ಕರಾವಳಿ ಉತ್ಸವದ ಪ್ರಮುಖ ಕಾರ್ಯಕ್ರಮಗಳು ಕರಾವಳಿ ಮೈದಾನದಲ್ಲಿ : ಜಿಲ್ಲಾಡಳಿತ ನಿರ್ಧಾರ
ಮಂಗಳೂರು, ಅ. 27: ಈ ಬಾರಿ ಡಿ.22ರಿಂದ 30ರವರೆಗೆ ನಡೆಯುವ ಕರಾವಳಿ ಉತ್ಸವದ ಎಲ್ಲ ಪ್ರಧಾನ ಕಾರ್ಯಕ್ರಮಗಳನ್ನು ಕರಾವಳಿ ಉತ್ಸವ ಮೈದಾನದಲ್ಲೇ ನಡೆಸಲು ಜಿಲ್ಲಾಡಳಿತ ನಿರ್ಧರಿಸಿದೆ.
ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅಧ್ಯಕ್ಷತೆಯಲ್ಲಿ ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಉನ್ನತಮಟ್ಟದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು.
ಕರಾವಳಿ ಉತ್ಸವ ಮೈದಾನದಿಂದ ಕದ್ರಿ ಉದ್ಯಾನಕ್ಕೆ ಮೆರವಣಿಗೆ ನಡೆಸುವ ಬದಲಿಗೆ ನೆಹರೂ ಮೈದಾನದಿಂದ ಕರಾವಳಿ ಉತ್ಸವ ಮೈದಾನದವರೆಗೆ ಮೆರವಣಿಗೆ ನಡೆಸುವಂತೆ ಸಭೆಯಲ್ಲಿದ್ದವರು ಒತ್ತಾಯಿಸಿದರು. ಅಲ್ಲದೆ, ಉತ್ಸವದ ಪ್ರಮುಖ ಕಾರ್ಯಕ್ರಮಗಳನ್ನು ಮೈದಾನದಲ್ಲೇ ಮಾಡುವಂತೆ ಶಾಸಕ ಜೆ.ಆರ್.ಲೋಬೊ ಸಲಹೆ ನೀಡಿದರು. ಈ ಬಗ್ಗೆ ಸುದೀರ್ಘ ಚರ್ಚೆ ನಡೆದ ಬಳಿಕ, ಪ್ರಧಾನ ಕಾರ್ಯಕ್ರಮಗಳನ್ನು ಮೈದಾನದಲ್ಲೇ ನಡೆಸುವುದಾಗಿ ಸಚಿವರು ಪ್ರಕಟಿಸಿದರು. ನೆಹರೂ ಮೈದಾನದಿಂದ ಕರಾವಳಿ ಮೈದಾನಕ್ಕೆ ಮೆರವಣಿಗೆ ನಡೆಸುವುದಾಗಿ ತಿಳಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮ, ಮೆರವಣಿಗೆ ಸೇರಿದಂತೆ ವಿವಿಧ ಕಾರ್ಯಕ್ರಮಗಳಿಗೆ ಹೆಚ್ಚಿನ ಹಣದ ಅಗತ್ಯ ಇದೆ ಎಂದು ಬೀಚ್ ಉತ್ಸವ ಸಮಿತಿ ಅಧ್ಯಕ್ಷ ಯತೀಶ್ ಬೈಕಂಪಾಡಿ, ಸಾಂಸ್ಕೃತಿಕ ಕಾರ್ಯಕ್ರಮ ಉಪ ಸಮಿತಿ ಅಧ್ಯಕ್ಷ ನರೇಂದ್ರ ನಾಯಕ್ ಸೇರಿದಂತೆ ಕೆಲವರು ಬೇಡಿಕೆಯನ್ನು ಸಭೆಯ ಮುಂದಿಟ್ಟರು.
ಹೆಚ್ಚುವರಿ ಜಿಲ್ಲಾಧಿಕಾರಿ ಕುಮಾರ್ ಮಾತನಾಡಿ, ಪ್ರಸಕ್ತ ವರ್ಷ ಕನ್ನಡ ಮತುತಿ ಸಂಸ್ಕೃತಿ ಇಲಾಖೆ 30 ಲಕ್ಷ ರೂ. ಬಿಡುಗಡೆ ಮಾಡಿದೆ. ವಸ್ತು ಪ್ರದರ್ಶನ ಮೈದಾನದ ಬಾಡಿಗೆ ರೂಪದಲ್ಲಿ 26 ಲಕ್ಷ ರೂ. ಸಂಗ್ರಹವಾಗಲಿದೆ. ಲಭ್ಯವಿರುವ ಅನುದಾನದ ಮಿತಿಯೊಳಗೆ ಕಾರ್ಯಕ್ರಮ ನಡೆಸಬೇಕಾಗಿದೆ ಎಂದರು.
ಕರಾವಳಿ ಉತ್ಸವಕ್ಕೆ ರಾಜ್ಯ ಸರಕಾರದಿಂದ ಹೆಚ್ಚಿನ ಅನುದಾನ ತರಲು ಪ್ರಯತ್ನಿಸುವುದಾಗಿಯೂ ಭರವಸೆ ನೀಡಿದರು.
ಪುತ್ತೂರು ಶಾಸಕಿ ಶಕುಂತಳಾ ಶೆಟ್ಟಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಡಾ.ಎಂ.ಆರ್.ರವಿ, ಮಂಗಳೂರು ಉಪ ವಿಭಾಗಾಧಿಕಾರಿ ರೇಣುಕಾಪ್ರಸಾದ್, ಪುತ್ತೂರು ಉಪ ವಿಭಾಗಾಧಿಕಾರಿ ಡಾ.ರಘುನಂದನ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರದೀಪ್‌ಕುಮಾರ್ ಕಲ್ಕೂರ ಸಭೆಯಲ್ಲಿದ್ದರು.