ಲಕ್ನೊ- ಆಗ್ರಾ ಎಕ್ಸ್‌ಪ್ರೆಸ್ ಹೆದ್ದಾರಿಯಲ್ಲಿ ಯುದ್ದವಿಮಾನಗಳ ಕವಾಯತು

Update: 2017-10-24 15:25 GMT

ಲಕ್ನೊ, ಅ.24: ಸದಾ ಅತ್ಯಧಿಕ ವಾಹನಗಳ ಸಂಚಾರ ಇರುವ ಆಗ್ರಾ -ಲಕ್ನೊ ಎಕ್ಸ್‌ಪ್ರೆಸ್ ಹೆದ್ದಾರಿಯಲ್ಲಿ ಮಂಗಳವಾರ ವಾಯುಪಡೆಯ ವಿಮಾನಗಳು ಭೂಸ್ಪರ್ಶ ಮಾಡುವ ಹಾಗೂ ಆಗಸಕ್ಕೆ ನೆಗೆಯುವ ಕವಾಯತು ನಡೆಸಿದವು .

   ಯುದ್ಧದಂತಹ ತುರ್ತು ಸನ್ನಿವೇಶದಲ್ಲಿ ವಾಯುದಾಳಿ ಅಥವಾ ಶತ್ರುನೆಲೆಯನ್ನು ನಾಶಗೊಳಿಸುವ ಸಂದರ್ಭ ಬಂದಾಗ ಯುದ್ಧವಿಮಾನಗಳು ವಾಯುನೆಲೆ ಬಿಟ್ಟು ಇತರ ಪ್ರದೇಶದಲ್ಲೂ, ಅಂದರೆ ರಸ್ತೆ, ಬಯಲು ಪ್ರದೇಶದಲ್ಲೂ ಭೂಸ್ಪರ್ಶ ಅಥವಾ ಆಗಸಕ್ಕೆ ನೆಗೆಯಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ವಾಯುಪಡೆಯ ಸಿಬ್ಬಂದಿಗೆ ತರಬೇತಿ ನೀಡಲು ಈ ಕವಾಯತು ಹಮ್ಮಿಕೊಳ್ಳಲಾಗಿದ್ದು ಸುಖೋಯ್, ಜಾಗ್ವಾರ್, ಮಿರಾಜ್ ಸೇರಿದಂತೆ ವಾಯುಪಡೆಯ 16ಕ್ಕೂ ಹೆಚ್ಚು ವಿಮಾನಗಳು ಕವಾಯತಿನಲ್ಲಿ ಪಾಲ್ಗೊಂಡಿದ್ದವು. ಈ ವಿಮಾನಗಳಲ್ಲಿ ಹೆಚ್ಚಿನವು ಯುದ್ದ ವಿಮಾನಗಳಾಗಿವೆ. ಅಲ್ಲದೆ ಯುಎಸ್‌ಸಿ-130 ವಿಶೇಷ ವಿಮಾನವೂ ಕವಾಯತಿನಲ್ಲಿ ಪಾಲ್ಗೊಂಡಿತ್ತು . ವಿಮಾನಗಳ ಕವಾಯತು ದೃಶ್ಯವನ್ನು ಕಣ್ತುಂಬಿಕೊಳ್ಳಲು ಸಾವಿರಾರು ಮಂದಿ ನೆರೆದಿದ್ದರು. ಹೆದ್ದಾರಿಯ ನಾಲ್ಕು ಕಿ.ಮೀ ವ್ಯಾಪ್ತಿಯಲ್ಲಿ ಈ ಕವಾಯತು ನಡೆದಿದ್ದು, ಹೆದ್ದಾರಿ ನಿರ್ಮಾಣದ ಸಂದರ್ಭದಲ್ಲೇ ಈ ಭಾಗವನ್ನು ಬಲಿಷ್ಠವಾಗಿ ನಿರ್ಮಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಾಯುಪಡೆಯ ಕವಾಯತಿನ ಹಿನ್ನೆಲೆಯಲ್ಲಿ ಕಳೆದ ಕೆಲ ದಿನಗಳಿಂದ ಈ ಹೆದ್ದಾರಿಯಲ್ಲಿ ವಾಹನ ಸಂಚಾರವನ್ನು ನಿಷೇಧಿಸಲಾಗಿತ್ತು. ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ 2016ರ ನವೆಂಬರ್‌ನಲ್ಲಿ 302 ಕಿ.ಮೀ. ಉದ್ದದ ಈ ಎಕ್ಸ್‌ಪ್ರೆಸ್ ಹೆದ್ದಾರಿಯನ್ನು ಉದ್ಘಾಟಿಸಿದ್ದು, ಇದಕ್ಕೂ ಕೆಲ ದಿನದ ಹಿಂದೆ ನಡೆದಿದ್ದ ಇಂತಹುದೇ ಕವಾಯತಿನಲ್ಲಿ ಎಂಟು ಯುದ್ದವಿಮಾನಗಳು ಪಾಲ್ಗೊಂಡಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News