×
Ad

ಮ್ಯಾನ್ಮಾರ್‌ನಿಂದ ಸೇನಾ ನೆರವನ್ನು ಹಿಂಪಡೆದ ಅಮೆರಿಕ

Update: 2017-10-24 22:11 IST

ವಾಶಿಂಗ್ಟನ್, ಅ. 24: ರೊಹಿಂಗ್ಯಾ ಮುಸ್ಲಿಮ್ ಅಲ್ಪಸಂಖ್ಯಾತರನ್ನು ಮ್ಯಾನ್ಮಾರ್ ನಡೆಸಿಕೊಳ್ಳುತ್ತಿರುವ ರೀತಿಯನ್ನು ಖಂಡಿಸಿರುವ ಅಮೆರಿಕ, ಆ ದೇಶದ ವಿರುದ್ಧ ಹಲವಾರು ಕ್ರಮಗಳನ್ನು ತೆಗೆದುಕೊಳ್ಳಲು ಮುಂದಾಗಿದೆ.

ರೊಹಿಂಗ್ಯಾ ಮುಸ್ಲಿಮರ ವಿರುದ್ಧ ದಮನ ಕಾರ್ಯಾಚರಣೆಯಲ್ಲಿ ತೊಡಗಿರುವ ಮ್ಯಾನ್ಮಾರ್‌ನ ಸೇನಾ ಘಟಕಗಳು ಮತ್ತು ಅಧಿಕಾರಿಗಳಿಗೆ ನೀಡಲಾಗುತ್ತಿರುವ ಸೇನಾ ನೆರವನ್ನು ಅಮೆರಿಕ ಹಿಂದಕ್ಕೆ ಪಡೆದುಕೊಳ್ಳುತ್ತಿದೆ ಎಂದು ಅಮೆರಿಕದ ವಿದೇಶಾಂಗ ಇಲಾಖೆ ಸೋಮವಾರ ತಿಳಿಸಿದೆ.

ಆಗಸ್ಟ್ 25ರಂದು ಮ್ಯಾನ್ಮಾರ್‌ನ ರಖೈನ್ ರಾಜ್ಯದಲ್ಲಿ ಹೊಸದಾಗಿ ಹಿಂಸಾಚಾರ ಸ್ಫೋಟಿಸಿದ ಬಳಿಕ, ಮ್ಯಾನ್ಮಾರ್ ಸೇನೆಯ ದಮನ ಕಾರ್ಯಾಚರಣೆಗೆ ಬೆದರಿ ಸುಮಾರು 6 ಲಕ್ಷ ರೊಹಿಂಗ್ಯಾ ಮುಸ್ಲಿಮರು ನೆರೆಯ ಬಾಂಗ್ಲಾದೇಶಕ್ಕೆ ಪರಾರಿಯಾಗಿದ್ದಾರೆ.

ಸೇನೆಯು ರೊಹಿಂಗ್ಯಾ ಮುಸ್ಲಿಮರನ್ನು ಕೊಲ್ಲುತ್ತಿದೆ, ಅವರ ಮೇಲೆ ಅತ್ಯಾಚಾರ ನಡೆಸುತ್ತಿದೆ ಹಾಗೂ ಅವರ ಗ್ರಾಮಗಳಿಗೆ ಬೆಂಕಿ ಕೊಡುತ್ತಿದೆ ಎಂಬುದಾಗಿ ಅಲ್ಲಿಂದ ಪಾರಾಗಿ ಬಂದ ರೊಹಿಂಗ್ಯಾ ನಿರಾಶ್ರಿತರು ಆರೋಪಿಸಿದ್ದಾರೆ.

‘‘ಮ್ಯಾನ್ಮಾರ್‌ನ ರಖೈನ್ ರಾಜ್ಯದಲ್ಲಿ ಇತ್ತೀಚೆಗೆ ನಡೆದಿರುವ ಘಟನೆಗಳು ಮತ್ತು ರೊಹಿಂಗ್ಯಾ ಮತ್ತು ಇತರ ಸಮುದಾಯಗಳು ಅನುಭವಿಸಿರುವ ಹಿಂಸಾತ್ಮಕ ಹಾಗೂ ಆಘಾತಕಾರಿ ದೌರ್ಜನ್ಯಗಳ ಬಗ್ಗೆ ನಾವು ಅತ್ಯಂತ ಕಳವಳಕ್ಕೆ ಒಳಗಾಗಿದ್ದೇವೆ’’ ಎಂದು ಇಲಾಖೆಯು ಹೇಳಿಕೆಯೊಂದರಲ್ಲಿ ತಿಳಿಸಿದೆ.

‘‘ದೇಶವಿಲ್ಲದ ವ್ಯಕ್ತಿಗಳು ಮತ್ತು ದೊಂಬಿ ನಡೆಸುವವರು ಸೇರಿದಂತೆ, ಈ ದೌರ್ಜನ್ಯಕ್ಕೆ ಕಾರಣರಾದ ಯಾವುದೇ ವ್ಯಕ್ತಿಗಳು ಅಥವಾ ಸಂಘಟನೆಗಳನ್ನು ಹೊಣೆಗಾರರಾಗಿಸುವುದು ಅಗತ್ಯವಾಗಿದೆ’’ ಎಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News