ಭಾರತ-ಬಾಂಗ್ಲಾದೇಶ ನಡುವಿನ ಹಿಂದಿನ ರೈಲುಮಾರ್ಗಗಳಿಗೆ ಮರುಜೀವ
ಅಗರ್ತಲಾ,ಅ.28: 1947ರಲ್ಲಿ ದೇಶದಲ್ಲಿ ವಿಭಜನೆಯ ಬಳಿಕ 12 ಸ್ಥಳಗಳಲ್ಲಿ ಸ್ಥಗಿತಗೊಂಡಿದ್ದ ಭಾರತದೊಂದಿಗಿನ ರೈಲುಮಾರ್ಗಗಳಿಗೆ ಮರುಜೀವ ನೀಡಲು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಬಾಂಗ್ಲಾದೇಶದ ರೈಲ್ವೆ ಸಚಿವ ಮುಜಿಬುಲ್ ಹಕ್ ಅವರು ತಿಳಿಸಿದ್ದಾರೆ.
ಶುಕ್ರವಾರ ಸಂಜೆ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತದ ವಿಭಜನೆಯ ಮೊದಲು ಅಸ್ತಿತ್ವದಲ್ಲಿದ್ದ ಎಲ್ಲ ರೈಲ್ವೆ ಮಾರ್ಗಗಳ ಪುನರಾರಂಭಕ್ಕೆ ನಾವು ನಿರ್ಧರಿಸಿದ್ದೇವೆ. ಈ ವಿಷಯದಲ್ಲಿ ಉಭಯ ಸರಕಾರಗಳು ಪರಸ್ಪರ ಸಹಕರಿಸುತ್ತಿವೆ ಎಂದು ಹೇಳಿದರು.
ಉಭಯ ರಾಷ್ಟ್ರಗಳ ರೋಟರಿ ಕ್ಲಬ್‌ಗಳ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ತ್ರಿಪುರಾಕ್ಕೆ ಭೇಟಿ ನೀಡಿದ್ದ ಅವರು, ತನ್ನ ರಾಷ್ಟ್ರದ ಬ್ರಾಹ್ಮಣಬರಿಯಾ ಜಿಲ್ಲೆಯಲ್ಲಿ ತಿತಾಸ್ ಮತ್ತು ಭೋಯಿರಬ್ ನದಿಗಳ ನಡುವೆ ಭಾರತದ ಆರ್ಥಿಕ ನೆರವಿನೊಂದಿಗೆ ಎರಡನೇ ರೈಲ್ವೆ ಸೇತುವೆಯ ನಿರ್ಮಾಣ ಪೂರ್ಣಗೊಂಡಿದ್ದು, ಶೀಘ್ರವೇ ಉದ್ಘಾಟನೆಗೊಳ್ಳಲಿದೆ. ಢಾಕಾ ಮತ್ತು ಕೋಲ್ಕತಾಗಳ ನಡುವೆ ಈಗಾಗಲೇ ಮೈತ್ರಿ ಎಕ್ಸ್‌ಪ್ರೆಸ್ ರೈಲು ಸಂಚರಿಸುತ್ತಿದ್ದು, ಬಾಂಗ್ಲಾದೇಶದ ಖುಲ್ನಾ ಮತ್ತು ಕೋಲ್ಕತಾಗಳ ನಡುವೆ ಬಂಧನ್ ಎಕ್ಸಪ್ರೆಸ್ ಹೆಸರಿನ ಇನ್ನೊಂದು ರೈಲು ಮುಂದಿನ ತಿಂಗಳು ಕಾರ್ಯಾರಂಭಗೊಳ್ಳುವ ಸಾಧ್ಯತೆಯಿದೆ ಎಂದರು.
ಪ್ರಸಕ್ತ ನಡೆಯುತ್ತಿರುವ 15 ಕಿ.ಮೀ.ಉದ್ದದ ಅಗರ್ತಲಾ-ಅಖಾವುರಾ ರೈಲುಮಾರ್ಗ ಯೋಜನೆಯ ಕಾಮಗಾರಿಯ ಪ್ರಗತಿಯು ತೃಪ್ತಿಕರವಾಗಿದ್ದು, ಇದಕ್ಕಾಗಿ ಬಾಂಗ್ಲಾದೇಶದ ಭಾಗದಲ್ಲಿ ಭೂಸ್ವಾಧೀನ ಪ್ರಕ್ರಿಯೆಯು ಪೂರ್ಣಗೊಂಡಿದೆ ಎಂದು ಹಕ್ ತಿಳಿಸಿದರು.
ಈ ಯೋಜನೆಗಾಗಿ ಭಾರತದ ಕಡೆಯಲ್ಲಿಯೂ ಭೂಸ್ವಾಧೀನ ಪ್ರಕ್ರಿಯೆಯು ಪೂರ್ಣ ಗೊಂಡಿದೆ ಎಂದು ಪಶ್ಚಿಮ ತ್ರಿಪುರಾ ಜಿಲ್ಲಾಧಿಕಾರಿ ಮಿಲಿಂದ ರಾಮಟೇಕೆ ಅವರು ಇದಕ್ಕೂ ಮುನ್ನ ಸುದ್ದಿಗಾರರಿಗೆ ತಿಳಿಸಿದ್ದರು.
15 ಕಿ.ಮೀ.ಉದ್ದದ ಈ ರೈಲುಮಾರ್ಗವು ಭಾರತದಲ್ಲಿ ಐದು ಕಿ.ಮೀ. ಇದ್ದು ಉಳಿದ ಭಾಗ ಬಾಂಗ್ಲಾದೇಶದಲ್ಲಿ ಹಾದು ಹೋಗಲಿದೆ.
ಈ ಮಾರ್ಗದಲ್ಲಿ ಹಳಿಗಳನ್ನು ಅಳವಡಿಸುವ ಕಾರ್ಯ ಮುಂದಿನ ವರ್ಷ ಪೂರ್ಣಗೊಳ್ಳಲಿದೆ ಎಂದು ಹಕ್ ತಿಳಿಸಿದರು.
ಈ ರೈಲುಮಾರ್ಗವು ಬಾಂಗ್ಲಾ ದೇಶದ ಮೂಲಕ ಪ.ಬಂಗಾಳ ಮತ್ತು ತ್ರಿಪುರಾವನ್ನು ಸಂಪರ್ಕಿಸುವುದರಿಂದ ಕೇಂದ್ರ ಸರಕಾರವು ಈ ಬಗ್ಗೆ ತೀವ್ರ ಆಸಕ್ತಿ ಹೊಂದಿದೆ.
ಅಗರ್ತಲಾ ಮತ್ತು ಕೋಲ್ಕತಾ ನಡುವಿನ 1,700ಕಿ.ಮೀ.ಉದ್ದದ ರೈಲುಮಾರ್ಗ ಸಿಲಿಗುರಿಯಲ್ಲಿನ ‘ಚಿಕನ್ ನೆಕ್’ ಮೂಲಕ ಹಾದು ಹೋಗುತ್ತಿದ್ದು, ನೂತನ ಮಾರ್ಗವು ಬಳಕೆಗೆ ಲಭ್ಯವಾದ ಬಳಿಕ ಈ ಅಂತರವು 350 ಕಿ.ಮೀ.ಗಳಷ್ಟು ಕಡಿಮೆಯಾಗಲಿದೆ.