×
Ad

ಗ್ರಾಮಾಂತರ ಪ್ರದೇಶಗಳಿಗೆ ಸರಕಾರಿ ಬಸ್ ಓಡಿಸಲು ಒತ್ತಾಯ

Update: 2017-10-24 22:08 IST

ಮಣಿಪಾಲ, ಅ.24:ಜಿಲ್ಲೆಯ ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ಅನುಕೂಲವಾಗುವಂತೆ ಬಸ್ಸುಗಳ ಅಗತ್ಯ ಬಹಳಷ್ಟಿದ್ದು, ಶಾಲಾ ಮಕ್ಕಳು ಮತ್ತು ಸಾರ್ವಜನಿಕರ ಹಿತದೃಷ್ಟಿಯನ್ನು ಗಮನದಲ್ಲಿರಿಸಿ ಬಸ್ಸುಗಳನ್ನು ಓಡಿಸಬೇಕೆಂದು ಉಡುಪಿ ಜಿಪಂನ ಸದ್ಯರು ಒಕ್ಕೊರಲಿನಿಂದ ಆಗ್ರಹಿಸಿದರು.

ಮಂಗಳವಾರ ಉಡುಪಿ ಜಿಪಂ ಅಧ್ಯಕ್ಷ ದಿನಕರ ಬಾಬು ಅಧ್ಯಕ್ಷತೆಯಲ್ಲಿ ಜಿಲ್ಲಾ ಪಂಚಾಯತ್‌ನ ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ನಡೆದ 9ನೇ ಜಿಪಂ ಸಾಮಾನ್ಯ ಸಭೆಯಲ್ಲಿ ಈ ವಿಷಯದ ಕುರಿತು ಚರ್ಚಿಸಲಾಯಿತು.

ಜಿಲ್ಲೆಯ ನಿಡಂಬಳ್ಳಿಗೆ ನರ್ಮ್ ಬಸ್ ಓಡಿಸುವ ಬಗ್ಗೆ ಜನಾರ್ದನ್ ತೋನ್ಸೆ, ಕುಂದಾಪುರದ ಗ್ರಾಮಾಂತರ ಪ್ರದೇಶಗಳಿಗೆ, ಕಾಪು, ಎಲ್ಲೂರು ರಸ್ತೆಯಲ್ಲಿ ಬಸ್‌ಗಳ ಬೇಡಿಕೆ ಬಗ್ಗೆ ಇಂದೂ ಸದಸ್ಯರಾದ ಶಿಲ್ಪಾ ಸುವರ್ಣ, ಶೋಭಾ ಜಿ. ಪುತ್ರನ್, ಲಕ್ಷೀ ಮಂಜು ಬಿಲ್ಲವ, ಜಯಶ್ರೀ ಮೊಗವೀರ ಸಭೆಯ ಮುಂದೆ ಮತ್ತೆ ಬೇಡಿಕೆ ಮಂಡಿಸಿದರು.

ಸದಸ್ಯರ ಬೇಡಿಕೆಗಳಿಗೆ ಉತ್ತರಿಸಿದ ಕೆಎಸ್‌ಆರ್‌ಟಿಸಿ ಅಧಿಕಾರಿಗಳು, ಹೈಕೋರ್ಟ್ ಆದೇಶದಂತೆ ಒಟ್ಟು 11 ಬಸ್‌ಗಳ ಪರ್ಮಿಟ್ ರದ್ದುಪಡಿಸಿದ್ದು, ಶಿರ್ವ ಮಂಚಕಲ್, ಕೊಕ್ಕರ್ಣೆ, ಅಮಾಸೆಬೈಲು, ಆಗುಂಬೆ, ಶಿವಮೊಗ್ಗ ಮಾರ್ಗದ ಬಸ್‌ಗಳ ತಾತ್ಕಾಲಿಕ ಪರ್ಮಿಟ್ ರದ್ದಾಗಿದೆ ಎಂದರು. ಹೈಕೋರ್ಟ್‌ನಲ್ಲಿ ಕ್ರಾನಲಜಿಕಲ್ ಆರ್ಡರ್ ಪ್ರಕಾರವೇ ಪರ್ಮಿಟ್ ನೀಡಲು ಸೂಚಿಸಲಾಗಿದೆ ಎಂದು ವಿವರಿಸಿದ ಅವರು, ಇದರಿಂದ ಪಾಸು ಪಡೆದುಕೊಂಡ ವಿದ್ಯಾರ್ಥಿಗಳಿಗೆ ಅನಾನುಕೂಲವಾಗಿದೆ ಎಂಬ ಮಾಹಿತಿಯನ್ನು ನೀಡಿದರು.

