ಸುದತ್ತ ಜೈನ್ ಉಪವಾಸ ಅಂತ್ಯ
ಮೂಡುಬಿದಿರೆ,ಅ.28: ವೇಣೂರು ರೇಂಜರ್ ಅಮಾಯಕನೋರ್ವನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಅಕ್ಟೋಬರ್ 12ರಿಂದ ದರಣಿ, ಕಳೆದ 10ದಿನಗಳಿಂದ ಹೋರಾಟಗಾರ ಸುದತ್ತ ಜೈನ್ ನಡೆಸುತ್ತಿದ್ದ ಉಪವಾಸ ಸತ್ಯಾಗ್ರಹವು ಶನಿವಾರ ಸಾಯಂಕಾಲ ಅಂತ್ಯಗೊಂಡಿದೆ.
ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿ'ಸೋಜಾ ಅವರು ಶನಿವಾರ ಸಾಯಂಕಾಲ ಸುದತ್ತ ಜೈನ್ ದಾಖಲಾಗಿದ್ದ ಮೂಡುಬಿದಿರೆ ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ, ಉಪವಾಸ ಸತ್ಯಾಗ್ರಹವನ್ನು ಕೈಬಿಡುವಂತೆ ವಿನಂತಿಸಿದ್ದರು. ಕಾನೂನು ರೀತಿಯ ಹೋರಾಟಕ್ಕೆ ಐವನ್ ಬೆಂಬಲ ನೀಡುತ್ತೇನೆಂದು ಭರವಸೆ ನೀಡಿದ ಹಿನ್ನಲೆಯಲ್ಲಿ ಸುದತ್ತ ಜೈನ್ ಉಪವಾಸ ಸತ್ಯಾಗ್ರಹವನ್ನು ಸೀಯಾಳ ಕುಡಿಯುವುದರೊಂದಿಗೆ ಹಿಂತೆಗೆದುಕೊಂಡಿದ್ದಾರೆ.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕೆ.ಪಿ ಜಗದೀಶ್ ಅಧಿಕಾರಿಯವರು ಕೂಡ ಶನಿವಾರ ಭೇಟಿ ನೀಡಿ ಉಪವಾಸ ಹಿಂತೆಗೆದುಕೊಳ್ಳುವಂತೆ ಆಗ್ರಹಿಸಿದ್ದರು.
ಅಬೂಬಕ್ಕರ್ ಶಿರ್ತಾಡಿ, ಅಲ್ವಿನ್ ಡಿ'ಸೋಜಾ, ಪ್ರಶಾಂತ್ ಕುಮಾರ್, ರಾಜೇಂದ್ರ ಬರ್ಕೆ, ನಾರಾಯಣ ಮಾಂಟ್ರಾಡಿ, ಅನಿತಾ ಜೈನ್ ಉಪಸ್ಥಿತರಿದ್ದರು.