×
Ad

ನ.3ರಿಂದ ಸ್ವಚ್ಛತಾ ಅಭಿಯಾನ ಆರಂಭ

Update: 2017-10-25 22:16 IST

ಮಂಗಳೂರು, ಅ.25: ರಾಮಕೃಷ್ಣ ಮಿಶನ್‌ನ ವತಿಯಿಂದ ನಾಲ್ಕನೇ ಹಂತದ ಸ್ವಚ್ಛತಾ ಅಭಿಯಾನ ನ.3ರಿಂದ ಆರಂಭಗೊಳ್ಳಲಿದ್ದು, ನಾಲ್ಕು ಆಯಾಮಗಳಲ್ಲಿ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ರಾಮಕೃಷ್ಣ ಮಿಶನ್ ಕಾರ್ಯದರ್ಶಿ ಸ್ವಾಮಿ ಜಿತಕಾಮಾನಂದ ತಿಳಿಸಿದ್ದಾರೆ.

ರಾಮಕೃಷ್ಣ ಮಠದಲ್ಲಿ ಬುಧವಾರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ನ.3ರಿಂದ 5ರವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ವಿದ್ಯುಕ್ತವಾಗಿ 4ನೇ ಹಂತದ ಸ್ವಚ್ಛತಾ ಕಾರ್ಯ ಆರಂಭಗೊಳ್ಳಲಿದೆ. ‘ಸ್ವಚ್ಛ ಗ್ರಾಮ: ಸ್ವಚ್ಛ ದಕ್ಷಿಣ ಕನ್ನಡ’ ಕಾರ್ಯಕ್ರಮದಡಿ ಜಿಲ್ಲೆಯ ಸುಮಾರು ನೂರು ಗ್ರಾಮಗಳಲ್ಲಿ 1 ಸಾವಿರ ಸ್ವಚ್ಛತಾ ಕಾರ್ಯಕ್ರಮಗಳನ್ನು ಮಾಡುವ ಗುರಿ ಹೊಂದಲಾಗಿದ್ದು, ನ. 3ರಂದು ಬೆಳಗ್ಗೆ 10ಕ್ಕೆ ಚಾಲನೆಗೊಳ್ಳಲಿದೆ ಎಂದರು.

ಶಾಲಾ ವಿದ್ಯಾರ್ಥಿಗಳಲ್ಲಿ ಸ್ವಚ್ಛತೆ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ‘ಸ್ವಚ್ಛ ಮನಸ್ಸು’ ಹೆಸರಿನಲ್ಲಿ ಸುಮಾರು 100 ಶಾಲೆಗಳಲ್ಲಿ 500 ಕಾರ್ಯಕ್ರಮಗಳನ್ನು ಆಯೋಜಿಸುವ ಉದ್ದೇಶವಿದೆ. ಈ ಕಾರ್ಯಕ್ರಮಕ್ಕೆ ನ. 4ರಂದು ಬೆಳಗ್ಗೆ 9.30ಕ್ಕೆ ಚಾಲನೆ ದೊರೆಯಲಿದೆ ಎಂದು ಸ್ವಾಮಿ ಜಿತಕಾಮಾನಂದ ತಿತಿಳಿಸಿದರು.

ಕಸ ಹೆಕ್ಕುವ ಕಾರ್ಯದೊಂದಿಗೆ ಜಾಗೃತಿ ಕಾರ್ಯವೂ ನಡೆಯಬೇಕೆಂಬ ಹಿನ್ನೆಲೆಯಲ್ಲಿ ‘ಸ್ವಚ್ಛ ಮಂಗಳೂರು-ನಿತ್ಯ ಜಾಗೃತಿ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ನಗರದ ಸುಮಾರು 50 ಸಾವಿರ ಮನೆಗಳನ್ನು ಸಂಪರ್ಕಿಸುವ ಗುರಿ ಹೊಂದಲಾಗಿದೆ. ಈ ಅಭಿಯಾನ ಪ್ರತಿದಿನ ಸಂಜೆ 5ರಿಂದ 7 ಗಂಟೆಯವರೆಗೆ ನಡೆಯಲಿದ್ದು, ಇದಕ್ಕಾಗಿ ಆರು ತಂಡಗಳನ್ನು ಗುರುತಿಸಲಾಗಿದೆ. 5ರಂದು ಬೆಳಗ್ಗೆ 9 ಗಂಟೆಗೆ ಕಾಯಕ್ರಮಕ್ಕೆ ಚಾಲನೆ ನೀಡಲಾಗುವುದು. ಇದಲ್ಲದೇ ‘ಸ್ವಚ್ಛ ಭಾರತ-ಶ್ರಮದಾನ’ ಪ್ರತಿ ರವಿವಾರ ಬೆಳಗ್ಗೆ 7ರಿಂದ 10 ಗಂಟೆಯವರೆಗೆ ಸುಮಾರು 40 ವಾರಗಳ ಕಾಲ ನಡೆಯಲಿದೆ ಎಂದು ಸ್ವಾಮಿ ಜಿತಕಾಮಾನಂದ ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ಸ್ವಚ್ಛ ಮಂಗಳೂರು ಅಭಿಯಾನ ಸಂಚಾಲಕ ಸ್ವಾಮಿ ಏಕಗಮ್ಯಾನಂದ, ಮಠದ ಹಿತೈಷಿಗಳಾದ ಎಂ. ಆರ್. ವಾಸುದೇವ, ಉಮಾನಾಥ ಕೋಟೆಕಾರ್, ಜಿಪಂ ಉಪ ಕಾರ್ಯದರ್ಶಿ ಉಮೇಶ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News