ಹೈಕೋರ್ಟ್‌ನಲ್ಲಿ ಕ್ರಾನಲಜಿಕಲ್ ಆರ್ಡರ್ ಪ್ರಕಾರವೇ ಪರ್ಮಿಟ್ ನೀಡಲು ಸೂಚಿಸಲಾಗಿದೆ ಎಂದು ವಿವರಿಸಿದ ಅವರು, ಇದರಿಂದ ಪಾಸು ಪಡೆದುಕೊಂಡ ವಿದ್ಯಾರ್ಥಿಗಳಿಗೆ ಅನಾನುಕೂಲವಾಗಿದೆ ಎಂಬ ಮಾಹಿತಿಯನ್ನು ನೀಡಿದರು. ಕೆಎಸ್‌ಆರ್‌ಟಿಸಿಗೆ ಸಂಬಂಧಿಸಿದ 63 ಅರ್ಜಿಗಳನ್ನು ಕಳೆದ ಆ.30ರಂದು ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಸಭೆಗೆ ಮಂಡಿಸಿದ್ದು, ಪ್ರಾಧಿಕಾರವು ಹೊಸದಾಗಿ ಜಂಟಿ ಮಾರ್ಗ ಸಮೀಕ್ಷೆ ನಡೆಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ಕೆಎಸ್ಸಾರ್ಟಿಸಿ ಹಾಗೂ ಆರ್‌ಟಿಒ ಅಧಿಕಾರಿಗಳು ಉತ್ತರಿಸಿದರು.

ಮುಂದಿನ ಆರ್‌ಟಿಎ ಸಭೆಯಲ್ಲಿ ಕೆಲವೊಂದು ಸಮಸ್ಯೆಗಳಿಗ ಪರಿಹಾರ ದೊರಕಿಸುವ ಭರವಸೆಯನ್ನು ಅಧಿಕಾರಿಗಳು ವಿಧಾನಪರಿಷತ್ ಸದಸ್ಯರಾದ ಪ್ರತಾಪ್‌ಚಂದ್ರ ಶೆಟ್ಟಿ ಅವರಿಗೆ ನೀಡಿದರು. ವಿದ್ಯಾರ್ಥಿಗಳಿಗೆ ಅನಾನುಕೂಲ ವಾಗದಂತೆ ಅವರಿಗೆ ನೀಡಿದ ಪಾಸು ನಿರುಪಯೋಗವಾಗದಂತೆ ಕಾಯ ಬೇಕಾದ ಹೊಣೆ ಅಧಿಕಾರಿಗಳದ್ದು ಎಂದ ಅವರು, ಜನರಿಗೆ ಅನುಕೂಲ ವಾಗುವಂತೆ ಕ್ರಮಕೈಗೊಳ್ಳಿ ಎಂದು ಒತ್ತಾಯಿಸಿದರು.

ವಾರಾಹಿ ಚರ್ಚೆ:  ವಾರಾಹಿ ಎಡದಂಡೆ ನಾಲೆಯ 23ನೇ ಕಿ.ಮೀ.ನಲ್ಲಿ ಕಾಲುವೆ ಒಡೆದು ತಗ್ಗು ಪ್ರದೇಶದ ಕೃಷಿ ಭೂಮಿ, ತೋಟಗಳಲ್ಲಿ ನೀರು ತುಂಬಿದ್ದು, ಪರಿಹಾರ ನೀಡುವಂತೆ ಕುಂದಾಪುರ ತಾಪಂ ಅಧ್ಯಕ್ಷರ ಬೇಡಿಕೆಗೆ ಸಂಬಂಧಿಸಿದಂತೆ ಯೋಜನೆಯಡಿ ಪರಿಹಾರ ನೀಡುವ ಬಗ್ಗೆ ಡಿಸೆಂಬರ್ ಒಳಗೆ ಕ್ರಮಕೈಗೊಂಡು ವರದಿ ಒಪ್ಪಿಸುವಂತೆ ಅಧ್ಯಕ್ಷ ದಿನಕರಬಾಬು ವಾರಾಹಿ ಯೋಜನೆಯ ಇಂಜಿನಿಯರ್‌ಗಳಿಗೆ ಸೂಚನೆ ನೀಡಿದರು.

