ಕಳವು ಪ್ರಕರಣ : ಆರೋಪಿಗಳ ಬಂಧನ
ಮಂಗಳೂರು, ಅ. 27: ನಗರದ ಅತ್ತಾವರ ಅಯ್ಯಪ್ಪ ಗುಡಿಯ ಎದುರು ಮೈದಾನದಲ್ಲಿ ನಿಲ್ಲಿಸಿದ್ದ ಲಾರಿ ಹಾಗೂ ಜೆಸಿಬಿಗಳ ಒಟ್ಟು 6 ಬ್ಯಾಟರಿಗಳನ್ನು ಕಳವು ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಪಾಂಡೇಶ್ವರ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಇರಾ ಗ್ರಾಮದ ಕುಕ್ಕಾಜೆಬೈಲು ನಿವಾಸಿಗಳಾದ ಮುಹಮ್ಮದ್ ಆಸಿಫ್ ಯಾನೆ ಆಸಿಫ್ (24), ಬೆಂಜನಪದವು ಅಬ್ಬೆಟ್ಟು ಕ್ರಾಸ್ ನಿವಾಸಿ ಹಬೀಬ್ ರಹ್ಮಾನ್ ಯಾನೆ ಹಬೀಬ್ (36) ಎಂದು ಗುರುತಿಸಲಾಗಿದೆ.
ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ದಾಖಲಾದ 3 ಪ್ರಕರಣಕ್ಕೆ ಸಂಬಂಧಿಸಿ ಒಟ್ಟು 12 ಬ್ಯಾಟರಿ ಹಾಗೂ ಒಂದು ದ್ವಿಚಕ್ರ ವಾಹನ, ಪುತ್ತೂರು ನಗರ ಠಾಣೆಯಲ್ಲಿ ದಾಖಲಾದ ಬ್ಯಾಟರಿ ಕಳವು ಪ್ರಕರಣಕ್ಕೆ ಸಂಬಂಧಿಸಿ 2 ಬ್ಯಾಟರಿ ಹಾಗೂ ಒಂದು ದ್ವಿಚಕ್ರ ವಾಹನ, ಪುತ್ತೂರು ನಗರ ಠಾಣೆಯಲ್ಲಿ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿ 2 ಬ್ಯಾಟರಿ ಹಾಗೂ ಕಾವೂರು ಠಾಣೆಯಲ್ಲಿ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿ 6 ಬ್ಯಾಟರಿ, ಕದ್ರಿ ಠಾಣೆಯಲ್ಲಿ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿ ದ್ವಿಚಕ್ರ ವಾಹನ ಸೇರಿದಂತೆ ಒಟ್ಟು 6 ಕಳವು ಪ್ರಕರಣಕ್ಕೆ ಸಂಬಂಧಿಸಿ 3.20 ಲಕ್ಷ ರೂ.ವೌಲ್ಯದ 20 ಬ್ಯಾಟರಿ ಹಾಗೂ 2 ದ್ವಿಚಕ್ರ ವಾಹನ ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳ ಪೈಕಿ ಮುಹಮ್ಮದ್ ಆಸೀಫ್ ಹಳೇ ಆರೋಪಿಯಾಗಿದ್ದು, ಈತನ ಮೇಲೆ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ, ಪೂರ್ವ ಪೊಲೀಸ್ ಠಾಣೆಯಲ್ಲಿ ಹಾಗೂ ಉತ್ತರ ಪೊಲೀಸ್ ಠಾಣೆಯಲ್ಲಿ ಒಟ್ಟು 6 ಕಳವು ಪ್ರಕರಣಗಳು ದಾಖಲಾಗಿವೆ. ಉತ್ತರ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದು, ನ್ಯಾಯಾಲಯ ಈತನ ವಿರುದ್ದ ಜಾಮೀನು ರಹಿತ ವಾರೆಂಟ್ ಹೊರಡಿಸಿತ್ತು. ಹಬೀಬ್ ರಹ್ಮಾನ್ ವಿರುದ್ಧ 3 ಕಳವು ಪ್ರಕರಣ ದಾಖಲಾಗಿತ್ತು.
ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಬೆಳ್ಳಿಯಪ್ಪ ಕೆ.ಯು. ನೇತೃತ್ವದಲ್ಲಿ ಪಿಎಸ್‌ಐಗಳು ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.