ಸಾಂತ್ವನಕ್ಕಿದೆ ಸಂಪೂರ್ಣ ರಕ್ಷಣೆ: ಎಸ್ಪಿ ಡಾ.ಪಾಟೀಲ್
ಉಡುಪಿ, ಅ.25: ಜಿಲ್ಲೆಯಲ್ಲಿರುವ ಸಾಂತ್ವನ ಕೇಂದ್ರಗಳ ಕರ್ತವ್ಯ ನಿರ್ವಹಣೆಗೆ ಪೂರಕವಾಗಿ ಪೊಲೀಸ್ ಇಲಾಖೆ ನೆರವು ನೀಡಲಿದೆ. ಮಹಿಳೆಯರ ಮತ್ತು ಮಕ್ಕಳ ರಕ್ಷಣೆ ಇಲಾಖೆಯ ಆದ್ಯತೆಗಳಲ್ಲೊಂದಾಗಿದ್ದು ಇಲಾಖೆ ನೊಂದವರಿಗೆ ತುರ್ತು ಸ್ಪಂದನೆ ನೀಡುತ್ತದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಂಜೀವ್ ಎಂ.ಪಾಟೀಲ್ ಹೇಳಿದ್ದಾರೆ.
ಬುಧವಾರ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅಧ್ಯಕ್ಷತೆಯಲ್ಲಿ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಾಂತ್ವನ ಯೋಜನೆಯ ಸಮನ್ವಯ ಜಿಲ್ಲಾ ಮಟ್ಟದ ಸಮಿತಿ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು. ನೊಂದವರು ಮಹಿಳಾ ಪೊಲೀಸ್ ಠಾಣೆಗೆ ಬಂದು ದೂರು ನೀಡುವ ಅಗತ್ಯವಿಲ್ಲ. ತಮ್ಮ ವ್ಯಾಪ್ತಿಯ ಪೊಲೀಸ್ ಠಾಣೆಗೆ ಹೋಗಿ ದೂರು ದಾಖಲಿಸಿ. ಈ ಸಂಬಂಧ ಎಲ್ಲ ಠಾಣೆಗಳಿಗೂ ಸುತ್ತೋಲೆಯನ್ನು ಕಳುಹಿಸಲಾಗುವುದು ಎಂದ ಎಸ್ಪಿ, ದೂರು ಪಡೆಯಲು ನಿರಾಕರಿಸಿದರೆ ತ್ಷಣ 100ಕ್ಕೆ ಫೋನ್ ಮಾಡಿ ಎಂದರು.
ರಾತ್ರಿ ವೇಳೆ ಸಾಂತ್ವನ ಕೇಂದ್ರ ವ್ಯಾಪ್ತಿಯಲ್ಲಿ ಬೀಟ್ ವ್ಯವಸ್ಥೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ಕ್ರಮಕೈಗೊಳ್ಳಲಾಗುವುದು. ಆರೋಪಿಗಳನ್ನು ಇಲಾಖೆ ಯವರು ಬೆಂಬಲಿಸುತ್ತಾರೆಂ ದೂರು ಬಂದರೆ ತಕ್ಷಣ ಅಂತಹವರ ವಿರುದ್ದ ಕಠಿಣ ಕ್ರಮ ಕೈಗೊಳ್ಳುವ ಭರವಸೆಯನ್ನೂ ಅವರು ನೀಡಿದರು.
