7 ಲ.ಕೋ.ರೂ.ವೆಚ್ಚದ ರಾಷ್ಟ್ರೀಯ ಹೆದ್ದಾರಿ ಯೋಜನೆಗೆ ಸಂಪುಟದ ಹಸಿರು ನಿಶಾನೆ
ಹೊಸದಿಲ್ಲಿ,ಅ.24: 2022ರ ವೇಳೆಗೆ ಸುಮಾರು 6.9 ಲ.ಕೋ.ರೂ.ವೆಚ್ಚದಲ್ಲಿ ಅಂದಾಜು 83,000 ಕಿ.ಮೀ.ಉದ್ದದ ರಸ್ತೆಗಳ ಅಭಿವೃದ್ಧಿ ಮತ್ತು ವಿಸ್ತರಣೆಯ, ಈವರೆಗಿನ ಅತ್ಯಂತ ಬೃಹತ್ ಹೆದ್ದಾರಿ ಅಭಿವೃದ್ಧಿ ಯೋಜನೆಗೆ ಕೇಂದ್ರ ಸಂಪುಟವು ಮಂಗಳವಾರ ತನ್ನ ಒಪ್ಪಿಗೆಯನ್ನು ನೀಡಿದೆ. ದೇಶದ ಗಡಿ ಪ್ರದೇಶಗಳನ್ನು ಸಂಪರ್ಕಿಸುವ ನೂತನ 28,400 ಕಿ.ಮೀ.ಉದ್ದದ ಭಾರತಮಾಲಾ ಹೆದ್ದಾರಿ ನಿರ್ಮಾಣ ಕಾಮಗಾರಿಯು ಇದರಲ್ಲಿ ಸೇರಿದೆ.
ಹಣಕಾಸು ಚಟುವಟಿಕೆಗಳಿಗೆ ಒತ್ತು ನೀಡುವ ಮತ್ತು ಮುಂದಿನ ಐದು ವರ್ಷಗಳಲ್ಲಿ ದೇಶಾದ್ಯಂತ ಕನಿಷ್ಠ 32 ಕೋಟಿ ಮಾನವದಿನಗಳನ್ನು ಸೃಷ್ಟಿಸುವ ಉದ್ದೇಶವನ್ನು ಹೊಂದಿರುವ ಈ ಸಮಗ್ರ ಯೋಜನೆಯು ಎರಡು ನಿಗದಿತ ತಾಣಗಳ ನಡುವೆ ಏಕರೂಪ ಚತುಷ್ಪಥ ರಸ್ತೆಗಳನ್ನು ಒದಗಿಸುವ ಮೂಲಕ ಪ್ರಮುಖ ಕಾರಿಡಾರ್‌ಗಳಲ್ಲಿ ಸಂಚಾರ ವೇಗವನ್ನು ಹೆಚ್ಚಿಸಲು ಆದ್ಯತೆ ನೀಡಲಿದೆ.
ಶ್ರೀಮಂತ ರಾಷ್ಟ್ರಗಳಲ್ಲಿಯ 700-800 ಕಿ.ಮೀ.ಗೆ ಹೋಲಿಸಿದರೆ ಕಳಪೆ ರಸ್ತೆಗಳು, ಅಗಲ ಕಿರಿದಾದ ಮತ್ತು ಇಕ್ಕಟ್ಟಿನ ಸ್ಥಳಗಳಿಂದಾಗಿ ಭಾರತದಲ್ಲಿ ಟ್ರಕ್ಕೊಂದು ದಿನಕ್ಕೆ ಸರಾಸರಿ 250-300 ಕಿ.ಮೀ.ದೂರವನ್ನು ಕ್ರಮಿಸುತ್ತದೆ.
ನೂತನ ಹೆದ್ದಾರಿ ಅಭಿವೃದ್ಧಿ ಯೋಜನೆಯು ರಸ್ತೆಗಳ ನಿರ್ಮಾಣದ ಜೊತೆಗೆ ನಿರ್ವಹಣಾ ವೆಚ್ಚಗಳನ್ನು ತಗ್ಗಿಸಲು ಸಂಚಾರ ವ್ಯವಸ್ಥೆಯನ್ನು ಉತ್ತಮಗೊಳಿಸಲಿದೆ. ಉತ್ತಮ ರಸ್ತೆಗಳ ಜಾಲ ಮತ್ತು ಸ್ಮಾರ್ಟ್ ಟ್ಯಾಗ್ ಆಧಾರಿತ ಟೋಲ್ ವಸೂಲು ವ್ಯವಸ್ಥೆ ಯಿಂದಾಗಿ ರಸ್ತೆ ಸಾರಿಗೆ ಕ್ಷೇತ್ರದಲ್ಲಿ ಸುಧಾರಣೆಯಾಗಲಿದೆ ಎಂದು ಹಿರಿಯ ಅಧಿಕಾರಿಯೋರ್ವರು ತಿಳಿಸಿದರು.
ಬಹುಶಃ ಇದು ಮುಂಬರುವ ವಿಧಾನಸಭಾ ಚುನಾವಣೆಗಳಿಗೆ ಮುನ್ನ ಬೃಹತ್ ಸರಕಾರಿ ಪ್ರಕಟಣೆಯಾಗಿದೆ.
ವಾರ್ಷಿಕ 10,000 ಕಿ.ಮೀ.ಹೆದ್ದಾರಿಗಳ ನಿರ್ಮಾಣದಿಂದ 4 ಕೋಟಿ ಮಾನವ ದಿನಗಳು ಸೃಷ್ಟಿಯಾಗುತ್ತವೆ ಮತ್ತು ಈ ಬೃಹತ್ ಅಭಿವೃದ್ಧಿ ಯೋಜನೆಯ ಮೂಲಕ ಉದ್ಯೋಗಾವಕಾಶಗಳನ್ನು ಸೃಷ್ಟಿಸುವಲ್ಲಿ ಸರಕಾರವು ವಿಫಲಗೊಂಡಿದೆ ಎಂಬ ಆರೋಪ ವನ್ನು ಎದುರಿಸಲು ಸಾಧ್ಯ ಎನ್ನುವುದು ಹೆದ್ದಾರಿಗಳ ಸಚಿವಾಲಯದ ಅಭಿಪ್ರಾಯವಾಗಿದೆ.