ಪಾಕಿಸ್ತಾನ ತನ್ನ ನೆಲದ ಭಯೋತ್ಪಾದನೆ ನಿಗ್ರಹಿಸಲಿ: ರೆಕ್ಸ್ ಟಿಲ್ಲರ್‌ಸನ್

Update: 2017-10-25 17:14 GMT

ಹೊಸದಿಲ್ಲಿ, ಅ. 25: ಭಾರತ ಹಾಗೂ ಪಾಕಿಸ್ತಾನದ ನಡುವಿನ ರಾಜತಾಂತ್ರಿಕ ಸಂಬಂಧ ಮುಂದುವರಿಸಬೇಕಾದರೆ, ಪಾಕಿಸ್ತಾನ ತನ್ನ ನೆಲದ ಭಯೋತ್ಪಾದಕ ಸಂಘಟನೆಗಳಿಗೆ ಸುರಕ್ಷಿತ ಸ್ವರ್ಗವಾಗುವುದನ್ನು ತಡೆಯಬೇಕು ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ರೆಕ್ಸ್ ಟಿಲ್ಲರ್‌ಸನ್ ಹಾಗೂ ವಿದೇಶಾಂಗ ವ್ಯವಹಾರಗಳ ಸಚಿವೆ ಸುಶ್ಮಾ ಸ್ವರಾಜ್ ಪುನರುಚ್ಚರಿಸಿದ್ದಾರೆ.

ಆಗ್ನೇಯ ಏಶ್ಯಾದಲ್ಲಿ ಉಗ್ರರ ಚಟುವಟಿಕೆಗಳನ್ನು ನಿಯಂತ್ರಿಸುವ ಅಮೆರಿಕದ ನೂತನ ಕಾರ್ಯತಂತ್ರಗಳ ಬಗ್ಗೆ ಸುಶ್ಮಾ ಸ್ವರಾಜ್ ಹಾಗೂ ಟಿಲ್ಲರ್‌ಸನ್ ಚರ್ಚೆ ನಡೆಸಿದರು.

 ತಮ್ಮ ನೆಲದಲ್ಲಿ ಕಾರ್ಯಾಚರಿಸುತ್ತಿರುವ ಭಯೋತ್ಪಾದಕ ಗುಂಪುಗಳ ವಿರುದ್ಧ ನಿರ್ಣಾಯಕ ಕಾರ್ಯಾಚರಣೆ ನಡೆಸುವ ದೇಶಗಳೊಂದಿಗೆ ಕಾರ್ಯ ನಿರ್ವಹಿಸುವುದು ಟ್ರಂಪ್ ಆಡಳಿತದ ಉಗ್ರವಾದ ಅಸಹಿಷ್ಣುತೆಯ ನೂತನ ಕಾರ್ಯತಂತ್ರ ಎಂದು ಟಿಲ್ಲರ್‌ಸನ್ ಹಾಗೂ ಸ್ವರಾಜ್ ಒತ್ತಿ ಹೇಳಿದರು.

  ಭಯೋತ್ಪಾದನೆ ಕುರಿತು ಡೊನಾಲ್ಡ್ ಟ್ರಂಪ್ ಅವರ ಕಾರ್ಯತಂತ್ರವನ್ನು ನಾನು ಸ್ವಾಗತಿಸುತ್ತೇನೆ ಎಂದು ಹೇಳಿದ ಸುಶ್ಮಾ ಸ್ವರಾಜ್, ಅಫ್ಘಾನಿಸ್ತಾನದಲ್ಲಿ ಭಯೋತ್ಪಾದಕ ಚಟುವಟಿಕೆ ಹೆಚ್ಚುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದರು.

ಕ್ಷಿಪಣಿ ಪರೀಕ್ಷೆಯ ಕಾರಣಕ್ಕಾಗಿ ಕೊರಿಯಾವನ್ನು ಪ್ರತ್ಯೇಕವಾಗಿರಿಸುವ ಅಮೆರಿಕದ ಪ್ರಯತ್ನದ ಹೊರತಾಗಿಯೂ ಸಂವಹನವನ್ನು ಮುಕ್ತವಾಗಿರಿಸಲು ಉತ್ತರ ಕೊರಿಯಾದಲ್ಲಿ ರಾಜತಾಂತ್ರಿಕ ಉಪಸ್ಥಿತಿ ಅತ್ಯಗತ್ಯ ಎಂಬುದಾಗಿ ಭಾರತ ನಂಬಿದೆ ಎಂದು ಸುಶ್ಮಾ ಸ್ವರಾಜ್ ಹೇಳಿದರು.

ಆದಾಗ್ಯೂ, ಎರಡೂ ದೇಶಗಳ ನಡುವಿನ ವ್ಯಾಪಾರ ಗಮನಾರ್ಹವಾಗಿ ಇಳಿಕೆಯಾಗಿದೆ ಹಾಗೂ ರಾಯಭಾರಿ ಕಚೇರಿಯಲ್ಲಿ ಕೆಲವೇ ಸಿಬ್ಬಂದಿಯಿದ್ದಾರೆ ಎಂದು ಅವರು ತಿಳಿಸಿದರು.

     ಚಬಾಹರ್ ಬಂದರಿನ ಬಗ್ಗೆ ಮಾತನಾಡಿದ ಟಿಲ್ಲರ್‌ಸನ್, ನಮ್ಮ (ಅಮೆರಿಕದ)ಉದ್ದೇಶಗಳು ಇರಾನ್ ಜನರಿಗೆ ಹಾನಿ ಉಂಟು ಮಾಡುವುದಿಲ್ಲ. ನಾವು ಇರಾನ್‌ನ ವ್ಯವಹಾರ ಚಟುವಟಿಕೆಯ ನ್ಯಾಯಬದ್ಧತೆ ಮಧ್ಯೆ ಪ್ರವೇಶಿಸುವುದಿಲ್ಲ. ಇರಾನ್‌ನ ಕ್ರಾಂತಿಕಾರಿ ಸಂಘಟನೆಗಳು ಹಾಗೂ ಅದರ ಅಂಗಸಂಸ್ಥೆಗಳ ಚಟುವಟಿಕೆಗಳ ಬಗ್ಗೆ ಅಮೆರಿಕಕ್ಕೆ ಆತಂಕ ಇದೆ ಹಾಗೂ ಅಂತಹ ಸಂಘಟನೆಗಳ ಮೇಲೆ ನಿರ್ಬಂಧ ಹೇರಬೇಕು ಎಂದರು.

ಇರಾಕ್, ಕತರ್, ಸೌದಿ ಅರೇಬಿಯಾ ಹಾಗೂ ಪಾಕಿಸ್ತಾನಕ್ಕೆ ಭೇಟಿ ನೀಡಿದ ಬಳಿಕ ಟಿಲ್ಲರ್‌ಸನ್ ಭಾರತಕ್ಕೆ ಆಗಮಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News