ಮಲಾರ್: ನಾಪತ್ತೆಯಾಗಿದ್ದ ಯುವಕನ ಮೃತದೇಹ ಪತ್ತೆ
ಮಂಗಳೂರು, ಅ. 24: ಎರಡು ದಿನಗಳ ಹಿಂದೆ ಮನೆಯಿಂದ ಹೊರಟಿದ್ದ ಯುವಕನೋರ್ವನ ಮೃತದೇಹ ಮಂಗಳವಾರ ಮಧ್ಯಾಹ್ನ ಮುಳಿಹಿತ್ಲು ಸಮೀಪದ ನದಿಯಲ್ಲಿ ಪತ್ತೆಯಾಗಿದೆ.
ಮೃತರನ್ನು ಮಲಾರ್ ಅಕ್ಷರನಗರದ ನಿವಾಸಿ ಅಬ್ದುರ್ರಝಾಕ್ ಎಂಬವರ ಪುತ್ರ ಅನ್ಸಾರ್ (25) ಎಂದು ಗುರುತಿಸಲಾಗಿದೆ. ಇವರು ಹಣಕಾಸು ವ್ಯವಹಾರದಿಂದಾಗಿ ಜೀವನದಲ್ಲಿ ಜಿಗುಪ್ಸೆಗೊಂಡು ನೇತ್ರಾವತಿ ನದಿಗೆ ಹಾರಿ ಆತ್ಮೆಹತ್ಯೆ ಮಾಡಿಕೊಂಡಿದ್ದಾರೆ ಶಂಕಿಸಲಾಗಿದೆ.
ಅನ್ಸಾರ್ ರವಿವಾರ ರಾತ್ರಿ ಸುಮಾರು 10 ಗಂಟೆಗೆ ಮನೆಯಲ್ಲಿ ಊಟ ಮಾಡಿ ತನ್ನ ನೆರೆಮನೆಯ ರಾಝಿಕ್ (19) ಎಂಬಾತನೊಂದಿಗೆ ದ್ವಿಚಕ್ರ ವಾಹನದಲ್ಲಿ ಮಂಗಳೂರಿಗೆ ಬಂದಿದ್ದರು. ಮಂಗಳೂರು ನಗರ, ಮುಳಿಹಿತ್ಲು, ಮುಗೇರು ಮೊದಲಾದ ಕಡೆಗಳಲ್ಲಿ ಸುತ್ತಾಡಿದ್ದು, ಇದೇ ಸಂದರ್ಭ ರಾಝಿಕ್ ಮನೆಗೆ ಹೋಗುವಂತೆ ಅನ್ಸಾರ್‌ರನ್ನು ಒತ್ತಾಯಿಸಿದ್ದ ಎನ್ನಲಾಗಿದೆ.
ರಾಝಿಕ್‌ನ ಒತ್ತಾಯಕ್ಕೆ ಕೊನೆಗೂ ಮನೆಯ ಕಡೆಗೆ ಹೊರಟ ಅನ್ಸಾರ್ ಸೋಮವಾರ ಮುಂಜಾನೆ ಸುಮಾರು 3 ಗಂಟೆ ಹೊತ್ತಿಗೆ ನೇತ್ರಾವತಿ ಸೇತುವೆಯಲ್ಲಿ ದ್ವಿಚಕ್ರ ವಾಹನವನ್ನು ನಿಲ್ಲಿಸಿ ತನ್ನ ಎರಡೂ ಮೊಬೈಲ್‌ಗಳನ್ನು ಸ್ವಿಚ್ಡ್ ಆಫ್ ಮಾಡಿ ರಾಝಿಕ್‌ನ ಕೈಗಿಟ್ಟು ಮನೆಗೆ ತೆರಳುವಂತೆ ಹೇಳಿದ್ದರೆನ್ನಲಾಗಿದೆ. ಈ ಸಂದರ್ಭದಲ್ಲಿ ರಾಝಿಕ್ ತನಗೆ ಒಬ್ಬನೇ ಹೋಗಲು ಭಯವಾಗುತ್ತಿದ್ದು, ನೀನೂ ಬರುವಂತೆ ಹೇಳಿದ್ದ. ಆದರೂ ಅನ್ಸಾರ್ ಆತನನ್ನು ಒಂಟಿಯಾಗಿ ಕಳುಹಿಸಿಕೊಟ್ಟು ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬೇಕೆಂದು ಕುಟುಂಬ ಮೂಲಗಳು ತಿಳಿಸಿವೆ.
ಮಂಗಳವಾರ ಮಧ್ಯಾಹ್ನ ಸುಮಾರು 3 ಗಂಟೆಯ ಹೊತ್ತಿಗೆ ಅನ್ಸಾರ್ ಮೃತದೇಹವು ಮುಳಿಹಿತ್ಲುವಿನ ನದಿ ಕಿನಾರೆಯಲ್ಲಿ ಪತ್ತೆಯಾಗಿದೆ. ವೆನ್ಲಾಕ್ ಆಸ್ಪತ್ರೆಯಲ್ಲಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿ ರಾತ್ರಿ ಸುಮಾರು 7:30ಕ್ಕೆ ಅನ್ಸಾರ್ ಮೃತದೇಹವನ್ನು ಮನೆಯವರಿಗೆ ಹಸ್ತಾಂತರಿಸಲಾಗಿದೆ.
ಮಂಗಳೂರು ತಾಲೂಕು ಪಂಚಾಯತ್ ಅಧ್ಯಕ್ಷ ಮುಹಮ್ಮದ್ ಮೋನು ಅವರು ಸ್ಥಳಕ್ಕೆ ಭೇಟಿ ನೀಡಿದರು.