ನಾಡೋಜ ಸಾರಾ ಅಬೂಬಕರ್‌ರಿಂದ ರಾಜ್ಯೋತ್ಸವ ಕನ್ನಡ ಭುವನೇಶ್ವರಿ ಮೆರವಣಿಗೆ ಉದ್ಘಾಟನೆ
ಮಂಗಳೂರು, ಅ. 28: ಸಮಸ್ತ ಕನ್ನಡಿಗರ ಸಂಭ್ರಮಾಚಾರಣೆಯ ರಾಜ್ಯೋತ್ಸವದ ಪ್ರಯುಕ್ತ ನವಂಬರ್ 1ರಂದು ಬೆಳಗ್ಗೆ 7.30ಕ್ಕೆ ನಗರದ ಬಲ್ಮಠ ರಸ್ತೆಯ ಅಂಬೇಡ್ಕರ್ ವೃತ್ತ, ಜ್ಯೋತಿ ಜಂಕ್ಷನ್‌ನಲ್ಲಿ ತಾಯಿ ಭುವನೇಶ್ವರಿಯ ಮೆರವಣಿಗೆಯನ್ನು ಹಿರಿಯ ಸಾಹಿತಿ ನಾಡೋಜ ಸಾರಾ ಅಬೂಬಕರ್ ಉದ್ಘಾಟಿಸಿಲಿದ್ದಾರೆ. ಮತ್ತು ಶಾಂತಲ ಪ್ರಶಸ್ತಿ ಪುರಸ್ಕೃತ ಉಳ್ಳಾಲ ಮೋಹನ್ ಕುಮಾರ್ ಅವರು ಭುವನೇಶ್ವರಿ ದೇವಿಗೆ ಪುಷ್ಪಾರ್ಚನೆ ಮಾಡಲಿರುವರು.
ಅಪರಾಹ್ನ 3.15ಕ್ಕೆ ಮಂಗಳೂರು ಪುರಭವನದಲ್ಲಿ ಕವಿಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮ ಜರಗಲಿದ್ದು, ಪದ್ಮಭೂಷಣ ಪುರಸ್ಕೃತ ಡಾ.ಬಿ.ಎಂ ಹೆಗ್ಡೆ ದೀಪ ಬೆಳಗಿಸಿ ರಾಜ್ಯೋತ್ಸವ ಸಂದೇಶ ನೀಡಲಿದ್ದಾರೆ. ಇದೇ ಸಂದರ್ಭ ಹೊರನಾಡು ಸ್ಥಳೀಯ ಬಾಲಪ್ರತಿಭೆಗಳಿಗೆ ‘ಸಾಧಕ ಪುರಸ್ಕೃತ’ ನೀಡಿ ಗೌರವಿಸಲಾಗುವುದು.
ಕನ್ನಡ ಭುವನೇಶ್ವರಿಯ ಟ್ಯಾಬ್ಲೊ ಹಾಗೂ ವಿವಿಧ ಇಲಾಖೆಗಳ ಸ್ತಬ್ಧ ಚಿತ್ರಗಳು ಪಾಲ್ಗೊಳ್ಳಲಿದ್ದು, ಜಿಲ್ಲೆಯ ಎಲ್ಲಾ ಕನ್ನಡ ಪರ ಸಂಘ ಸಂಸ್ಥೆಗಳು, ಸಂಘಟನೆಗಳು ತಮ್ಮ ಸಂಸ್ಥೆಗಳ ನಾಮಾಂಕಿತ ಬ್ಯಾನರ್‌ಗಳೊಂದಿಗೆ ಮೆರವಣಿಗೆಯಲ್ಲಿ ಭಾಗವಹಿಸುವಂತೆ ಕೋರಲಾಗಿದೆ.
ನಾಡು-ನುಡಿಯನ್ನು, ಸಂಸ್ಕೃತಿಯನ್ನು ಪ್ರತಿಬಿಂಬಿಸುವ ವೇಷಧಾರಿ ತಂಡಗಳು, ದಫ್, ತಾಲೀಮು, ಕೋಲಾಟ, ಗೊಂಬೆ ಕುಣಿತ, ಜನಪದ ಕುಣಿತ, ಹುಲಿ ವೇಷ ಇತ್ಯಾದಿ ಜಿಲ್ಲೆಯ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಸಾಂಸ್ಕೃತಿಕ ತಂಡಗಳು ಈ ಸಂಭ್ರಮಾಚರಣೆಯ ಮೆರವಣಿಗೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಪ್ರಕಟನೆಯಲ್ಲಿ ಮನವಿ ಮಾಡಿದ್ದಾರೆ.