ಶಾಲೆಗಳಲ್ಲಿ ಮಕ್ಕಳ ಪಠ್ಯ ಪುಸ್ತಕಗಳ ಅಲ್ಯತೆ ಬಗ್ಗೆ ರೇಷ್ಮಾ ಉದಯ ಕುಮಾರ್ ಶೆಟ್ಟಿ ಸಭೆಯ ಗಮನಸೆಳೆದರು. ಮಾತೃಪೂರ್ಣ ಯೋಜನೆಯ ಸಾಧಕ ಬಾಧಕಗಳ ಕುರಿತು ಸಭೆಯಲ್ಲಿ ಸವಿವರ ಚರ್ಚೆ ನಡೆಯಿತು. ಇಲಾಖಾ ನಿರ್ದೇಶಕರ ಗಮನಕ್ಕೆ ಸಮಸ್ಯೆಗಳನ್ನು ತರಲಾಗಿದ್ದು ಪರಿಹಾರ ರೂಪಿಸುವುದಾಗಿ ಜಿಪಂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶಿವಾನಂದ ಕಾಪಶಿ ಭರವಸೆ ನೀಡಿದರು.

ಟಿಪ್ಪು ಜಯಂತಿ ಪ್ರಸ್ತಾಪ: ಚರ್ಚೆಯ ಪ್ರಾರಂಭದಲ್ಲಿ ಬಿಜೆಪಿ ಸದಸ್ಯರಾದ ಸುಮಿತ್ ಶೆಟ್ಟಿ ಹಾಗೂ ಪ್ರತಾಪ್ ಹೆಗ್ಡೆ ಮಾರಾಳಿ ಸರಕಾರ ನಡೆಸಲುದ್ದೇಶಿಸಿ ರುವ ಟಿಪ್ಪು ಜಯಂತಿ ಬಗ್ಗೆ ಸಭೆಯಲ್ಲಿ ಪ್ರಸ್ತಾಪಿಸಿದರು. ಇದಕ್ಕೆ ಕಾಂಗ್ರೆಸ್ ಸದಸ್ಯರ ಕಡೆಯಿಂದ ತೀವ್ರ ಪ್ರತಿರೋಧ ವ್ಯಕ್ತವಾಯಿತು.

ಈ ವಿಷಯ ಇಲ್ಲಿ ಚರ್ಚೆಯ ವ್ಯಾಪ್ತಿಗೆ ಬರುವುದಿಲ್ಲ ಎಂದು ಜನಾರ್ದನ ತೋನ್ಸೆ ಹೇಳಿದರೆ, ಟಿಪ್ಪು ಜಯಂತಿ ಆಚರಣೆಗೆ ಸದಸ್ಯರ ತೀವ್ರ ವಿರೋಧವಿದೆ ಎಂದು ನಿರ್ಣಯಕೈಗೊಳ್ಳಬೇಕೆಂದು ಬಿಜೆಪಿ ಸದಸ್ಯರು ಒತ್ತಾಯಿಸಿದರು. ಈ ಬಗ್ಗೆ ಸದಸ್ಯರ ನಡುವೆ ಬಿಸಿ ಬಿಸಿ ವಾದಗಳು ನಡೆದ ಬಳಿಕ ಈ ಬಗ್ಗೆ ಇಲ್ಲಿ ನಿರ್ಣಯ ಕೈಗೊಳ್ಳಲು ಬರುವುದಿಲ್ಲ ಎಂದು ಸಿಇಓ ಪ್ರಕಟಿಸಿದಾಗ ಚರ್ಚೆ ಅಲ್ಲಿಯೇ ತಣ್ಣಗಾಯಿತು.

