×
Ad

ಕೆಯ್ಯೂರು: ಶಾಸಕಿ ಶಕುಂತಳಾ ಶೆಟ್ಟಿಯವರಿಂದ ಗ್ರಾಮ ಭೇಟಿ

Update: 2017-10-24 23:29 IST

ಪುತ್ತೂರು, ಅ. 24: ಶಾಸಕಿ ಶಕುಂತಳಾ ಶೆಟ್ಟಿ ಅವರು ಮಂಗಳವಾರ ಕೆಯ್ಯೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಗ್ರಾಮದ ಸಮಸ್ಯೆಗಳನ್ನು ಆಲಿಸಿದರು.

ಗ್ರಾಮದ ಅಂಙತ್ತಡ್ಕ, ತೆಗ್ಗು, ಕಟ್ಟತ್ತಾರು, ದೇವಿನಗರ, ಕೆಯ್ಯೂರು, ಸಂತೋಷ್ ನಗರ, ಮಾಡಾವು ಕಟ್ಟೆ, ಬೈಲಮೂಲೆ, ಇಳಂತಾಜೆ ಮೊದಲಾದ ಕಡೆಗಳಿಗೆ ಭೇಟಿ ನೀಡಿ ಗ್ರಾಮದ ಜನರೊಂದಿಗೆ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಇದೇ ವ್ಯಾಪ್ತಿಯಲ್ಲಿ ಹಲವು ಕಾಮಗಾರಿಗಳ ಪರಿಶೀಲನೆ, ಉದ್ಘಾಟನೆ ಹಾಗೂ ಶಿಲಾನ್ಯಾಸ ಕಾರ್ಯಕ್ರಮವನ್ನು ನೆರವೇರಿಸಿದರು.

ಈ ವೇಳೆ ಮಾತನಾಡಿದ ಶಕುಂತಳಾ ಶೆಟ್ಟಿ ಗ್ರಾಮೀಣ ರಸ್ತೆಗಳ ಅಭಿವೃದ್ದಿಗೆ ಇನ್ನಿತರ ಅಭಿವೃದ್ದಿ ಕಾಮಗಾರಿಗಳಿಗೆ ನನ್ನಿಂದ ಸಾಧ್ಯವಾದ ಅನುದಾನ ಒದಗಿಸಿದ್ದೇನೆ, ನೀವು ನನ್ನ ಮೇಲೆ ನಂಬಿಕೆ ಇಟ್ಟಿರುವುದರಿಂದ ದೇವರು ನನಗೆ ಅಭಿವೃದ್ದಿ ಕಾರ್ಯ ಮಾಡಲು ಶಕ್ತಿ ಕೊಟ್ಟಿದ್ದಾನೆ ಎಂದು ಹೇಳಿದರು. ರಸ್ತೆ ಕಾಮಗಾರಿ ವೇಳೆ ಗ್ರಾಮಸ್ಥರ ಸಹಕಾರ ಮುಖ್ಯವಾಗಿದ್ದು ರಸ್ತೆ ಕೆಲಸಗಾರರೂ ಗ್ರಾಮಸ್ಥರೊಂದಿಗೆ ಉತ್ತಮ ಬಾಂಧವ್ಯ ಹೊಂದಿರಬೇಕಾಗಿದೆ ಎಂದು ಹೇಳಿದರು. ಕಟ್ಟತ್ತಾರು ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದ ಶಾಸಕರು ಕೆಲ ಕಾಲ ಮಕ್ಕಳ ಜೊತೆ ಹಾಗೂ ಶಿಕ್ಷಕರ ಜೊತೆ ಮಾತುಕತೆ ನಡೆಸಿದರು.

