ಪ್ರಧಾನಿ ಆಗಮನ: ಪೂರ್ವಭಾವಿ ಸಭೆ
ಮಂಗಳೂರು, ಅ.25: ಪ್ರಧಾನಮಂತ್ರಿ ನರೇಂದ್ರ ಮೋದಿ ಅ.29ರಂದು ದ.ಕ. ಜಿಲ್ಲೆಗೆ ಆಗಮಿಸುವ ಹಿನ್ನೆಲೆಯಲ್ಲಿ ಪೂರ್ವಭಾವಿ ಸಭೆಯು ಬುಧವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಯಿತು.
ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಎಸ್. ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪ್ರಧಾನಮಂತ್ರಿಯ ಆಗಮನದ ಪ್ರಯುಕ್ತ ಕೈಗೊಳ್ಳಬೇಕಾದ ಸಿದ್ಧತೆ ಹಾಗೂ ಭದ್ರತಾ ಕ್ರಮಗಳ ಬಗ್ಗೆ ಚರ್ಚಿಸಲಾಯಿತು.
ಜಿಲ್ಲಾಧಿಕಾರಿಗಳು ಮಾತನಾಡಿ, ಪ್ರಧಾನಿ ಭೇಟಿ ನೀಡುವ ಸ್ಥಳಗಳಲ್ಲಿ ಹಾಗೂ ಆಗಮನ-ನಿರ್ಗಮನ ಸಂದರ್ಭ ಯಾವುದೇ ಲೋಪಕ್ಕೆ ಅವಕಾಶ ನೀಡದೆ ಎಲ್ಲ ರೀತಿಯ ಸಿದ್ಧತೆಗಳನ್ನು ತ್ವರಿತವಾಗಿ ನಡೆಸಬೇಕು. ವಿಮಾನ ನಿಲ್ದಾಣ, ಹೆಲಿಪ್ಯಾಡ್, ರಸ್ತೆ ಸಂಚಾರ, ಆಹಾರ, ವಾಹನದ ವ್ಯವಸ್ಥೆ, ಧರ್ಮಸ್ಥಳದ ಕಾರ್ಯಕ್ರಮ ಸ್ಥಳದಲ್ಲಿ ಸಕಲ ರೀತಿಯ ವ್ಯವಸ್ಥೆಯನ್ನು ಪ್ರಧಾನಿಯ ಭದ್ರತಾ ನಿಯಮಾನುಸಾರ ಕೈಗೊಳ್ಳಬೇಕು ಎಂದರು.
ಅಪರ ಜಿಲ್ಲಾಧಿಕಾರಿ ಕುಮಾರ್ ಮಾತನಾಡಿ, ಪ್ರಧಾನಮಂತ್ರಿಯ ಭೇಟಿಯ ಹಿನ್ನೆಲೆಯಲ್ಲಿ ವಿಶೇಷ ರಕ್ಷಣಾ ದಳ(ಎಸ್‌ಪಿಜಿ) ಜಿಲ್ಲೆಗೆ ಆಗಮಿಸಿದ್ದು, ಇದರೊಂದಿಗೆ ಮಂಗಳೂರು ನಗರ ಹಾಗೂ ದ.ಕ. ಜಿಲ್ಲಾ ಪೊಲೀಸರು ಭದ್ರತಾ ವ್ಯವಸ್ಥೆ ಕೈಗೊಳ್ಳಲಿದ್ದಾರೆ ಎಂದು ಹೇಳಿದರು.
ಸಭೆಯಲ್ಲಿ ಸಹಾಯಕ ಆಯುಕ್ತರಾದ ರೇಣುಕಾ ಪ್ರಸಾದ್, ಡಾ. ರಘುನಂದನ ಮೂರ್ತಿ, ಡಿಸಿಪಿ ಹನುಮಂತರಾಯ, ವಿಮಾನ ನಿಲ್ದಾಣದ ನಿರ್ದೇಶಕ ವೆಂಕಟೇಶ್ವರ ರಾವ್, ಸಿಐಎಸ್‌ಎಫ್, ಏರ್ ಇಂಡಿಯಾ ಹಾಗೂ ರಾಜ್ಯ ಸರಕಾರದ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.