×
Ad

ಮಾದಕ ಜಾಲದಲ್ಲಿ ವಿದ್ಯಾರ್ಥಿಗಳು: ಹೆಸರಿನ ಗೌಪ್ಯತೆ ಕಾಪಾಡಲು ಎಸ್‌ಐಓ ಆಗ್ರಹ

Update: 2017-10-28 20:45 IST

ಮಂಗಳೂರು, ಅ. 27: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಹಲವಾರು ವರ್ಷಗಳಿಂದ ಹಲವಾರು ಕಾಲೇಜು ಕ್ಯಾಂಪಸ್ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಡ್ರಗ್ಸ್ ಮತ್ತು ವಿಶೇಷವಾಗಿ ಗಾಂಜಾದಂತಹ ಮಾದಕ ದ್ರವ್ಯ ಮತ್ತು ಅಮಲು ಪದಾರ್ಥಗಳು ವ್ಯಾಪಕವಾಗುತ್ತಿದೆ. ಜಿಲ್ಲೆಯಲ್ಲಿ ಮಾದಕ ದ್ರವ್ಯ ಮತ್ತು ಅಮಲು ಪದಾರ್ಥಗಳ ಜಾಲದಲ್ಲಿ ವಿದ್ಯಾರ್ಥಿಗಳು ಪೊಲೀಸರ ಕೈಗೆ ಸಿಕ್ಕಿ ಬೀಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಇಂತಹ ಕುಕೃತ್ಯಗಳಲ್ಲಿ ಭಾಗಿಯಾಗುವ ವಿದ್ಯಾರ್ಥಿಗಳ ಹೆಸರನ್ನು ಬಹಿರಂಗಪಡಿಸದೆ, ಅವರಿಗೆ ಸೂಕ್ತವಾದ ಕೌನ್ಸೆಲಿಂಗ್ ನಡೆಸಿ, ಸಮಾಜದ ಮುಖ್ಯವಾಹಿನಿಗೆ ತರಬೇಕು. ಆ ಮೂಲಕ ಸತ್ಪ್ರಜೆಯಾಗಿ ಬಾಳಲು ಅವಕಾಶ ನೀಡಬೇಕು ಎಂದು ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಝೇಶನ್ ಆಫ್ ಇಂಡಿಯಾ (ಎಸ್‌ಐಓ) ಆಗ್ರಹಿಸಿದೆ.

ಡ್ರಗ್ ಮಾರಾಟ ಸೇರಿದಂತೆ ವಿವಿಧ ಪ್ರಕರಣಗಳಿಗೆ ಸಂಬಂಧಿಸಿ ಕಳೆದ ಮೂರು ವಾರಗಳಿಂದ ವಿವಿಧ ಕಡೆಗಳಲ್ಲಿ ಕಾರ್ಯಾಚರಣೆ ನಡೆಸಿರುವ ಪೊಲೀಸರ ಕ್ರಮವು ಶ್ಲಾಘನೀಯ. ಇಂದು ಡ್ರಗ್ ಮಾಫಿಯಾವು ಕ್ಯಾಂಪನ್‌ಗಳನ್ನು ಗುರಿಯಾಗಿಸಿ ಕಾರ್ಯ ನಿರ್ವಸುತ್ತಿದೆ. ಇದಕ್ಕೆ ವಿದ್ಯಾರ್ಥಿಗಳಿಗೆ ವಿವಿಧ ಆಮಿಷಗಳನ್ನೊಡ್ಡಿ ಬಳಸುತ್ತಿದ್ದು, ವಿದ್ಯಾರ್ಥಿಗಳು ತಮಗರಿಲ್ಲದಂತೆಯೇ ಈ ಖೆಡ್ಡಾಕ್ಕೆ ಬೀಳುತ್ತಿದ್ದಾರೆ. ಪೊಲೀಸರ ಕೈಗೆ ಅಮಾಯಕ ದ್ಯಾರ್ಥಿಗಳು ಸಿಕ್ಕಿ ಬೀಳುತ್ತಿದ್ದು, ಇದು ಪತ್ರಿಕೆಗಳಲ್ಲಿ ಸುದ್ದಿಯಾಗಿ ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲಿಯೂ ಹರಿದಾಡುತ್ತದೆ. ವಿದ್ಯಾರ್ಥಿಗಳ ಹೆಸರನ್ನು ಬಹಿರಂಗಗೊಳಿಸುವುದರಿಂದ ವಿದ್ಯಾರ್ಥಿಗಳ ಭವಿಷ್ಯವು ಹಾಳಾಗುವ ಸಾಧ್ಯತೆಗಳು ಹೆಚ್ಚಾಗಿರುವುದರಿಂದ ಹೆಸರಿನ ಗೌಪ್ಯತೆಯನ್ನು ಕಾಪಾಡುವುದು ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಇಂತಹ ಕೃತ್ಯಗಳಲ್ಲಿ ಭಾಗಿಯಾಗುವ ವಿದ್ಯಾರ್ಥಿಗಳ ಹೆಸರನ್ನು ಬರಂಗಪಡಿಸದೆ, ಅವರಿಗೆ ಸೂಕ್ತವಾದ ಕೌನ್ಸೆಲಿಂಗ್ ನಡೆಸಿ, ಸಮಾಜದ ಮುಖ್ಯವಾಹಿನಿಗೆ ತರಬೇಕು. ಅಲ್ಲದೆ, ಡ್ರಗ್ ಜಾಲದ ಮೂಲವನ್ನು ಪತ್ತೆ ಹಚ್ಚಿ ಮೂಲೋತ್ಪಾಟನೆ ಮಾಡಲು ಸೂಕ್ತವಾದ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಎಸ್‌ಐಓ ಜಿಲ್ಲಾ ಕ್ಯಾಂಪಸ್ ಕಾರ್ಯದರ್ಶಿ ಅಫ್ನಾನ್ ಹಸನ್ ಪತ್ರಿಕಾ ಪ್ರಕಟನೆಯಲ್ಲಿ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News