ಜಾರ್ಖಂಡ್ ನಲ್ಲಿ ಹಸಿವಿನಿಂದ ಮತ್ತೊಂದು ಸಾವು
ದಿಯೋಗಢ, ಆ. 24: ಜಾರ್ಖಂಡ್‌ನ ದಿಯೋಗಢ ಜಿಲ್ಲೆಯಲ್ಲಿ ಮಂಗಳವಾರ 62 ವರ್ಷದ ರೂಪ್‌ಲಾಲ್ ಮರಾಂಡಿ ಎಂಬವರು ಹಸಿವಿನಿಂದ ಮೃತಪಟ್ಟಿದ್ದಾರೆ. ಪಡಿತರ ಅಂಗಡಿಯಲ್ಲಿ ಬಯೋಮೆಟ್ರಿಕ್ ರೀಡರ್ ರೂಪ್‌ಲಾಲ್ ಮರಾಂಡಿಯ ಹೆಬ್ಬೆರಳ ಗುರುತನ್ನು ಪರಿಗಣಿಸದ ಹಿನ್ನೆಲೆಯಲ್ಲಿ ಪಡಿತರ ನೀಡಲು ನಿರಾಕರಿಸಲಾಗಿತ್ತು ಎಂದು ಮರಾಂಡಿ ಕುಟುಂಬ ಆರೋಪಿಸಿದೆ. ಆದರೆ, ಈ ಆರೋಪವನ್ನು ಸರಕಾರ ನಿರಾಕರಿಸಿದೆ.
ಮರಾಂಡಿ ಸಹಜವಾಗಿ ಮೃತಪಟ್ಟಿದ್ದಾರೆ ಎಂದು ಸರಕಾರ ಹೇಳಿದೆ. ಮರಾಂಡಿ ಅನಾರೋಗ್ಯದಿಂದ ಬಳಲುತ್ತಿದ್ದರು. ಕೆಲವು ತಿಂಗಳ ಹಿಂದೆ ಅವರ ಕಾಲು ಜಖಂಗೊಂಡಿತ್ತು. ಸೋಮವಾರ ಸಂಜೆ ವೈದ್ಯರೊಂದಿಗೆ ನಾನು ಅವರ ಮನೆಗೆ ಭೇಟಿ ನೀಡಿದೆ. ವೈದ್ಯರು ಅದು ಸಹಜ ಸಾವು ಎಂದು ದೃಢಪಡಿಸಿದ್ದಾರೆ ಎಂದು ಬ್ಲಾಕ್ ಅಭಿವೃದ್ಧಿ ಅಧಿಕಾರಿ ಅಶೋಕ್ ಕುಮಾರ್ ತಿಳಿಸಿದ್ದಾರೆ.
ದಿಯೋಗಢ ಜಿಲ್ಲೆಯ ಮಹಾನ್‌ಪುರ ಬಲಾಕ್‌ನ ಭಾಗವಾದ ಭಗ್ವಾನ್‌ಪುರ್ ಗ್ರಾಮದಲ್ಲಿ ಮರಾಂಡಿ ತನ್ನ ಕುಟುಂಬ ಹಾಗೂ ಪುತ್ರಿಯೊಂದಿಗೆ ವಾಸಿಸುತ್ತಿದ್ದರು. ನಮ್ಮಲ್ಲಿ ಗಳಿಸುತ್ತಿದ್ದುದು ಮರಾಂಡಿ ಅವರ ಮೊಮ್ಮಗ ಮಾತ್ರ. ಆತ ಮೂರು ತಿಂಗಳ ಹಿಂದೆ ಮೃತಪಟ್ಟಿದ್ದಾನೆ. ಇದರಿಂದ ನಾವು ಸರಕಾರದ ಪಡಿತರವನ್ನು ಅವಲಂಬಿಸಿದ್ದೇವೆ ಎಂದು ಕುಟುಂಬದ ಸದಸ್ಯರು ಹೇಳಿದ್ದಾರೆ.
“ಆಧಾರ್ ಜೋಡಿಸಲಾದ ಬಯೋಮೆಟ್ರಿಕ್ ವ್ಯವಸ್ಥೆ ನನ್ನ ತಂದೆಯ ಹೆಬ್ಬೆರಳ ಗುರುತನ್ನು ಪರಿಗಣಿಸುತ್ತಿರಲಿಲ್ಲ. ಇದರಿಂದ ಕಳೆದ ಎರಡು ತಿಂಗಳಿಂದ ನಾವು ಪಡಿತರ ಪಡೆಯುತ್ತಿಲ್ಲ” ಎಂದು ಮರಾಂಡಿಯ ಪುತ್ರಿ ಮನೋಡಿ ತಿಳಿಸಿದ್ದಾರೆ.
ಮನೋಡಿ ಹಾಗೂ ಆಕೆಯ ಸೊಸೆ ಹೊಲದಲ್ಲಿ ಕೆಲಸ ಮಾಡುತ್ತಾರೆ. ಕಳೆದ ವಾರ ಭಾರೀ ಮಳೆ ಸುರಿದಿರುವುದರಿಂದ ಅವರಿಗೆ ಕೆಲಸ ಸಿಕ್ಕಿರಲಿಲ್ಲ.
ಮರಾಂಡಿ ಹಾಗೂ ಇತರ ಇಬ್ಬರು ಹಿರಿಯರು ಮಂಡಕ್ಕಿ ತಿಂದು ಜೀವಿಸುತ್ತಿದ್ದರು. ಮಕ್ಕಳಿಗೆ ನೆರೆ ಮನೆಯಿಂದ ಆಹಾರ ತರುತ್ತಿದ್ದರು ಎಂದು ಮನೋಡಿ ಹೇಳಿದ್ದಾರೆ. ಕಳದ ಎರಡು ತಿಂಗಳಿಂದ ಪಡಿತರ ನಿರಾಕರಿಸಲಾಗಿದೆ ಎಂಬ ಕುಟುಂಬದ ಆರೋಪವನ್ನು ಬ್ಲಾಕ್ ಅಭಿವೃದ್ಧಿ ಅಧಿಕಾರಿ ನಿರಾಕರಿಸಿದ್ದಾರೆ. ಸೆಪ್ಟಂಬರ್ ವರೆಗೆ ಕುಟುಂಬ 15 ಕಿ.ಗ್ರಾಂ. ಅಕ್ಕಿ ಪಡೆದಿದೆ. ಆದರೆ, ಇದನ್ನು ಪಡಿತರ ಚೀಟಿಯಲ್ಲಿ ದಾಖಲಿಸಲಿಲ್ಲ. ಪಡಿತರ ಅಂಗಡಿಗೆ ಕುಟುಂಬದ ಸದಸ್ಯರು ಬರದ ಕಾರಣ ಅಕ್ಟೋಬರ್ ಪಡಿತರ ಬಾಕಿ ಇದೆ ಎಂದು ಅವರು ಹೇಳಿದ್ದಾರೆ.