×
Ad

ಗ್ಲೋಬಲ್ ಆಸ್ಪತ್ರೆ ಐದನೇ ವರ್ಷಾಚರಣೆ

Update: 2017-10-28 21:01 IST

ಮಂಗಳೂರು, ಅ. 28: ನಗರದ ಬೋಳೂರು ಮಠದಕಣಿಯಲ್ಲಿರುವ ಗ್ಲೋಬಲ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಆರಂಭದ ಐದನೇ ವರ್ಷಾಚರಣೆಯನ್ನು ಆಸ್ಪತ್ರೆಯಲ್ಲಿಂದು ಆಡಳಿತ ಮಂಡಳಿ ಮತ್ತು ಸಿಬಂದಿಗಳು ಸಂಭ್ರಮದಿಂದ ಆಚರಿಸಿದರು.

ಕೇಕ್ ಕತ್ತರಿಸಿ, ಮೊಂಬತ್ತಿ ಉರಿಸುವ ಮೂಲಕ ವರ್ಷಾಚರಣೆಗೆ ಚಾಲನೆ ನೀಡಿ ಮಾತನಾಡಿದ ಯೆನೆಪೋಯ ವಿ. ವಿ. ನಿರ್ದೇಶಕ ಪರ್ಹಾದ್ ಯೆನೆಪೋಯ "ಪಂಚ ತಾರಾ ಹೋಟೆಲುಗಳಲ್ಲಿ ಅಲ್ಲಿಯ ಸಿಬಂದಿಗಳು ನೀಡಿದ ಸೇವೆಗೆ ತೃಪ್ತಿಗೊಂಡು ಟಿಪ್ಸ್ ನೀಡಿ ಬರುತ್ತೇವೆ, ಆದರೆ ಆಸ್ಪತ್ರೆಗಳಲ್ಲಿ ಎಷ್ಟೇ ಉತ್ತಮ ಸೇವೆ ನೀಡಿದರೂ ತೃಪ್ತಿ ಹೊಂದಿ ಟಿಪ್ಸ್ ನೀಡುವವರು ಕಡಿಮೆ. ಆದ್ದರಿಂದ ಆರೋಗ್ಯ ಕ್ಷೇತ್ರದಲ್ಲಿ ರೋಗಿಗಳ ಆರೈಕೆ ಒಂದು ಸವಾಲು. ರೋಗಿಗಳಿಗೆ ತೃಪ್ತಿಯ ಜತೆಯ ಸೇವೆ ನೀಡಿದ ನಮಗೂ ತೃಪ್ತಿಯಾಗಬೇಕು" ಎಂದರು.

ನಮ್ಮ ದೇಹವನ್ನು ನಾವೇ ನಿಯಂತ್ರಿಸಬೇಕೆಂದ ಅವರು, ಈ ಪರಿಸರದಲ್ಲಿ ಕಳೆದ ಐದು ವರ್ಷಗಳಿಂದ ಉತ್ತಮ ಸೇವೆ ನೀಡಿ ಬೆಳೆಯುತ್ತಿರು ಗ್ಲೋಬಲ್ ಆಸ್ಪತ್ರೆ ಇನ್ನಷ್ಟು ಎತ್ತರಕ್ಕೇರಲಿ ಎಂದು ಹಾರೈಸಿದರು.

ಗ್ಲೋಬಲ್ ಆಸ್ಪತ್ರೆ ನಿರ್ದೇಶಕ ಡಾ. ಸುಶೀಲ್ ಜತ್ತನ್ನ ಮಾತನಾಡಿ, ಆಸ್ಪತ್ರೆ ಆರಂಭಿಸಿದ ಉದ್ದೇಶ, ಎದುರಿಸಿದ ಸವಾಲುಗಳನ್ನು ವಿವರಿಸಿ, ಆರಂಭದ ದಿನಗಳಿಂದ ಹಂತ ಹಂತವಾಗಿ ಬೆಳೆದ ಆಸ್ಪತ್ರೆಗೆ ಇಂದು ಜಿಲ್ಲೆ ಮಾತ್ರವಲ್ಲ ಹೊರ ಜಿಲ್ಲೆಗಳಿಂದಲೂ ರೋಗಿಗಳು ಬರುತ್ತಿದ್ದಾರೆ. ಮಧ್ಯಮ, ಕೆಳ ಮಧ್ಯಮ ವರ್ಗದ ಜನರನ್ನು ಗಮನದಲ್ಲಿರಿಸಿಕೊಂಡು ಉತ್ತಮ ಸೇವೆ ನೀಡುವುದು ನಮ್ಮ ಗುರಿ. ಮುಂದಿನ ದಿನಗಳಲ್ಲಿ ಆಸ್ಪತ್ರೆಯಲ್ಲಿ ಇನ್ನಷ್ಟು ಸೌಲಭ್ಯಗಳೊಂದಿಗೆ ಸುಸಜ್ಜಿತ, ಗುಣಮಟ್ಟದ  ಆರೋಗ್ಯ ಸೇವೆ ನೀಡಲಾಗುವುದು ಎಂದು ಹೇಳಿದರು. ಇನ್ನೊಬ್ಬ ನಿರ್ದೇಶಕ ಡಾ. ಸುಧರಾಮ ರೈ ಶುಭ ಕೋರಿದರು.

ಮಾರುಕಟ್ಟೆ ವಿಭಾಗದ ಭಾಸ್ಕರ ಆರಸ್, ವಿ4 ಮೀಡಿಯಾದ ರೋಸ್ಲಿನ್ ಮುಖ್ಯ ಅತಿಥಿಯಾಗಿದ್ದರು. ಈ ಸಂದರ್ಭದಲ್ಲಿ ಆಸ್ಪತ್ರೆ ಸಿಬಂದಿಗಳಿಗಾಗಿ ನಡೆದ ಲಕ್ಕಿ ಕೂಪನ್ ಡ್ರಾದಲ್ಲಿ ಡಾ. ಲೀಲಾ ಮನುಕೋತ್ ವಿಜೇತರಾದರು. ಶೃತಿ, ಸುನಿಲ್, ರೋಹಿತ್ ಸೇರಿದಂತೆ ಸಿಬಂದಿಗಳು ಉಪಸ್ಥಿತರಿದ್ದರು.
ಡಾ. ಧನ್ಯ ಸ್ವಾಗತಿಸಿ, ಆಸ್ಪತ್ರೆ ಪ್ರಬಂಧಕಿ ಫರ್ಜನಾ ವಂದಿಸಿದರು. ಡಾ. ರಾಧಿಕಾ ಕಾರ್ಯಕ್ರಮ ನಿರ್ವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News