ಚಂದ್ರಯಾನ -2 ಯೋಜನೆಯ ಸಿದ್ಧತಾ ಕಾರ್ಯಕ್ರಮ ಆರಂಭ

Update: 2017-10-25 14:53 GMT

ಹೈದರಾಬಾದ್, ಅ.25: ಚಂದ್ರನ ಮೇಲ್ಮೈಯಲ್ಲಿ ಕೂಲಂಕಷ ಅಧ್ಯಯನ ಮಾಡುವ ಉದ್ದೇಶ ಹೊಂದಿರುವ ಮುಂಬರುವ ಚಂದ್ರಯಾನ-2 ಯೋಜನೆಯ ಉಡ್ಡಯನ ಏಕೀಕರಣ ಪ್ರಕ್ರಿಯೆಗಳನ್ನು ಇಸ್ರೊ ಆರಂಭಿಸಿದೆ.

9 ವರ್ಷಗಳ ಹಿಂದೆ ಇಸ್ರೋ ನಡೆಸಿರುವ ಚಂದ್ರಯಾನ-1 ಯೋಜನೆಯ ಸುಧಾರಿತ ಭಾಗವಾಗಿರುವ ಚಂದ್ರಯಾನ-2 ಯೋಜನೆ ಚಂದ್ರನೆಡೆಗೆ ಭಾರತ ಕೈಗೊಂಡಿರುವ ಎರಡನೇ ಯಾನವಾಗಿದೆ. ಇದನ್ನು ಯಶಸ್ವಿಗೊಳಿಸಲು ದೇಶೀಯವಾಗಿ ಅಭಿವೃದ್ಧಿಗೊಳಿಸಿದ ಹಲವು ಆಧುನಿಕ ತಂತ್ರಜ್ಞಾನವನ್ನು ಒಳಗೊಂಡಿರುವ ಜಿಎಸ್‌ಎಲ್‌ವಿ-ಎಂಕೆ 2 ಬಾಹ್ಯಾಕಾಶ ನೌಕೆ ಸಿದ್ಧವಾಗಿದೆ. ಈ ಬಾಹ್ಯಾಕಾಶ ನೌಕೆಯಲ್ಲಿ ಉಪಗ್ರಹ , ಚಂದ್ರನ ಮೇಲ್ಮೈಯಲ್ಲಿ ಇಳಿಯುವ ಹಾಗೂ ಸಂಶೋಧನೆ ನಡೆಸುವ ವ್ಯವಸ್ಥೆಗಳನ್ನು ಅಳವಡಿಸಲಾಗಿದೆ.

  ಅಲ್ಲದೆ ಚಂದ್ರನ ಮೇಲ್ಮೈಯಲ್ಲಿ ಸರಳವಾಗಿ ಇಳಿಯುವ ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ಉಪಗ್ರಹ ಸಿದ್ಧವಾಗಿದೆ. ಉಡ್ಡಯನ ಏಕೀಕರಣ ಪ್ರಕ್ರಿಯೆ ಆರಂಭವಾಗಿದೆ. ಮೇಲ್ಮೈಯಲ್ಲಿ ಇಳಿಯುವ ಪ್ರಕ್ರಿಯೆಯ ಸರಣಿ ಪ್ರಯೋಗಾರ್ಥ ಪರೀಕ್ಷಾ ಕಾರ್ಯ ನಡೆಯುತ್ತಿದೆ. ಚಂದ್ರನ ಮೇಲ್ಮೈಯಲ್ಲಿ ಇಳಿಯುವ ಸಂದರ್ಭ ಬಾಹ್ಯಾಕಾಶ ನೌಕೆಯ ಗಾಲಿಗಳು ಹಾಗೂ ಮಣ್ಣಿನ ಹೊಂದಾಣಿಕೆಯನ್ನು ನಿರ್ಧರಿಸುವ ಮಣ್ಣು ಮಿಶ್ರಗೊಳಿಸುವ ಪ್ರಯೋಗವೂ ಇದರಲ್ಲಿ ಸೇರಿದೆ . 2018ರ ಮಾರ್ಚ್ ವೇಳೆ ಚಂದ್ರಯಾನ-2 ಕಾರ್ಯಕ್ರಮ ನಡೆಸುವ ಉದ್ದೇಶವಿದೆ ಎಂದು ಇಸ್ರೊ ಅಧ್ಯಕ್ಷ ಎ.ಎಸ್.ಕಿರಣ್ ಕುಮಾರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News