ವಿನಾಯಕ ಬಾಳಿಗಾ ಹಂತಕರು ನನ್ನ ಕೊಲೆಗೂ ಯತ್ನಿಸಿದ್ದರು: ರಾಘವೇಂದ್ರ ತೀರ್ಥ ಸ್ವಾಮೀಜಿ
ಮಂಗಳೂರು, ಅ. 27: ವಿನಾಯಕ ಬಾಳಿಗ ಅವರ ಕೊಲೆಯನ್ನು ಯಾರು ಮಾಡಿದ್ದಾರೋ ಅವರೇ ನನ್ನ ಕೊಲೆಗೂ ಯತ್ನಸಿದ್ದರು ಎಂದು ಕಾಶಿ ಮಠದ ಹಿರಿಯ ಶಿಷ್ಯ ಸ್ವಾಮೀಜಿ (ಉಚ್ಛಾಟಿತ) ರಾಘವೇಂದ್ರ ತೀರ್ಥರು ಹೇಳಿದ್ದಾರೆ.
ಕಳೆದ ವರ್ಷ ಮಾರ್ಚ್‌ನಲ್ಲಿ ಕೊಲೆಗೀಡಾದ ಮಂಗಳೂರಿನ ಆರ್‌ಟಿಐ ಕಾರ್ಯಕರ್ತ ವಿನಾಯಕ ಬಾಳಿಗ ಅವರ ಮನೆಗೆ ಶುಕ್ರವಾರ ರಾತ್ರಿ ಭೇಟಿ ನೀಡಿದ ಅವರು ಮನೆ ಮಂದಿಗೆ ಸಾಂತ್ವನ ಹೇಳಿ ಮಾತನಾಡಿದರು.
ನಾನು ಪೂನಾದಲ್ಲಿ ಕಾರಿನಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ ಲಾರಿ ಢಿಕ್ಕಿ ಹೊಡೆಸಿ ನನ್ನ ಕೊಲೆಗೆ ಯತ್ನಿಸಲಾಗಿತ್ತು. ಮತ್ತೊಮ್ಮೆ ಎರ್ನಾಕುಲಂನಲ್ಲಿ ಮೌನವೃತದಲ್ಲಿದ್ದಾಗ ಇಬ್ಬರು ರಿವಾಲ್ವರ್ ಹಿಡಿದುಕೊಂಡು ಬಂದಿದ್ದರು. ಮೌನವೃತದಲ್ಲಿದ್ದಾಗ ನಾನು ಮಂಚದ ಮೇಲೆ ಮಲಗುತ್ತಿರಲಿಲ್ಲ. ಬಂದವರಿಬ್ಬರೂ ನನ್ನನ್ನು ಕಾಣದೆ ಹಿಂತಿರುಗಿದ್ದರು ಎಂದು ಸ್ವಾಮೀಜಿ ಹೇಳಿದರು.
ಟ್ರಸ್ಟ್‌ಗೆ ಮೂಲಧನ
ಬಾಳಿಗಾ ಕೊಲೆಯ ಕಾನೂನು ಹೋರಾಟ ನಡೆಸಲು ಧನ ಸಂಗ್ರಹಕ್ಕಾಗಿ ಅವರ ಹೆಸರಿನಲ್ಲೇ ಚಾರಿಟೇಬಲ್ ಟ್ರಸ್ಟ್‌ವೊಂದನ್ನು ಆರಂಭಿಸಬೇಕು. ಅದಕ್ಕೆ ಮೂಲಧನವನ್ನು ನಾನು ನೀಡುತ್ತೇನೆ. ಅವರಿಗೆ ನ್ಯಾಯ ದೊರೆಯಲೇಬೇಕು. ಇದರಿಂದ ಹಿಂಜರಿಯುವ ಪ್ರಶ್ನೆ ಇಲ್ಲ ಎಂದರು.
ವಿನಾಯಕ ಬಾಳಿಗ ಅವರ ತಂದೆ ರಾಮಚಂದ್ರ ಬಾಳಿಗ, ಬಾಳಿಗ ಸಹೋದರಿಯರು, ಪ್ರಮುಖರಾದ ದತ್ತಾತ್ರೇಯ ಭಟ್, ವಾಮನ ಪೈ ಮತ್ತಿತರರು ಉಪಸ್ಥಿತರಿದ್ದರು.