ಗಾಂಜಾ ಮಾರಾಟ: ವಿದ್ಯಾರ್ಥಿಗಳ ಬಂಧನ
ಮಂಗಳೂರು, ಅ. 24: ನಗರದ ಕಾಲೇಜೊಂದರ ಹಾಗೂ ಬಲ್ಮಠದ ಪರಿಸರದಲ್ಲಿ ವಿದ್ಯಾರ್ಥಿಗಳಿಗೆ ಗಾಂಜಾ ಮಾರಾಟ ಮಾಡುತಿದ್ದ ಮೂರು ಮಂದಿ ವಿದ್ಯಾರ್ಥಿಗಳನ್ನು ರೌಡಿ ನಿಗ್ರಹದ ದಳದ ಪೊಲೀಸರು ಬಂಧಿಸಿದ್ದಾರೆ.
ಪಾಂಡೇಶ್ವರದ ಕಾಲೇಜಿನ ಮೂರನೇ ವರ್ಷದ ಇಂಟೀರಿಯರ್ ಡಿಸೈನಿಂಗ್ ವಿದ್ಯಾರ್ಥಿಗಳಾದ ಕೇರಳದ ಶಹೀನ್ ಕೆ.ಆಯೂಬ್ (21), ಶೆಹನ್ ಬಶೀರ್ (20), ಸಚಿನ್ ಪ್ರದೀಪನ್(20) ಬಂಧಿತ ಆರೋಪಿಗಳು.
ಮಂಗಳೂರು ದಕ್ಷಿಣ ಉಪ ವಿಭಾಗದ ರೌಡಿ ನಿಗ್ರಹದ ದಳದ ಸಹಾಯಕ ಪೊಲೀಸ್ ಆಯುಕ್ತರಿಗೆ ಮಂಗಳೂರು ನಗರದ ಬಲ್ಮಠ ಆರ್ಯ ಸಮಾಜ ರಸ್ತೆಯಲ್ಲಿರುವ ಕಟ್ಟಡದ 4ನೆ ಮಹಡಿಯಲ್ಲಿ ಬಾಡಿಗೆ ವಾಸವಾಗಿರುವ ಪಾಂಡೇಶ್ವರದ ಕಾಲೇಜಿನ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಗಾಂಜಾವನ್ನು ಮಾರಾಟ ಮಾಡುವ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ಪೊಲೀಸರು ದಾಳಿ ನಡೆಸಿದ್ದರು. ದಾಳಿ ವೇಳೆ ಕಟ್ಟಡದ ಕೊಠಡಿಯಲ್ಲಿ ವಿದ್ಯಾರ್ಥಿಗಳು ಗಾಂಜಾದೊಂದಿಗೆ ಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ.
ಮನೆಯ ಹಾಲ್‌ನ ಕಪಾಟಿನಲ್ಲಿದ್ದ ಸ್ಕೂಲ್ ಬ್ಯಾಗಿನಲ್ಲಿ ಪ್ಯಾಕೇಟು ಮಾಡಿ ಮಾರಾಟ ಮಾಡಲು ಸಿದ್ಧ ಮಾಡಿ ಇಟ್ಟಿದ್ದ 12 ಗಾಂಜಾ ಪ್ಯಾಕೇಟ್ ಮತ್ತು ಬಿಡಿ ಗಾಂಜಾ ಸೇರಿ ಒಟ್ಟು 400 ಗ್ರಾಂ ಗಾಂಜಾವನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಇದರ ಬೆಲೆ ಸುಮಾರು ರೂ 10,000 ಎಂದು ಅಂದಾಜಿಸಲಾಗಿದೆ. ಅಲ್ಲದೆ ಆರೋಪಿಗಳ ಬಳಿಯಿದ್ದ 4 ಮೊಬೈಲ್ ಸೇರಿದಂತೆ ಸುಮಾರು 32 ಸಾವಿರ ಮೊತ್ತದ ಸೊತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಆರೋಪಿಗಳು ಸುಮಾರು 1 ವರ್ಷದಿಂದ ಕೇರಳದಿಂದ ಗಾಂಜಾವನ್ನು ತಂದು, ಪ್ಯಾಕೇಟ್ ಮಾಡಿ ಸಾರ್ವಜನಿಕರಿಗೆ ಮತ್ತು ಕಾಲೇಜಿನ ಬಳಿಯಲ್ಲಿ ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ. ಪ್ರಮುಖ ಆರೋಪಿ ಈಶ್ವರನ್ ಎಂಬವನು ಗಾಂಜಾ ಪೂರೈಸುತ್ತಿದ್ದ ವಿಚಾರಣೆ ವೇಳೆ ಪೊಲೀಸರಿಗೆ ತಿಳಿಸಿದ್ದಾರೆ. ಆತನ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಸೇಲ್ ಆರ್ ವ್ಯವಸ್ಥೆ ಪ್ರಮುಖ ಆರೋಪಿ ಈಶ್ವರನ್ ಬಳಿಯಿಂದ ಆರೋಪಿಗಳು ಗಾಂಜಾವನ್ನು ಪಡೆದು ಮಾರಾಟ ಮಾಡುತ್ತಿದ್ದು, ಈಶ್ವರನ್ ಇವರಿಗೆ ಕೂಡ ನೀಡುತ್ತಿದ್ದ ಎಂದು ತಿಳಿದುಬಂದಿದೆ. ತಲಾ 50 ಗ್ರಾಂ ತೂಕದ ಗಾಂಜಾದ 5 ಪ್ಯಾಕೆಟ್ ಖರೀದಿಸಿದರೆ ಒಂದು ಪ್ಯಾಕೆಟ್‌ನ್ನು ಉಚಿತವಾಗಿ ನೀಡುವಂತಹ ವ್ಯವಸ್ಥೆಯನ್ನು ಮಾಡಿ ಮಾರಾಟ ಮಾಡಲು ಈಶ್ವರನ್ ಉತ್ತೇಜನ ನೀಡುತ್ತಿದ್ದ ಎನ್ನಲಾಗಿದೆ.
ನಗರ ಪೊಲೀಸ್ ಆಯುಕ್ತ ಟಿ.ಆರ್. ಸುರೇಶ್ ನಿರ್ದೇಶನದಲ್ಲಿ ಡಿಸಿಪಿಗಳಾದ ಹನುಮಂತರಾಯ, ಉಮಾ ಪ್ರಶಾಂತ್ ಅವರ ಮಾರ್ಗದರ್ಶನದಲ್ಲಿ ಮಂಗಳೂರು ರೌಡಿ ನಿಗ್ರಹ ದಳದ ಎ.ಸಿ.ಪಿ. ಕೆ.ರಾಮರಾವ್ ಮತ್ತು ಸಿಬ್ಬಂದಿಯವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.