×
Ad

ಡಿಸಿ ಕಚೇರಿ ಮುಂಭಾಗ ಬೆಂಕಿ ಹಚ್ಚಿಕೊಂಡ ಕುಟುಂಬ: ಮೂವರ ಸಾವು

Update: 2017-10-24 22:21 IST

ತಿರುನಲ್ವೇಲಿ, ಅ.24: ಮೀಟರ್ ಬಡ್ಡಿ ದಂಧೆಗೆ ಪೊಲೀಸರು ಕಡಿವಾಣ ಹಾಕಲು ವಿಫಲವಾಗಿದ್ದಾರೆ ಎಂದು ಆರೋಪಿಸಿ ಕುಟುಂಬವೊಂದರ ನಾಲ್ಕು ಸದಸ್ಯರು ಬೆಂಕಿ ಹಚ್ಚಿಕೊಂಡು ಸಜೀವ ದಹನಕ್ಕೆ ಮುಂದಾಗಿದ್ದು, ಮೂವರು ಸಾವನ್ನಪ್ಪಿದ ಘಟನೆ ತಮಿಳುನಾಡಿನ ತಿರುನಲ್ವೇಲಿಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದಿದೆ.

 ಜಿಲ್ಲಾಧಿಕಾರಿ ಕಚೇರಿಯಲ್ಲಿ ಪ್ರತೀ ವಾರ ನಡೆಯುವ ಕುಂದುಕೊರತೆ ಅಹವಾಲು ಸಭೆಯಲ್ಲಿ ಪಾಲ್ಗೊಂಡಿದ್ದ ಕುಟುಂಬವೊಂದು ಈ ಕೃತ್ಯ ನಡೆಸಿದೆ. ಕಾಶಿಧರ್ಮಂ ಎಂಬ ಊರಿನ ನಿವಾಸಿಗಳಾದ ಇಸಕ್ಕಿಮುತ್ತು (30 ವರ್ಷ) ಮತ್ತಾತನ ಪತ್ನಿ ಸುಬ್ಬುಲಕ್ಷ್ಮಿ (28 ವರ್ಷ) 8 ತಿಂಗಳಿನಿಂದ ಕೊಯಂಬತ್ತೂರಿನಲ್ಲಿ ವಾಸವಾಗಿದ್ದು, ತಮ್ಮ ಊರಿನಲ್ಲಿ ಮೀಟರ್ ಬಡ್ಡಿ ದಂಧೆ ನಡೆಸುವ ಮುತ್ತುಲಕ್ಷ್ಮಿಯಿಂದ ಆರು ತಿಂಗಳ ಹಿಂದೆ 1,45,000 ರೂ. ಸಾಲ ಪಡೆದಿದ್ದರು. ಇದನ್ನು ತಿಂಗಳಿಗೆ 39,000 ರೂ.ನಂತೆ ಆರು ತಿಂಗಳ ಕಂತಿನಲ್ಲಿ ಬಡ್ಡಿ ಸೇರಿದಂತೆ ಒಟ್ಟು 2,34,000 ರೂ. ಮರು ಪಾವತಿಸಿದ್ದಾರೆ. ಆದರೂ ಪೂರ್ತಿ ಸಾಲ ಸಂದಾಯವಾಗಿಲ್ಲ ಎಂದು ಮುತ್ತುಲಕ್ಷ್ಮಿ ಬೆದರಿಸಿ ಕಿರುಕುಳ ನೀಡುತ್ತಿರುವುದಾಗಿ ಪೊಲೀಸರಿಗೆ ಹಾಗೂ ಜಿಲ್ಲಾಡಳಿತಕ್ಕೆ ಐದಕ್ಕೂ ಹೆಚ್ಚು ಬಾರಿ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದಂಪತಿ ದೂರಿದ್ದಾರೆ.

ಕಿರುಕುಳ ಸಹಿಸಲಾಗದೆ ದಂಪತಿ ಅಂಚಪುತ್ತುರ್ ಠಾಣೆಯ ಪೊಲೀಸರಿಗೆ ರಕ್ಷಣೆ ನೀಡುವಂತೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಪೊಲೀಸರು ಮುತ್ತುಲಕ್ಷ್ಮಿ ಜೊತೆ ಶಾಮೀಲಾಗಿದ್ದಾರೆ ಎಂದು ದಂಪತಿ ಆರೋಪಿಸಿದ್ದರು ಎಂದು ಮೂಲಗಳು ತಿಳಿಸಿವೆ.

