×
Ad

ಧರ್ಮದ ಅರಿವಿನ ಕೊರತೆಯಿಂದ ಧರ್ಮಾಂಧತೆ: ಡಾ.ಎಂ.ಅಣ್ಣಯ್ಯ ಕುಲಾಲ್

Update: 2017-10-27 23:52 IST

ಮಂಗಳೂರು, ಅ. 27: ಜನರಿಗೆ ಧರ್ಮದ ಬಗ್ಗೆ ಇರುವ ಅರಿವಿನ ಕೊರತೆಯೇ ಧರ್ಮಾಂಧತೆಗೆ ಕಾರಣವಾಗಿದೆ. ಆದ್ದರಿಂದ ಧರ್ಮವನ್ನು ಸಂಪೂರ್ಣವಾಗಿ ಅರ್ಥೈಸಿಕೊಳ್ಳುವುದು ಅಗತ್ಯವಾಗಿದೆ ಎಂದು ನಗರದ ಶ್ರೀನಿವಾಸ್ ಗ್ರೂಪ್ ಕಾಲೇಜಿನ ಮುಖ್ಯ ವೈದ್ಯಾಧಿಕಾರಿ ಹಾಗೂ ಪ್ರಾಚಾರ್ಯ ಡಾ.ಎಂ. ಅಣ್ಣಯ್ಯ ಕುಲಾಲ್ ಉಳ್ತೂರ್ ಹೇಳಿದ್ದಾರೆ.

ಅವರು ಯುನಿವೆಫ್ ಕರ್ನಾಟಕ ವತಿಯಿಂದ ನಗರದ ಶಾಂತಿ ನಿಲಯದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾದ ‘ಧರ್ಮಾಚರಣೆಯಲ್ಲಿ ಧರ್ಮಾಂಧತೆ’ ವಿಷಯದ ಕುರಿತ ಚಾವಡಿ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದರು.

ಸ್ವಂತಕ್ಕಾಗಿ ಬದುಕುವುದು ಕರ್ಮವಾದರೆ, ಇತರರಿಗೆ ಬದುಕುವುದು ಧರ್ಮವಾಗಿದೆ. ತಮ್ಮ ತಮ್ಮ ಧರ್ಮವನ್ನು ಗೌರವಿಸುವುದರಿಂದ ಇತರ ಧರ್ಮಗಳ ಮೇಲೂ ಗೌರವ ಮತ್ತು ಪ್ರೀತಿಯಲ್ಲಿ ಬೆಳೆಸಿಕೊಳ್ಳಬೇಕು. ಇದರಿಂದ ಸೌಹಾರ್ದ ಸಮಾಜ ನಿರ್ಮಾಣ ಸಾಧ್ಯ ಎಂದರು.

ಸಾಮಾಜಿಕ ನೋವು-ನಲಿವುಗಳನ್ನು ನಾನು ಹತ್ತಿರದಿಂದ ಕಂಡವನು. ಜನರಿಗೆ ನೋವುಗಳಿಗೆ ಸ್ಪಂದಿಸುತ್ತಾ, ಅವರ ಕಷ್ಟಗಳಿಗೆ ನೆರವಾಗುವ ಮೂಲಕ ಮಾನವೀಯತೆ ಮೆರೆಯುವುದೇ ಧರ್ಮವಾಗಿದೆ. ಪ್ರಸ್ತುತ ಸನ್ನಿವೇಶದಲ್ಲಿ ಮಂಗಳೂರು ಎಂದರೆ ಹೊರಗಿನವರಿಗೆ ಭಯ ಉಂಟಾಗುತ್ತಿದೆ. ಪದೇ ಪದೇ ಸಂಭವಿಸುತ್ತಿರುವ ಕೋಮು ಸಂಘರ್ಷಗಳು ಮಂಗಳೂರಿಗೆ ಕಪ್ಪು ಚುಕ್ಕೆಯಾಗಿ ಪರಿಣಮಿಸಿದೆ. ನಾನೋರ್ವ ಪ್ರಾಚಾರ್ಯ ಆಗಿರುವುದರಿಂದ ಹೊರಗಿನ ಜಿಲ್ಲೆಯ ಮಕ್ಕಳ ಹೆತ್ತವರು ‘‘ತನ್ನ ಮಕ್ಕಳನ್ನು ಮಂಗಳೂರಿನ ಶಾಲಾ ಕಾಲೇಜುಗಳಿಗೆ ಸೇರಿಸಬಹುದೇ’ಎಂದು ಭೀತಿಯಿ ಕೇಳುವ ಪರಿಸ್ಥಿತಿ ಉಂಟಾಗಿದೆ. ಇಂತಹ ವಾತಾವರಣ ಬದಲಾಗಬೇಕು ಎಂದರು.

