ನಾಡ್ಪಾಲು: ವಿಷವಿಕ್ಕಿ ಮಂಗಗಳ ಮಾರಣಹೋಮ

Update: 2017-10-27 09:11 GMT

ಹೆಬ್ರಿ, ಅ.27: ವಿಷವುಣಿಸಿ ಇಪ್ಪತ್ತಕ್ಕೂ ಅಧಿಕ ಮಂಗಗಳನ್ನು ಕೊಂದ ಅಮಾನವೀಯ ಘಟನೆ ಸೀತಾನದಿ ನಾಡ್ಪಾಲು ಸೋಮೇಶ್ವರ ಅಭಯಾರಣ್ಯ ವ್ಯಾಪ್ತಿಯ ಆಗುಂಬೆ ಘಾಟಿ ಎರಡನೆ ಸುತ್ತಿನಲ್ಲಿ ಗುರುವಾರ ರಾತ್ರಿ ನಡೆದಿದೆ.

ನಿನ್ನೆ ರಾತ್ರಿ ಒಂಬತ್ತು ಗಂಟೆ ಸುಮಾರಿಗೆ ಆಗುಂಬೆ ಘಾಟಿ ರಸ್ತೆ ಬದಿಯಲ್ಲಿ ಇಪ್ಪತ್ತಕ್ಕೂ ಅಧಿಕ ಕಾಡು ಮಂಗಗಳು ಜೀವನ್ಮರಣ ಸ್ಥಿತಿಯಲ್ಲಿ ಪತ್ತೆಯಾಗಿದ್ದವು. ಇದನ್ನು ಗಮನಿಸಿದ ಸ್ಥಳೀಯ ಯುವಕರ ತಂಡ ಹಾಗೂ ಕೆಲವು ಪ್ರಯಾಣಿಕರು ಮಂಗಗಳಿಗೆ ನೀರು ಕುಡಿಸಿ ಬದುಕಿಸಲು ಬಹಳ ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ.

ಮಂಗಗಳು ಆಹಾರವನ್ನು ಹುಡುಕಿಕೊಂಡು ನಾಡಿಗೆ ಬಂದಾಗ ಅವುಗಳಿಗೆ ಆಹಾರದಲ್ಲಿ ವಿಷ ಉಣಿಸಿ ಗಂಭೀರ ಸ್ಥಿತಿಯಲ್ಲಿದ್ದ ಅವುಗಳನ್ನು ಘಾಟಿ ಪ್ರದೇಶದಲ್ಲಿ ತಂದು ಎಸೆದು ಹೋಗಿರುವುದಾಗಿ ಶಂಕಿಸಲಾಗಿದೆ. ನಂತರ ಘಟನಾ ಸ್ಥಳಕ್ಕೆ ಹೆಬ್ರಿ ವಲಯ ವನ್ಯಜೀವಿ ಇಲಾಖೆಯ ಸಿಬ್ಬಂದಿ ಆಗಮಿಸಿ ಮಂಗಗಳ ವಿಲೇವಾರಿ ಮಾಡಿದರು.

ಇತ್ತೀಚೆಗೆ  ಹೆಬ್ರಿ ಬಳಿಯ ಕಬ್ಬಿನಾಲೆ ಎಂಬಲ್ಲಿ ಇದೇ ರೀತಿ ಯಾರೋ ಕಿಡಿಗೇಡಿಗಳು ಮಂಗಗಳಿಗೆ ವಿಷ ಉಣಿಸಿ ರಸ್ತೆ ಬದಿಯಲ್ಲಿ ಹಾಕಿದ ಘಟನೆ ನಡೆದಿತ್ತು. ಈ ಹೇಯ ಕೃತ್ಯ ಎಸಗಿರುವ ದುಷ್ಕರ್ಮಿಗಳಿಗೆ ಕಠಿಣ ಶಿಕ್ಷೆಯಾಗಬೇಕು, ಅರಣ್ಯ ಇಲಾಖೆಯವರು ಈ ಬಗ್ಗೆ ಗಮನ ಹರಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News