ಬಿಲ್ ಗೇಟ್ಸ್ ರನ್ನು ಹಿಂದಿಕ್ಕಿ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದು ಯಾರು ಗೊತ್ತೇ?

Update: 2017-10-28 04:12 GMT

ಹೊಸದಿಲ್ಲಿ, ಅ.27: ವಿಶ್ವದ ಅತಿದೊಡ್ಡ ಆನ್‌ಲೈನ್ ರಿಟೈಲರ್ ಅಮೆಝಾನ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜೆಫ್ ಬೆಝೋಸ್ ಮತ್ತೆ ಮೈಕ್ರೊಸಾಫ್ಟ್ ಸಹಸಂಸ್ಥಾಪಕ ಬಿಲ್ ಗೇಟ್ಸ್ ಅವರನ್ನು ಹಿಂದಿಕ್ಕಿ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಫೋರ್ಬ್ಸ್ ನಿಯತಕಾಲಿಕದ ಪ್ರಕಾರ, ಅಮೆಜಾನ್ ದಾಸ್ತಾನಿನಲ್ಲಿ ಶೇಕಡ 2ರಷ್ಟು ಹೆಚ್ಚಳ ಉಂಟಾಗಿದ್ದು, 900 ದಶಲಕ್ಷ ಡಾಲರ್ ಸಂಪತ್ತು ಬೆಝೋಸ್ ಅವರಿಗೆ ಸೇರಿದೆ. ಇದರಿಂದಾಗಿ ಅವರ ಸಂಪತ್ತಿನ ಒಟ್ಟು ಮೌಲ್ಯ 90.6 ಶತಕೋಟಿ ಡಾಲರ್ ತಲುಪಿದಂತಾಗಿದೆ. ಬಿಲ್ ಗೇಟ್ಸ್ ಅವರ ನಿವ್ವಳ ಸಂಪತ್ತು 90.1 ಶತಕೋಟಿ ಡಾಲರ್ ಆಗಿದ್ದು, ಜೆಫ್‌ಗಿಂತ ಸ್ವಲ್ಪ ಹಿಂದಿದ್ದಾರೆ.

ಬೆಝೋಸ್, ಗೇಟ್ಸ್ ಅವರನ್ನು ಹಿಂದಿಕ್ಕಿರುವುದು ಇದೇ ಮೊದಲಲ್ಲ. ಕಳೆದ ಜುಲೈನಲ್ಲಿ, ಅಮೆಝಾನ್ ಷೇರುಗಳ ಬೆಲೆ ಮುಗಿಲು ಮುಟ್ಟಿದ್ದಾಗ, ಬೆಝೋಸ್ ಅವರ ನಿವ್ವಳ ಸಂಪತ್ತು 90.9 ಶತಕೋಟಿ ಡಾಲರ್ ತಲುಪಿತ್ತು. ಆಗ ಬಿಲ್ ಗೇಟ್ಸ್ ಅವರ ನಿವ್ವಳ ಸಂಪತ್ತು 90.7 ಆಗಿತ್ತು.

ಆರು ತಿಂಗಳ ಹಿಂದೆ ಬೆಝೋಸ್, ಅಮೆನ್ಸಿಯೊ ಒರ್ಟೆಗಾ ಹಾಗೂ ವಾರೆನ್ ಬಫೆಟ್ ಅವರನ್ನು ಹಿಂದಿಕ್ಕಿ ವಿಶ್ವದ ಎರಡನೇ ಶ್ರೀಮಂತ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಮಧ್ಯಪ್ರಾಚ್ಯದ ಅತಿದೊಡ್ಡ ಆನ್‌ಲೈನ್ ಚಿಲ್ಲರೆ ಮಾರಾಟ ಕಂಪನಿ ಸ್ಕೂಬ್.ಕಾಮ್ ಖರೀದಿಯನ್ನು ಅಮಝಾನ್ ಘೋಷಿಸಿದ ಬೆನ್ನಲ್ಲೆ ಅಮೆಝಾನ್ ಮೌಲ್ಯ ಮತ್ತಷ್ಟು ಹೆಚ್ಚಿದೆ. ಬೆಝೋಸ್ ಅವರ ಆದಾಯಕ್ಕೆ ಈ ವರ್ಷವೇ 10.2 ಶತಕೋಟಿ ಡಾಲರ್ ಸೇರ್ಪಡೆಯಾಗಿದೆ. ಬೆಝೋಸ್ ಮೊಟ್ಟಮೊದಲ ಬಾರಿಗೆ 1998ರಲ್ಲಿ ಜಗತ್ತಿನ 400 ಶ್ರೀಮಂತ ಉದ್ಯಮಿಗಳ ಪಟ್ಟಿಗೆ ಸೇರ್ಪಡೆಯಾಗಿದ್ದರು. ಆಗ ಬೆಝೋಸ್ ಸಂಪತ್ತು 1.6 ಶತಕೋಟಿ ಡಾಲರ್ ಆಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News