ಶಾಲಾ ವಿದ್ಯಾರ್ಥಿ ಶ್ರೇಯಸ್ ಎಂಬವರ ಹುಟ್ಟುಹಬ್ಬ ಪ್ರಯುಕ್ತ ಶಾಸಕರು ವಿದ್ಯಾರ್ಥಿಗೆ ಶುಭ ಕೋರಿದರು. ಬಳಿಕ ಕಟ್ಟತ್ತಾರು ಬಿ.ಎಂ ಮುಹಮ್ಮದ್ ಎಂಬವರ ಮನೆಗೆ ಭೇಟಿ ನೀಡಿ ಮನೆ ಮನೆಗೆ ಕಾಂಗ್ರೆಸ್ ಅಭಿಯಾನವನ್ನು ಸಾಂಕೇತಿಕವಾಗಿ ನಡೆಸಲಾಯಿತು. ನಂತರ ಪರ್ತ್ಯಡ್ಕ ಕಾಲನಿಯ ಕಾಂಕ್ರೀಟ್ ರಸ್ತೆಯನ್ನು ವೀಕ್ಷಣೆ ಮಾಡಿದ ಶಾಸಕರು ಅಂಕತ್ತಡ್ಕ ಕಾಲನಿಯಲ್ಲಿ ಕುಡಿಯುವ ನೀರಿನ ಟ್ಯಾಂಕನ್ನು ಉದ್ಘಾಟಿಸಿದರು.

ಕರಾವಳಿ ಪ್ರಾಕಾರ ಮುಖಾಂತರ ನಡೆದ ಬೈಲಮೂಲೆ ಕಾಲುಸಂಕ ವೀಕ್ಷಿಸಿದ ಅವರು ಕೆಯ್ಯೂರು ಎಟ್ಯಡ್ಕ ಕಾಂಕ್ರೀಟ್ ರಸ್ತೆಗೆ ಗುದ್ದಲಿ ಪೂಜೆ ನೆರವೇರಿಸಿದರು. ಬಳಿಕ ಕೆಯ್ಯೂರು ನರ್ಮಾಲ ರಸ್ತೆಗೆ ಗುದ್ದಲಿ ಪೂಜೆ ನೆರವೇರಿಸಿದ ಅವರು ಪಲ್ಲತ್ತಡ್ಕ ಕಿಂಡಿ ಅಣೆಕಟ್ಟು ಹಾಗೂ ಬೈರರ ಕಾಲನಿಗೆ ಹೋಗುವ ಕಾಂಕ್ರೀಟ್ ರಸ್ತೆಯನ್ನು ವೀಕ್ಷಿಸಿದರು. ನಂತರ ಕಣಿಯಾರು ಶಾಲೆಗೆ ಹೋಗುವ ರಸ್ತಯನ್ನು ವೀಕ್ಷಿಸಿದ ಬಳಿಕ ಕಣಿಯಾರು ವಿಠಲ ರೈ ಅವರ ಮನೆಗೆ ಭೇಟಿ ನೀಡಿದರು. ನಂತರ ಅರ್ತ್ಯಡ್ಕ ಪೆರ್ಲಂಪಾಡಿ ಸಿಆರ್‌ಸಿ ಕಾಲನಿ ರಸ್ತೆಗೆ ಗುದ್ದಲಿ ಪೂಜೆ ನೆರವೇರಿಸಿದ ಬಳಿಕ ದೇರ್ಲ ಕಾಲನಿಯ ಅಮ್ಮನವರ ದೇವಸ್ಥಾನಕ್ಕೆ ಭೇಟಿ ನೀಡಿ ನೀರಿನ ಟ್ಯಾಂಕ್ ಉದ್ಘಾಟಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುಹಮ್ಮದ್ ಬಡಗನ್ನೂರು, ಕೆಯ್ಯೂರು ಗ್ರಾ.ಪಂ ಸದಸ್ಯರಾದ ಎ.ಕೆ ಜಯರಾಮ ರೈ, ಅಬ್ದುಲ್ ಖಾದರ್ ಮೇರ್ಲ, ಕೆ.ಎಂ ಹನೀಫ್ ಮಾಡಾವು, ಅಮಿತಾ, ಪದ್ಮಾವತಿ, ರಾಕಾ, ಪಿಡಿಒ ಕೆ.ಎಂ ಸುಬ್ರಹ್ಮಣ್ಯ, ಕೆಡಿಪಿ ಸದಸ್ಯ ಕೃಷ್ಣಪ್ರಸಾದ್ ಆಳ್ವ, ಯುವ ಕಾಂಗ್ರೆಸ್ ಮುಖಂಡ ರೋಷನ್ ರೈ ಬನ್ನೂರು ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News