ಬಿಲ್ಕೀಸ್ ಬಾನುಗೆ ಉತ್ತಮ ಪರಿಹಾರ ನೀಡಿ: ಮಹಿಳಾ ಹೋರಾಟಗಾರರು
ಕೋಲ್ಕತಾ/ಮುಂಬೈ, ಅ. 24: ಬಿಲ್ಕಿಸ್ ಬಾನು ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್‌ನ ನಿರ್ಧಾರವನ್ನು ಮಹಿಳಾ ಹೋರಾಟಗಾರ್ತಿಯರು ಸೋಮವಾರ ಶ್ಲಾಘಿಸಿದ್ದಾರೆ.
ಬಿಲ್ಕೀಸ್ ಬಾನು ಅವರಿಗೆ ಪರಿಹಾರ ಹಾಗೂ ನ್ಯಾಯ ಸಿಗುತ್ತಿದೆಯೇ ಎಂಬುದನ್ನು ಸುಪ್ರೀಂ ಕೋರ್ಟ್ ಅರಿಯಲು ಬಯಸಬೇಕು. ಅಲ್ಲದೆ, ಗೋಧ್ರಾ ಘಟನೆ ಹಾಗೂ ಅತ್ಯಾಚಾರಕ್ಕೆ ಒಳಗಾದ ಬಳಿಕ ಅವರ ಕುಟುಂಬದ ಸದಸ್ಯರು ಮೃತಪಟ್ಟಿರುವು ದರಿಂದ ಸುಪ್ರೀಂ ಕೋರ್ಟ್ ಭಾರೀ ಮೊತ್ತದ ಪರಿಹಾರವನ್ನು ನೀಡಲು ಆದೇಶಿಸಬೇಕು ಎಂದು ಮಹಿಳಾ ಹೋರಾಟಗಾರ್ತಿ ರುಬಿ ಮುಖರ್ಜಿ ಹೇಳಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ಗುಜರಾತ್ ಸರಕಾರ ನಾಲ್ಕು ವಾರಗಳಲ್ಲಿ ವಿವರವಾದ ಪ್ರತಿಕ್ರಿಯೆ ನೀಡುವಂತೆ ಸುಪ್ರೀಂ ಕೋರ್ಟ್ ಆದೇಶಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಪೊಲೀಸರ ವಿರುದ್ಧ ಕೈಗೊಂಡ ಇಲಾಖಾ ಕ್ರಮಗಳೇನು?, ಕರ್ತವ್ಯದಲ್ಲಿ ಇದ್ದವರು ಯಾರು ?, ಈ ಅಪರಾಧವನ್ನು ಅವರು ನಿಲ್ಲಿಸಲು ಪ್ರಯತ್ನಿಸಲಿಲ್ಲ ಏಕೆ?, ಬಿಲ್ಕೀಸ್ ಬಾನು ಅವರನ್ನು ರಕ್ಷಿಸಲು ಮುಂದೆ ಬರಲಿಲ್ಲ ಏಕೆ ?, ಎಂದು ಸುಪ್ರೀಂ ಕೋರ್ಟ್ ಗುಜರಾತ್ ಸರಕಾರವನ್ನು ನಿನ್ನೆ ಪ್ರಶ್ನಿಸಿತ್ತು.
ಅವರು ಭಾರತೀಯ ದಂಡ ಸಂಹಿತೆ ಅಡಿಯಲ್ಲಿ ಪ್ರಯತ್ನಿಸದೇ ಇರಬಹುದು. ಆದರೆ, ಕರ್ತವ್ಯ ನಿರ್ಲಕ್ಷ್ಯಕ್ಕಾಗಿ ಇಲಾಖಾ ಕ್ರಮಗಳನ್ನು ತೆಗೆದುಕೊಳ್ಳಬೇಕಿತ್ತು ಎಂದು ಇನ್ನೋರ್ವ ಹೋರಾಟಗಾರ್ತಿ ಅಭಾ ಸಿಂಗ್ ಹೇಳಿದ್ದಾರೆ.
ಕರ್ತವ್ಯದಲ್ಲಿ ನಿರ್ಲಕ್ಷ ತೋರಿ ತಪ್ಪು ಮಾಡಿದ ಪೊಲೀಸರ ವಿರುದ್ಧ ಇಲಾಖಾ ಕ್ರಮ ತೆಗೆದುಕೊಂಡ ಬಗ್ಗೆ ವಿವರ ಬಹಿರಂಗಪಡಿಸುವಂತೆ ಸುಪ್ರೀಂ ಕೋರ್ಟ್ ರಾಜ್ಯ ಸರಕಾರಕ್ಕೆ ನಿರ್ದೇಶಿಸಿದೆ.
ಗುಜರಾತ್ ಗಲಭೆ ಸಂದರ್ಭ ವಡೋದರದಲ್ಲಿ ಬಿಲ್ಕೀಸ್ ಬಾನು ಅವರ ಕುಟುಂಬದ 14 ಮಂದಿಯನ್ನು ಹತ್ಯೆಗೈಯ್ಯಲಾಗಿತ್ತು. ಬಾನು ಅವರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿತ್ತು. ಈ ಸಂದರ್ಭ ಅವರು 5 ತಿಂಗಳ ಗರ್ಭಿಣಿಯಾಗಿದ್ದರು.