ಉತ್ತರ ಪ್ರದೇಶ ಸರಕಾರದ ವಿರುದ್ಧ ಕಬ್ಬು ಬೆಳೆಗಾರರ ಪ್ರತಿಭಟನೆ
ಲಕ್ನೋ, ಅ.28: ಕಬ್ಬು ಬೆಳೆಯ ಕನಿಷ್ಟ ಬೆಂಬಲ ದರವನ್ನು ಕೇವಲ 10 ರೂ. ಗಳಷ್ಟು ಹೆಚ್ಚಿಸಿರುವ ರಾಜ್ಯ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಕಬ್ಬು ಬೆಳೆಗಾರರು ವಿಧಾನಸಭೆಯ ಮುಂಭಾಗ ಪ್ರತಿಭಟನೆ ನಡೆಸಿ ಮುಖ್ಯಮಂತ್ರಿ ಆದಿತ್ಯನಾಥ್ ವಿರುದ್ಧ ಘೋಷಣೆಗಳನ್ನು ಕೂಗಿದರು.
2 ದಿನಗಳ ಹಿಂದಷ್ಟೇ ರಾಜ್ಯ ಸರಕಾರ ಕಬ್ಬಿಗೆ ಕ್ವಿಂಟಾಲೊಂದಕ್ಕೆ ಕನಿಷ್ಟ ಬೆಂಬಲ ಬೆಲೆಯನ್ನು 10 ರೂ.ನಷ್ಟು ಹೆಚ್ಚಿಸಿತ್ತು. ಇದರಿಂದಾಗಿ ಕ್ವಿಂಟಾಲೊಂದಕ್ಕೆ ಕನಿಷ್ಟ ಬೆಂಬಲ ಬಲೆ 315 ರೂ.ಗಳಾಗಿತ್ತು.
ಕ್ವಿಂಟಾಲೊಂದಕ್ಕೆ 450 ರೂ. ನೀಡುವುದಾಗಿ ಚುನಾವಣೆ ಸಂದರ್ಭ ಭರವಸೆ ನೀಡಿದ್ದ ಬಿಜೆಪಿ ಈಗ ಕೊಟ್ಟಿರುವ ಮಾತನ್ನು ಪಾಲಿಸುತ್ತಿಲ್ಲ ಎಂದು ರೈತರು ಆರೋಪಿಸಿದರು.
ನಿಗದಿತ ಸಮಯದೊಳಗೆ ತಮ್ಮ ಬೇಡಿಕೆ ಈಡೇರದಿದ್ದಲ್ಲಿ ರಾಜ್ಯಾದ್ಯಂತ ಹೋರಾಟ ನಡೆಸುವುದಾಗಿ ಭಾರತೀಯ ಕಿಸಾನ್ ಯುನಿಯನ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ರೈತರು ಆಗ್ರಹಿಸಿದರು.
ಅಲ್ಪ ಪ್ರಮಾಣದ ಬೆಲೆ ಹೆಚ್ಚಳದ ಮೂಲಕ ರಾಜ್ಯ ಸರಕಾರ ರೈತರ ಗಾಯಕ್ಕೆ ಉಪ್ಪು ಸವರುತ್ತಿದೆ ಎಂದು ಪ್ರತಿಭಟನಾನಿರತ ಹರಿನಾಮ್ ಸಿಂಗ್ ಹೇಳಿದ್ದಾರೆ.
ಆಕ್ರೋಶಿತ ರೈತರು ವಿಧಾನಸಭೆ, ರಾಜ್ಯ ಬಿಜೆಪಿ ಮುಖ್ಯ ಕಚೇರಿ ಮುಂಭಾಗ ಕಬ್ಬು ಬೆಳೆಯನ್ನು ಸುಟ್ಟು ಹಾಕಿದರು.