ಜಾತಿಗಳ ನಡುವಿನ ಗೋಡೆ ಮುರಿಯೋಣ

ಎಲ್ಲ ಧರ್ಮ ಗ್ರಂಥಗಳೂ ಜನರ ಒಳಿತು ಸಹಿತ ಸಾಮಾಜಿ ಶಾಂತಿಯನ್ನೇ ಬಯುತ್ತದೆ. ಆದ್ದರಿಂದ ಹಿಂದೂ, ಮುಸ್ಲಿಂ ಮತ್ತು ಕ್ರೈಸ್ತ ನಡುವಿನ ಗೋಡೆಯನ್ನು ಮುರಿದು, ಎಲ್ಲ ವರ್ಗದವರೂ ಐಕ್ಯತೆಯೊಂದಿಗೆ ಜೀವಿಸುವ ಸಮಾಜ ನಿರ್ಮಿಸೋಣ ಎಂದು ಜೆಪ್ಪು ಕರುಣಾಮಯ ಟ್ರಸ್ಟ್‌ನ ಅಧ್ಯಕ್ಷ ಎಲಿಯಾಸ್ ಕುವೆಲ್ಲೊ ಕರೆ ನೀಡಿದರು.

‘ವಾರ್ತಾಭಾರತಿ’ ಪ್ರಧಾನ ಸಂಪಾದಕ ಅಬ್ದುಸ್ಸಲಾಂ ಪುತ್ತಿಗೆ ಮಾತನಾಡಿ, ಸಾಮಾಜಿಕ ಸಮಸ್ಯೆಯನ್ನು ಗುರುತಿಸಿ ಅದಕ್ಕೆ ಪರಿಹಾರ ಕಂಡುಕೊಳ್ಳುವುದು ಧರ್ಮವಾಗಿದೆ. ಸಂಕಷ್ಟದಲ್ಲಿರುವವನಿಗೆ ನೆರವು, ನೋವಿಗೆ ಸಂಪಾದನೆ, ದಾರಿದ್ರ, ಹಸಿವು ಹೋಗಲಾಡಿಸುವ ಜವಾಬ್ದಾರಿಯಾಗಬೇಕು. ಸಾಮಾಜಿಕ ಅಗತ್ಯಗಳನ್ನು ಗುರುತಿಸುವಲ್ಲಿ ನಮ್ಮನ್ನು ತಡೆಯುವುದಿದ್ದರೆ ಅದನ್ನು ಧರ್ಮ ಎಂದು ಸ್ವೀಕರಿಸಲು ಸಾಧ್ಯವಿಲ್ಲ ಎಂದರು.

ಜೆಸಿಐ ಇಂಡಿಯಾದ ರಾಷ್ಟ್ರೀಯ ತರಬೇತುದಾರ ಮಂಜುನಾಥ ಡಿ. ಮಾತನಾಡಿದರು. ಯುನಿವೆಫ್ ಕರ್ನಾಟಕದ ಅಧ್ಯಕ್ಷ ರಫೀವುದ್ದೀನ್ ಕುದ್ರೋಳಿ ಉಪಸ್ಥಿತರಿದ್ದರು.

ಯುನಿವೆಫ್ ಕರ್ನಾಟಕ ಇದರ ಪ್ರಧಾನ ಕಾರ್ಯದರ್ಶಿ ಯು.ಕೆ.ಖಾಲಿದ್ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾಧ್ಯಕ್ಷ ಸೈಫುದ್ದೀನ್ ಕುದ್ರೋಳಿ ಕುರ್‌ಆನ್ ವಾಚಿಸಿ ಕನ್ನಡಕ್ಕೆ ಅನುವಾದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News