ಸಫ್ವಾನ್ ಪತ್ತೆಗೆ ಒತ್ತಾಯಿಸಿ ಕಾಟಿಪಳ್ಳದಿಂದ ಸುರತ್ಕಲ್ ಠಾಣೆಗೆ ಪಾದಯಾತ್ರೆ

Update: 2017-10-27 15:48 GMT

ಮಂಗಳೂರು, ಅ. 27: ರೌಡಿ ತಂಡದಿಂದ ಕಾಟಿಪಳ್ಳದಲ್ಲಿ ಅಪಹರಣಕ್ಕೊಳಗಾದ ಸಫ್ವಾನ್ ಪತ್ತೆ ಹಚ್ಚಲು ಪೊಲೀಸ್ ಇಲಾಖೆ ವಿಫಲವಾಗಿದೆ ಎಂದು ಆರೋಪಿಸಿ ಡಿವೈಎಫ್‌ಐ ಸುರತ್ಕಲ್ ಘಟಕದ ವತಿಯಿಂದ ಕಾಟಿಪಳ್ಳದಿಂದ ಸುರತ್ಕಲ್ ಠಾಣೆಯವರಗೆ ಪಾದಯಾತ್ರೆ ನಡೆಯಿತು.

 ಸುರತ್ಕಲ್ ಠಾಣೆಯ ಮುಂಭಾಗ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಅವರು, ಸಫ್ವಾನ್ ಅಪಹರಣಗೊಂಡು ಮೂರು ವಾರ ಕಳೆದರೂ ಪತ್ತೆ ಹಚ್ಚಲು ಸಾಧ್ಯವಾಗದಿರುವುದು ಪೊಲೀಸರ ಮೇಲಿನ ನಂಬಿಕೆ ಕುಸಿಯುವಂತೆ ಮಾಡಿದೆ. ಕ್ರಿಮಿನಲ್ ಚಟುವಟಿಕೆಯಲ್ಲಿ ಕುಖ್ಯಾತವಾದ ರೌಡಿ ತಂಡವೊಂದು ಈ ಕೃತ್ಯವನ್ನು ಸಾರ್ವಜನಿಕರ ಮುಂದೆಯೇ ಮಾಡಿದ್ದರೂ ಅಪಹರಣಕಾರರ ಬಂಧನ ಸಾಧ್ಯವಾಗದಿರುವುದು ಸಾರ್ವಜನಿಕರಲ್ಲಿ ಅತಂಕ ಮೂಡಿಸಿದೆ ಎಂದರು.

ಸ್ಥಳೀಯವಾಗಿ ಗಾಂಜಾ ಸಹಿತ ಮಾದಕ ದ್ರವ್ಯ ಜಾಲ ಸಕ್ರಿಯವಾಗಿದ್ದು ಇವು ಹದಿಹರೆಯದ ಯುವಕರನ್ನು ತಮ್ಮ ಜಾಲಕ್ಕೆ ಬೀಳಿಸುತ್ತಿವೆ. ಈ ಜಾಲದ ಬಲೆಗೆ ಬಿದ್ದ ಯುವ ಜನರು ರೌಡಿಸಂ ಆಕರ್ಷಣೆಗೆ ಒಳಗಾಗಿ ಸಮಾಜ ಘಾತುಕರಾಗಿ ಪರಿವರ್ತನೆಗೊಳ್ಳುತ್ತಿದ್ದಾರೆ. ಪೊಲೀಸ್ ಇಲಾಖೆ ಇನ್ನಾದರು ಎಚ್ಚೆತ್ತು ಇಂತಹ ಕ್ರಿಮಿನಲ್ ಕೂಟಗಳನ್ನು ನಿಗ್ರಹಿಸಬೇಕು. ಸಫ್ವಾನ್‌ನನ್ನು ಪತ್ತೆ ಹಚ್ಚಲು ಪೊಲೀಸರು ವಿಫಲರಾದರೆ ಹೋರಾಟದ ಮುಂದಿನ ಹಂತವಾಗಿ ಸುರತ್ಕಲ್ನಲ್ಲಿ ಅನಿರ್ಧಿಷ್ಟ ಧರಣಿ ನಡೆಸುವುದಾಗಿ ಎಚ್ಚರಿಸಿದರು

ಸುರಿಯುತ್ತಿದ್ದ ಮಳೆಯ ನಡುವೆಯೂ ಪಾದಯಾತ್ರೆ ನಡೆಯಿತು. ಪಾದಯಾತ್ರೆಯಲ್ಲಿ ಡಿವೈಎಫ್‌ಐ ಜಿಲ್ಲಾಧ್ಯಕ್ಷ ಬಿ ಕೆ.ಇಮ್ತಿಯಾಝ್, ಮುಖಂಡರಾದ ಶ್ರೀನಾಥ್ ಕುಲಾಲ್, ಮಕ್ಸೂದ್, ಅಜ್ಮಲ್ ಅಹ್ಮದ್, ಸಲೀಂ ಶ್ಯಾಡೋ, ನೌಷದ್ ಬೆಂಗರೆ, ಸಿರಾಜ್ ಕಾಟಿಪಳ್ಳ, ಆಶಾ ಬೋಳೂರು, ಮುಸ್ಬಾ, ಅಬೂಸಾಲಿ ಕೃಷ್ಣಾಪುರ, ಮತ್ತಿತರರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News