ಠಾಣೆಯ ಎಸ್‌ಐ ಹಾಗೂ ಕಾನ್‌ಸ್ಟೆಬಲ್ ಮುತ್ತುಲಕ್ಷ್ಮಿಯ ಪರ ವಹಿಸಿ ಮಾತಾಡಿದ್ದಲ್ಲದೆ ಖಾಲಿ ಹಾಳೆಯ ಮೇಲೆ ಸಹಿ ಹಾಕುವಂತೆ ದಂಪತಿಯ ಮೇಲೆ ಒತ್ತಡ ಹೇರಿದ್ದಾರೆ. ಇವರ ಸಂಭಾಷಣೆಯ ದಾಖಲೆ ತಮ್ಮ ಬಳಿ ಇದೆ ಎಂದು ಇಸಕ್ಕಿಮುತ್ತುವಿನ ಸೋದರ ಗೋಪಿ ಹೇಳಿದ್ದಾನೆ. ಬಳಿಕ ಜಿಲ್ಲಾಧಿಕಾರಿಗೆ ಐದು ಬಾರಿ ಮನವಿ ಸಲ್ಲಿಸಲಾಗಿದ್ದರೂ ಪ್ರಯೋಜನವಾಗಿಲ್ಲ ಎಂದು ಗೋಪಿ ತಿಳಿಸಿದ್ದಾನೆ.

   ಸೋಮವಾರ ಜಿಲ್ಲಾಧಿಕಾರಿ ಕಚೇರಿಗೆ ತಮ್ಮ ಇಬ್ಬರು ಮಕ್ಕಳಾದ ಮತಿ ಚರುಣ್ಯ(4 ವರ್ಷ) ಹಾಗೂ ಅಚಯ ಬರಣಿಕ(2 ವರ್ಷ) ಮತ್ತು ಸೋದರ ಗೋಪಿ ಜೊತೆ ತೆರಳಿದ್ದರು. ಈ ವೇಳೆ ಇಸಕ್ಕಿಮುತ್ತು ಪತ್ನಿ , ಮಕ್ಕಳು ಹಾಗೂ ತನ್ನ ಮೇಲೆ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿ ಸಜೀವ ದಹನಕ್ಕೆ ಯತ್ನಿಸಿದ್ದಾನೆ. ತಕ್ಷಣ ಅವರನ್ನು ಪೊಲೀಸರು ರಕ್ಷಿಸಿ ತಿರುನೆಲ್ವೇಲಿ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಸ್ಪತ್ರೆಯಲ್ಲಿ ಮಕ್ಕಳು ಹಾಗೂ ಪತ್ನಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

        ದಂಪತಿ ಸಲ್ಲಿಸಿದ್ದ ಮನವಿಯನ್ನು ಈಗಾಗಲೇ ಪೊಲೀಸ್ ಇಲಾಖೆಗೆ ಕಳಿಸಿಕೊಟ್ಟಿದ್ದು ಸೂಕ್ತ ತನಿಖೆ ನಡೆಸುವಂತೆ ತಿಳಿಸಲಾಗಿದೆ ಎಂದು ತಿಳಿಸಿರುವ ಜಿಲ್ಲಾಧಿಕಾರಿ ಸಂದೀಪ್ ನಂದೂರಿ, ಸಜೀವ ದಹನ ಘಟನೆಯ ಕುರಿತು ತನಿಖೆ ನಡೆಸುವಂತೆ ಕಂದಾಯ ಅಧಿಕಾರಿ ಹಾಗೂ ತಹಶೀಲ್ದಾರ್‌ಗೆ ಸೂಚಿಸಲಾಗಿದೆ ಎಂದಿದ್ದಾರೆ. ಅಲ್ಲದೆ ತಮ್ಮ ಪ್ರದೇಶದಲ್ಲಿ ಮೀಟರ್ ಬಡ್ಡಿ ದಂಧೆ ನಡೆಸುವ ಪ್ರಕರಣದ ಬಗ್ಗೆ ದೂರು ಸಲ್ಲಿಸಲು ಟೋಲ್‌ಫ್ರೀ ನಂಬರನ್ನು ಶೀಘ್ರ ರಚಿಸಲಾಗುತ್ತದೆ. ಪೊಲೀಸರು ಹಾಗೂ ಕಂದಾಯ ಅಧಿಕಾರಿಗಳನ್ನು ಒಳಗೊಂಡ ಜಂಟಿ ತಂಡವೊಂದು ಮೀಟರ್ ಬಡ್ಡಿ ದಂಧೆ ನಿಯಂತ್ರಿಸಲು ಕಾರ್ಯ ನಿರ್ವಹಿಸಲಿದೆ ಎಂದು ತಿಳಿಸಿದ್ದಾರೆ.

 ಈ ಪ್ರಕರಣದ ಕುರಿತು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ದೂರು ಸಲ್ಲಿಸುವುದಾಗಿ ಆಯೋಗದ ವಿಸಿಕೆ ಘಟಕಾಧ್ಯಕ್ಷ ತಿರುಮವಲವನ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News