ನ್ಯಾಯಾಧೀಶರ ನೇಮಕಾತಿಯಲ್ಲಿ ವಿಳಂಬ: ಕೇಂದ್ರ ಸರಕಾರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್

Update: 2017-10-28 15:15 GMT

ಹೊಸದಿಲ್ಲ್ಲಿ, ಅ. 28: ನ್ಯಾಯಾಂಗ ನೇಮಕಾತಿಯಲ್ಲಿ ವಿಳಂಬ ಆಗುತ್ತಿರುವ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಕೇಂದ್ರ ಸರಕಾರಕ್ಕೆ ಶುಕ್ರವಾರ ನೋಟಿಸು ಜಾರಿ ಮಾಡಿದೆ. ಸಾಂವಿಧಾನಿಕ ಪೀಠ ಎರಡು ವರ್ಷಗಳ ಹಿಂದೆ ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗದ ರಚನೆಯನ್ನು ರದ್ದುಗೊಳಿಸಿತ್ತು ಹಾಗೂ ಮೆಮರಾಂಡಮ್ ಆಫ್ ಪ್ರೊಸೀಜರ್ (ಎಂಒಪಿ) ಅನ್ನು ಮರುರಚಿಸುವಂತೆ ಸರಕಾರಕ್ಕೆ ಸೂಚಿಸಿತ್ತು. ಇದರಿಂದ ನ್ಯಾಯಾಂಗ ನೇಮಕಾತಿ ವಿಳಂಬವಾಗುತ್ತಿದೆ ಎಂದು ನ್ಯಾಯವಾದಿಯೊಬ್ಬರು ಮನವಿ ಸಲ್ಲಿಸಿದ್ದರು. ಈ ಮನವಿ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಕೇಂದ್ರ ಸರಕಾರಕ್ಕೆ ನೊಟೀಸು ಜಾರಿ ಮಾಡಿದೆ.

ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗ ಅಸಾಂವಿಧಾನಿಕ ಎಂದು ಘೋಷಿಸಿದ ಬಳಿಕ ಎಂಒಪಿಯ ವಿಷಯಗಳಿಗೆ ಸಂಬಂಧಿಸಿ ಸರಕಾರ ಹಾಗೂ ಸುಪ್ರೀಂ ಕೋರ್ಟ್ ಕೊಲಿಜಿಯಂ ನಡುವೆ ತಿಕ್ಕಾಟ ಆರಂಭವಾಗಿತ್ತು.

  ನ್ಯಾಯಮೂರ್ತಿ ಎ.ಕೆ. ಗೋಯಲ್ ಹಾಗೂ ಯು.ಯು. ಲಲಿತ್ ಅವರನ್ನು ಒಳಗೊಂಡ ಪೀಠ, ಆ್ಯಮಿಕಸ್ ಕ್ಯೂರಿಯಾಗಿ ನೆರವಾಗುವಂತೆ ಹಿರಿಯ ವಕೀಲ ಕೆ.ವಿ. ವಿಶ್ವನಾಥನ್ ಅವರನ್ನು ಕೋರಿದೆ. ವಿಚಾರಣೆಯನ್ನು ನವೆಂಬರ್ 14ಕ್ಕೆ ನಿಗದಿಪಡಿಸಿರುವ ಪೀಠ, ವಿಚಾರಣೆ ವೇಳೆ ವೈಯುಕ್ತಿಕವಾಗಿ ಹಾಜರಿರುವಂತೆ ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ಅವರಿಗೆ ಸೂಚಿಸಿದೆ.

ನ್ಯಾಯವಾದಿ ಆರ್.ಪಿ. ಲೂಥ್ರಾ ದೂರು ದಾಖಲಿಸಿದ ಬಳಿಕ ಸುಪ್ರೀಂ ಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಎಂಒಪಿ ಅಂತಿಮಗೊಳಿಸದೆ ವಿವಿಧ ಉಚ್ಚ ನ್ಯಾಯಾಲಯಗಳಲ್ಲಿ ನೇಮಕಾತಿ ಮಾಡಿರುವುದನ್ನು ಪ್ರಶ್ನಿಸಿ ಲೂಥ್ರಾ ಮೊದಲು ದಿಲ್ಲಿ ಉಚ್ಚ ನ್ಯಾಯಾಲಯದ ಮೆಟ್ಟಿಲೇರಿದ್ದರು. ಅನಂತರ ಅವರು ಸುಪ್ರೀಂ ಕೋರ್ಟ್‌ನಲ್ಲಿ ದಾವೆ ಹೂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News