ಟೋಲ್‌ಗೇಟ್ ಪ್ರಸ್ತಾಪ: ಅದೇ ರೀತಿ ಬೆಳ್ಮಣ್‌ನಲ್ಲಿ ಪಡುಬಿದ್ರಿ-ಕಾರ್ಕಳ ರಾಜ್ಯ ಹೆದ್ದಾರಿಗೆ ಟೋಲ್‌ಗೇಟ್ ನಿರ್ಮಿಸುವ ಗುತ್ತಿಗೆದಾರರ ಪ್ರಯತ್ನವನ್ನು ಸದಸ್ಯೆ ರೇಶ್ಮಾ ಉದಯ ಶೆಟ್ಟಿ ವಿರೋಧಿಸಿದರು. 28ಕಿ.ಮೀ. ಉದ್ದದ ರಸ್ತೆ ಚತುಷ್ಪಥವಾಗುವ ಸಂದರ್ಭದಲ್ಲಿ ಈ ಪ್ರಸ್ತಾಪವಿರಲಿಲ್ಲ. ಈಗ ಹಠಾತ್ತನೆ ಟೋಲ್‌ಗೇಟ್‌ನ ಪ್ರಸ್ತಾಪ ಮಾಡಲಾಗಿದೆ. ಇದಕ್ಕೆ ಜನರ ತೀವ್ರ ವಿರೋಧವಿದೆ ಎಂದರು. ಅದೇ ರೀತಿ ಅಲ್ಲಿ ನಿರ್ಮಿಸಿರುವ ಹಂಪ್ಸ್ ಬಗ್ಗೆಯೂ ರೇಶ್ಮಾ ಶೆಟ್ಟಿ ಆಕ್ಷೇಪ ವ್ಯಕ್ತಪಡಿಸಿದರು.

ಪಡುಬಿದ್ರಿ ಆಸುಪಾಸಿನ ಹತ್ತು ಗ್ರಾಪಂಗಳ ತ್ಯಾಜ್ಯಗಳನ್ನು ನಿರ್ವಹಣೆ ಮಾಡುವ ಡಂಪಿಂಗ್ ಯಾರ್ಡ್‌ನ್ನು ಎಲ್ಲೂರಿನ ಹತ್ತು ಎಕರೆ ಜಾಗದಲ್ಲಿ ನಿರ್ಮಿಸುವ ಪ್ರಸ್ತಾಪವನ್ನು ಶಿಲ್ಪಾ ಸುವರ್ಣ ವಿರೋಧಿಸಿದರು. ಇದಕ್ಕಾಗಿ ಅಲ್ಲಿರುವ ಹಸಿರು ಕಾಡುಗಳನ್ನು ಕಡಿಯುತ್ತಿರುವ ಬಗ್ಗೆಯೂ ಆಕ್ಷೇಪಿಸಿದರು.

ಆವರ್ಸೆ ಗ್ರಾಪಂ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾಮಗಾರಿಗೆ ಅರಣ್ಯ ಇಲಾಖೆ ತಡೆಯೊಡ್ಡುತ್ತಿರುವ ವಿಷಯ, 94ಸಿಯಲ್ಲಿ ನೀಡುವ ಜಾಗದ ಕುರಿತು, ಬೈಂದೂರು ಗ್ರಾಪಂನ ಸಶ್ಮಾನ ಭೂಮಿಯ ಒತ್ತುವರಿಯಾದ ಬಗ್ಗೆ, ಗ್ರಾಪಂನ ಬಿಲ್ ಕಲೆಕ್ಟರ್‌ಗಳನ್ನು ಬೆಳೆ ಸಮೀಕ್ಷೆಗೆ ಹಾಕುವ ಕುರಿತಂತೆಯೂ ಚರ್ಚೆಗಳು ನಡೆದವು.
ಇನ್ನು ಜಿಪಂ ಆಡಳಿತ ವಿಷಯದಲ್ಲಿ ಜಿಲ್ಲಾಧಿಕಾರಿಗಳು ಹಸ್ತಕ್ಷೇಪ ನಡೆಸುವ ಕುರಿತು ಸ್ಥಾಯಿ ಸಮಿತಿ ಅಧ್ಯಕ್ಷ ಬಾಬು ಶೆಟ್ಟಿ ತೀವ್ರ ವಿರೋಧ ವ್ಯಕ್ತಪಡಿಸಿದರು. ಆಧಾರ ಕೇಂದ್ರಗಳನ್ನು ಹೆಚ್ಚಿಸುವ ಬಗ್ಗೆಯೂ ಚರ್ಚೆ ನಡೆಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News