ಉಡುಪಿ: ಸುಧರ್ಮ ರಥಯಾತ್ರೆಗೆ ಚಾಲನೆ
ಉಡುಪಿ, ಅ.25: ಮುಂದಿನ ನ.24, 25 ಮತ್ತು 26ರಂದು ಉಡುಪಿಯಲ್ಲಿ ನಡೆಯಲಿರುವ ಹಿಂದೂ ಸಮಾಜದ ಪ್ರಮುಖ ಪೀಠಾಧಿಪತಿಗಳು ಹಾಗೂ ಸಂತರ ಧರ್ಮ ಸಂಸದ್‌ನ ಪ್ರಚಾರಾರ್ಥ ಹಮ್ಮಿಕೊಳ್ಳಲಾದ ‘ಸುಧರ್ಮ ರಥಯಾತ್ರೆ’ಗೆ ಬುಧವಾರ ಇಲ್ಲಿ ಚಾಲನೆ ನೀಡಲಾಯಿತು.
ರಥಯಾತ್ರೆಗೆ ಉಡುಪಿಯ ನ್ಯಾಯವಾದಿ ಪ್ರವೀಣ್ ಪೂಜಾರಿ ಚಾಲನೆ ನೀಡಿ ಮಾತನಾಡಿ, ಪೇಜಾವರಶ್ರೀಗಳ ಪರ್ಯಾಯ ಸಂದರ್ಭದಲ್ಲಿ ಎರಡನೇ ಬಾರಿಗೆ ನಡೆದಿರುವ ಧರ್ಮಸಂಸದ್‌ನಲ್ಲಿ ಹಿಂದೂ ಧರ್ಮದ ಪುನರುತ್ಧಾನಕ್ಕೆ ಬೇಕಾದ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ವಿಶ್ವಹಿಂದು ಪರಿಷತ್‌ನ ಪ್ರಾಂತ ಕಾರ್ಯದರ್ಶಿ ಎಂ.ಬಿ.ಪುರಾಣಿಕ್ ಮಾತನಾಡಿ, ಧರ್ಮಸಂಸದ್ ಮೂಲಕ ಹಿಂದು ಧರ್ಮವನ್ನು ಟೀಕಿಸುವವರಿಗೆ ಬಲವಾದ ಸಂದೇಶವನ್ನು ನೀಡಲಾಗುವುದು ಎಂದರು. ದೇಶದಲ್ಲಿ ರಾಜಕೀಯ ಹಾಗೂ ಸಾಮಾಜಿಕ ಬದಲಾವಣೆ ಕಾಲ ಸನ್ನಿಹಿತವಾಗಿದ್ದು, ಇದಕ್ಕೆ ಸಮಸ್ತ ಹಿಂದುಗಳು ಕೈಜೋಡಿಸಬೇಕು ಎಂದರು.
ಬಜರಂಗದಳ ಪ್ರಾಂತ ಸಂಚಾಲಕ ಶರಣ್ ಪಂಪ್‌ವೆಲ್ ಪ್ರಾಸ್ತಾವಿಕವಾಗಿ ಮಾತನಾಡಿ, ಈಗಾಗಲೇ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ 250ಕ್ಕೂ ಅಧಿಕ ಕಡೆಗಳಲ್ಲಿ ಪ್ರಚಾರ ಸಭೆಗಳನ್ನು ನಡೆಸಲಾಗಿದ್ದು, ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದರು.
ಈ ರಥಯಾತ್ರೆಯು ಇಂದಿನಿಂದ ನ.24ರವರೆಗೆ ಬೈಂದೂರು, ಕುಂದಾಪುರ, ಬ್ರಹ್ಮಾವರ, ಕಾರ್ಕಳ, ಕಾಪು, ಉಡುಪಿ ಗ್ರಾಮಾಂತರ ಹಾಗೂ ಉಡುಪಿ ನಗರ ಗಳಲ್ಲಿ ಸಂಚರಿಸಲಿದ್ದು, ಪ್ರತಿ ಊರಿನಲ್ಲೂ ಧರ್ಮಸಂಸದ್ ಸಂದೇಶವನ್ನು ಜನರಿಗೆ ತಲುಪಿಸಲಿದೆ ಎಂದರು.
ಕಾರ್ಯಕ್ರಮದಲ್ಲಿ ವಿಹಿಂಪನ ಜಿಲ್ಲಾಧ್ಯಕ್ಷ ಪಿ.ವಿಲಾಸ್ ನಾಯಕ್, ಬಜರಂಗ ದಳದ ಉಡುಪಿ ಜಿಲ್ಲಾ ಸಂಚಾಲಕ ದಿನೇಶ್ ಮೆಂಡನ್, ವಿಹಿಂಪ ಪ್ರಾಂತ ಕಾರ್ಯದರ್ಶಿ ಕೃಷ್ಣಮೂರ್ತಿ, ಉಡುಪಿ ನಗರಾಧ್ಯಕ್ಷ ಸಂತೋಷ್ ಸುವರ್ಣ ಉದ್ಯಾವರ ಉಪಸ್ಥಿತರಿದ್ದರು.
ಬಜರಂಗದಳದ ಮಂಗಳೂರು ವಿಭಾಗ ಸಹಸಂಚಾಲಕ ಸುನಿಲ್ ಕೆ.ಆರ್. ಸ್ವಾಗತಿಸಿದರೆ, ಮಾಧ್ಯಮ ಪ್ರಮುಖ್ ಭಾಗ್ಯಶ್ರೀ ಐತಾಳ್ ಕಾರ್ಯಕ್ರಮ ನಿರೂಪಿಸಿದರು. ವಿಹಿಂಪ ಜಿಲ್ಲಾ ಕಾರ್ಯದರ್ಶಿ ರತ್ನಾಕರ ಅಮೀನ್ ವಂದಿಸಿದರು.