ಕರ್ತವ್ಯಕ್ಕೆ ಅಡ್ಡಿ: ಆರೋಪಿ ಸೆರೆ
ಮಂಗಳೂರು, ಅ.25: ಸರಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಬಜ್ಪೆ ಶಾಂತಿಗುಡ್ಡೆ ನಿವಾಸಿ, ರೌಡಿಶೀಟರ್ ಅಬ್ದುಲ್ ಮುನೀರ್ (22) ಎಂಬಾತನನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಅ.22ರಂದು ಮುಖ್ಯಮಂತ್ರಿ ದ.ಕ.ಜಿಲ್ಲೆಗೆ ಭೇಟಿ ನೀಡಿದಾಗ ಮಂಗಳೂರು ನಗರ ಸಂಚಾರ ಉತ್ತರ ಉಪವಿಭಾಗದ ಪೊಲೀಸ್ ಅಧಿಕಾರಿ ಮಂಜುನಾಥ ಸಿಬ್ಬಂದಿಯ ಜೊತೆ ಸೇರಿ ಕಾವೂರು ಠಾಣಾ ವ್ಯಾಪ್ತಿಯ ಮರಕಡ ಜಂಕ್ಷನ್ ಬಳಿ ಸಂಜೆ 6:30ಕ್ಕೆ ಕರ್ತವ್ಯದಲ್ಲಿದ್ದರು. ಈ ಸಂದರ್ಭ ಬಜಪೆ ಕಡೆಯಿಂದ ಕಾವೂರು ಕಡೆಗೆ ಬೈಕ್‌ನಲ್ಲಿ ಹೆಲ್ಮೆಟ್ ಧರಿಸದೆ ಬರುತ್ತಿದ್ದ ಬೈಕ್‌ನ್ನು ನಿಲ್ಲಿಸುವಂತೆ ಸೂಚನೆ ನೀಡಿದಾಗ ಸವಾರನು ಬೈಕನ್ನು ಏಕಾಎಕಿ ಚೆಲುವರಾಜ್‌ರಿಗೆ ಢಿಕ್ಕಿ ಹೊಡೆದು ಪರಾರಿಯಾಗಿದ್ದ. ಇದರಿಂದ ಚೆಲುವರಾಜ್ ಗಾಯಗೊಂಡು ನಗರದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದರು. ಈ ಬಗ್ಗೆ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಯನ್ನು ಬುಧವಾರ ಸಿಸಿಬಿ ಪೊಲೀಸರು ಬಾವುಟಗುಡ್ಡೆ ರಸ್ತೆಯಲ್ಲಿ ವಶಕ್ಕೆ ಪಡೆದು ಮುಂದಿನ ಕ್ರಮಕ್ಕೆ ಕಾವೂರು ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.
ಆರೋಪಿ ಅಬ್ದುಲ್ ಮುನೀರ್ ವಿರುದ್ಧ ಈ ಹಿಂದೆ ಮಂಗಳೂರು ದಕ್ಷಿಣ, ಸುರತ್ಕಲ್,ಬಜ್ಪೆ, ಉಳ್ಳಾಲ ಪೊಲೀಸ್ ಠಾಣೆಗಳಲ್ಲಿ ಸರಕಳ್ಳತನ ಹಾಗೂ ಬೈಕ್ ಕಳ್ಳತನಕ್ಕೆ ಸಂಬಂಧಪಟ್ಟಂತೆ 10 ಪ್ರಕರಣಗಳು ದಾಖಲಾಗಿವೆ. ಅಲ್ಲದೆ 2015ರಲ್ಲಿ ಮಂಗಳೂರು ಕಾರಾಗೃಹದಲ್ಲಿ ಗಣೇಶ್ ಶೆಟ್ಟಿ ಎಂಬಾತನ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ. ಈ ಪ್ರಕರಣದಲ್ಲಿ ಸುಮಾರು 3 ತಿಂಗಳ ಹಿಂದೆ ಜಾಮೀನು ಪಡೆದುಕೊಂಡು ಬಿಡುಗಡೆಗೊಂಡಿದ್ದ. ಈತನ ವಿರುದ್ಧ ಮಂಗಳೂರು ಬರ್ಕೆ ಪೊಲೀಸ್ ಠಾಣೆಯಲ್ಲಿ ರೌಡಿ ಶೀಟ್ ಇದೆ.