ಸಾಂತ್ವನ ಕೇಂದ್ರಗಳಲ್ಲಿ ಸಿಸಿಟಿವಿ ಅಳವಡಿಸುವಂತೆ ಸಲಹೆ ನೀಡಿದ ಅವರು, ಇದರಿಂದ ತನಿಖೆಗೆ ನೆರವಾಗಲಿದೆ ಎಂದರು. ಸ್ಥೈರ್ಯನಿಧಿ ನೀಡಲು ಪೂರಕ ವಾಗುವಂತೆ ಎಫ್‌ಐಆರ್ ಪ್ರತಿ ಮತ್ತು ಮೆಡಿಕಲ್ ವರದಿಯ ಪ್ರಥಮ ಮಾಹಿತಿ ವರದಿಯನ್ನು ಮಹಿಳಾ ಚಿಕಿತ್ಸಾ ಘಟಕಗಳಿಗೆ ಶೀಘ್ರವಾಗಿ ತಲುಪಿ ಸಲು ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡುವುದಾಗಿಯೂ ಅವರು ಮಹಿಳಾ ಚಿಕಿತ್ಸಾ ಘಟಕದ ಪ್ರತಿನಿಧಿಗಳಿಗೆ ಉತ್ತರಿಸಿದರು.
ಸಾಂತ್ವನ ಕೇಂದ್ರಗಳಲ್ಲಿ ಸಿಸಿಟಿವಿ ಅಳವಡಿಸುವಂತೆ ಸಲಹೆ ನೀಡಿದ ಅವರು, ಇದರಿಂದ ತನಿಖೆಗೆ ನೆರವಾಗಲಿದೆ ಎಂದರು.
ಆರಂಭದಲ್ಲಿ ಮಾತನಾಡಿದ ಹೆಚ್ಚುವರಿ ಎಸ್ಪಿ ಕುಮಾರಚಂದ್ರ, ಮಹಿಳೆಯರ ರಕ್ಷಣೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಮಹಿಳಾ ರಕ್ಷಣಾಧಿಕಾರಿಗಳಿದ್ದು ಅವರ ಬಳಿ ಪ್ರಥಮವಾಗಿ ವರದಿ ಮಾಡಿದರೆ ಶೀಘ್ರ ನ್ಯಾಯ ದೊರೆಯುತ್ತದೆ. ಇಲಾಖೆಗಳು ಪರಸ್ಪರ ಸಮನ್ವಯದಿಂದ ಕರ್ತವ್ಯ ನಿರ್ವಹಿಸಿದರೆ ಜನಸಾಮಾನ್ಯರಿಗೆ ಅನುಕೂಲವಾಗುತ್ತದೆ ಎಂದರು.
ಮಹಿಳಾ ಠಾಣೆಯ ಎಎಸ್‌ಐ ಮುಕ್ತಾ, ಸಾಂತ್ವನ ಕೇಂದ್ರದವರು ಪ್ರಸ್ತಾಪಿಸಿದ ಪ್ರತಿಯೊಂದು ಪ್ರಕರಣದ ಬಗ್ಗೆಯೂ ಸವಿವರವಾದ ಮಾಹಿತಿ ನೀಡಿದರು. ಮಹಿಳಾ ಒಕ್ಕೂಟದ ಅಧ್ಯಕ್ಷರು ಬೈಂದೂರು ವ್ಯಾಪ್ತಿಗೊಂದು ಮಹಿಳಾ ಪೊಲೀಸ್ ಠಾಣಾ ಬೇಡಿಕೆಯನ್ನು ಇಂದೂ ಸಹ ಸಭೆ ಮುಂದಿಟ್ಟರು.
ಜಿಲ್ಲಾಧಿಕಾರಿಗಳು ಸಭಾ ನಿರ್ಣಯದಲ್ಲಿ ಬೇಡಿಕೆಯನ್ನು ಸೇರಿಸಿ ಸರಕಾರಕ್ಕೆ ಕಳುಹಿಸುವ ಭರವಸೆಯನ್ನು ನೀಡಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವೀಣಾ, ಮೂರು ಸಾಂತ್ವನ ಕೇಂದ್ರಗಳ ಸದಸ್ಯರು, ಪದಾಧಿಕಾರಿ ಗಳು, ಕಾನೂನು ಸೇವಾ ಪ್ರಾಧಿಕಾರದ ಸದಸ್ಯರು ಉಪಸ್ಥಿತರಿದ್ದರು.