×
Ad

ತುಳು ಚಿತ್ರದ ಶೀರ್ಷಿಕೆ ಬಿಡುಗಡೆ

Update: 2017-10-25 22:15 IST

ಮಂಗಳೂರು, ಅ.25: ನಗರದ ಸುಶ ಫಿಲಂಸ್ ಅಡಿಯಲ್ಲಿ ನಿರ್ಮಾಣವಾಗಲಿರುವ ಪ್ರಥಮ ತುಳು ಚಿತ್ರದ ಶೀರ್ಷಿಕೆಯನ್ನು ನಗರದ ಪ್ರೆಸ್‌ಕ್ಲಬ್‌ನಲ್ಲಿ ಬುಧವಾರ ಅನಾವರಣಗೊಳಿಸಲಾಯಿತು.

ಈ ತುಳು ಸಿನಿಮಾದ ಶೀರ್ಷಿಕೆಯನ್ನು ತುಳು ಭಾಷಾ ಲಿಪಿಯಲ್ಲಿ ಬರೆದಿರುವುದರಿಂದ ಚಿತ್ರದ ಹೆಸರನ್ನು ಬಹಿರಂಗಗೊಳಿಸಲು ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದು ನಿರ್ದೇಶಕ ಶರತ್ ಎಸ್. ಪೂಜಾರಿ ತಿಳಿಸಿದ್ದಾರೆ.

ಈ ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸುವ ಒಬ್ಬರಿಗೆ ಚಿತ್ರದ ಮುಹೂರ್ತದಂದು ಬಹುಮಾನ ನೀಡಲಾಗುವುದು. ಚಿತ್ರದ ಶೀರ್ಷಿಕೆಯನ್ನು ಕನ್ನಡದಲ್ಲಿ ಪತ್ತೆ ಮಾಡಿದ ಬಳಿಕವೇ ಚಿತ್ರದ ಮುಹೂರ್ತ ದಿನಾಂಕ ನಿಗದಿಯಾಗಲಿದೆ ಎಂದು ತಿಳಿಸಿದರು.

ಈ ಚಿತ್ರದ ಪ್ರಥಮ ಪೋಸ್ಟರ್ ಹಾಗೂ ಶೀರ್ಷಿಕೆಯನ್ನು ಹರಿಕೃಷ್ಣ ಪುನರೂರು ಅನಾವರಣಗೊಳಿಸಿದರು. ಈ ಚಿತ್ರವು ಅದ್ಭುತ ಮನೋರಂಜನೆ, ತುಳು ಭಾಷೆಯಲ್ಲಿ ಹೊಸ ರೂಪದಲ್ಲಿ, ಹೊಸ ಆಯಾಮ ಹಾಗೂ ವಿಭಿನ್ನ ಕಥಾಹಂದರದಲ್ಲಿ ಮೂಡಿಬರಲಿದೆ. ಹೊಸ ತಂಡ ಹಾಗೂ ಹೊಸ ಪ್ರತಿಭೆಗಳಿಗೆ ಅವಕಾಶ ನೀಡಲಾಗಿದೆ. ತುಳು ರಂಗಭೂಮಿಯ ಕಲಾವಿದರಾದ ಭೋಜರಾಜ ವಾಮಂಜೂರು, ಅರವಿಂದ ಬೋಳಾರ ಹಾಗೂ ದೀಪಕ್ ರೈ ವಿಭಿನ್ನ ಪಾತ್ರಗಳಲ್ಲಿ ರಂಜಿಸಲಿದ್ದಾರೆ. ನವೆಂಬರ್‌ನಲ್ಲಿ ಚಿತ್ರೀಕರಣ ಆರಂಭಗೊಂಡು ಡಿಸೆಂಬರ್ ಅಂತ್ಯಕ್ಕೆ ಮುಕ್ತಾಯಗೊಳಿಸಲಾಗುವುದು. ಎಪ್ರಿಲ್‌ನಲ್ಲಿ ಚಿತ್ರ ತೆರೆ ಕಾಣಲಿದೆ ಎಂದು ಶರತ್ ಎಸ್.ಪೂಜಾರಿ ಹೇಳಿದರು.

ಈ ಸಿನಿಮಾದ ನಿರ್ಮಾಪಕರಾಗಿ ರೊನಾಲ್ಡ್ ಮಾರ್ಟಿಸ್ ಹಾಗೂ ಸುಶ ಫಿಲಂಸ್‌ನ ಸುಬ್ರಹ್ಮಣ್ಯ ಆರ್.ಸಾಲ್ಯಾನ್, ಸಹಭಾಗಿತ್ವದಲ್ಲಿ ಸಿದ್ದಬಸಪ್ಪ ಹಾಗೂ ಶ್ರೀನಿವಾಸ ಮೂರ್ತಿ ಬೆಂಗಳೂರು, ಛಾಯಾಗ್ರಹಣ ವಿಜಯ್, ನಿರ್ವಹಣೆ ಪ್ರಕಾಶ್ ಗಟ್ಟಿ, ಸಂಗೀತ ಶನೊಯ್ ಜೋಸೆಫ್, ಪೋಸ್ಟ್ ಪ್ರೊಡಕ್ಷನ್ ಸಂತೋಷ್ ಶೆಟ್ಟಿ ಕಟೀಲ್, ಕಲೆ ಮತ್ತು ಸಹ ನಿರ್ದೇಶನ ಎಲ್ದೋಸ್ ಮತ್ತು ಯೋಗೀಶ್ ಉಪ್ಪೂರು, ಕಲೆ ಬಸಂತ ಕುಮಾರ್ ಇರಲಿದ್ದಾರೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News