲಯ ತಂಡ ತನ್ನ ಮೊದಲ ಪಂದ್ಯದಲ್ಲಿ ಧಾರವಾಡ ತಂಡದ ವಿರುದ್ಧ ಬ್ಯಾಟಿಂಗ್‌ನಲ್ಲಿ ಕಳಪೆ ನಿರ್ವಹಣೆ ತೋರಿಸಿತು. ಧಾರವಾಡದ 271 ರನ್‌ಗಳಿಗೆ ಉತ್ತರವಾಗಿ ಮಂಗಳೂರು ಪ್ರಥಮ ಇನಿಂಗ್ಸ್‌ನಲ್ಲಿ ಕೇವಲ 88 ರನ್‌ಗಳಿಗೆ ಆಲೌಟಾಯಿತು. ಎರಡನೇ ಇನ್ನಿಂಗ್ಸ್‌ನಲ್ಲಿ ಅದು 29 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡಿದ್ದಾಗ ಪಂದ್ಯ ಡ್ರಾಗೊಂಡಿತು. ಈ ಪಂದ್ಯದಿಂದ ಧಾರವಾಡ ವಲಯ 3, ಮಂಗಳೂರು ವಲಯ 1 ಅಂಕವನ್ನು ಗಳಿಸಿತ್ತು.

ಕಾರ್ಯದರ್ಶಿ ಇಲೆವೆನ್ ವಿರುದ್ಧದ ಎರಡನೆಯ ಪಂದ್ಯದಲ್ಲಿ ಮಂಗಳೂರು ವಲಯ 92 ರನ್‌ಗಳಿಗೆ ಅಲೌಟಾಗಿತ್ತು. ಉತ್ತರವಾಗಿ ಕಾರ್ಯದರ್ಶಿ ತಂಡ 231 ರನ್ ಗಳಿಸಿ ಪ್ರಥಮ ಇನ್ನಿಂಗ್ಸ್ ಮುನ್ನಡೆ ಪಡೆಯಿತು. ಎರಡನೆ ಇನಿಂಗ್ಸ್ ನಲ್ಲಿ ಮಂಗಳೂರು ತಂಡ ಅಝಾನ್ (45), ರವೀಂದ್ (ಅಜೇಯ 43), ಮ್ಯಾಕ್ನಿಲ್ (34) ಇವರ ಉತ್ತಮ ಆಟದ ಮೂಲಕ 67 ಓವರುಗಳಲ್ಲಿ ಆರು ವಿಕೆಟ್‌ಗಳಿಗೆ 159 ರನ್ ಗಳಿಸಿದ್ದಾಗ ಪಂದ್ಯ ಮುಕ್ತಾಯಗೊಂಡಿತು. ಪ್ರಥಮ ಇನಿಂಗ್ಸ್ ಮುನ್ನಡೆ ಆಧಾರದಲ್ಲಿ ಕಾರ್ಯದರ್ಶಿ ತಂಡ 3 ಹಾಗೂ ಮಂಗಳೂರು ವಲು ತಂಡ 1 ಅಂಕವನ್ನು ಪಡೆದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News